ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ವಿದ್ಯಾನಿಧಿ | 34,596 ವಿದ್ಯಾರ್ಥಿಗಳಿಗೆ ₹12.20 ಕೋಟಿ ಪಾವತಿ

‘ರೈತ ವಿದ್ಯಾನಿಧಿ’ ತಲುಪಿಸುವಲ್ಲಿ ಐದನೇ ಸ್ಥಾನ ಪಡೆದ ಜಿಲ್ಲೆ
Last Updated 26 ಮೇ 2022, 6:02 IST
ಅಕ್ಷರ ಗಾತ್ರ

ಕಲಬುರಗಿ: ‘ರೈತ ವಿದ್ಯಾನಿಧಿ’ ಯೋಜನೆ ಅಡಿ ಜಿಲ್ಲೆಯ 34,596 ವಿದ್ಯಾರ್ಥಿಗಳು ಈಗಾಗಲೇ ₹ 12.20 ಕೋಟಿ ಶಿಷ್ಯವೇತನ ಪಡೆದುಕೊಂಡಿದ್ದಾರೆ. ಈ ಯೋಜನೆಯ ಲಾಭವನ್ನು ರೈತರ ಮಕ್ಕಳಿಗೆ ತಲುಪಿಸುವಲ್ಲಿ ಜಿಲ್ಲೆಯು ರಾಜ್ಯದಲ್ಲಿ ಐದನೇ ಸ್ಥಾನ ಪಡೆದಿದೆ.

ರೈತರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಉದ್ದೇಶದಿಂದ 2021ರ ಜುಲೈ 28ರಂದು ರಾಜ್ಯ ಸರ್ಕಾರ ಈ ಶಿಷ್ಯವೇತನ ಯೋಜನೆ ಜಾರಿಗೊಳಿಸಿದೆ. ಎಂಟು ತಿಂಗಳಲ್ಲಿ ಅಂದರೆ; 2022ರ ಮಾರ್ಚ್‌ 31ರವರೆಗೆ ನೋಂದಣಿ ಮಾಡಿಕೊಂಡ ಎಲ್ಲ ವಿದ್ಯಾರ್ಥಿಗಳಿಗೂ ಹಣ ಸಂದಾಯ ಮಾಡಲಾಗಿದೆ.

ಒಟ್ಟು 34,682 ರೈತರ ಮಕ್ಕಳು ಈ ಶಿಷ್ಯ ವೇತನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 34,596 ಮಂದಿಯ ಖಾತೆಗೆ ಹಣ ಜಮೆಯಾಗಿದೆ. ತಾಂತ್ರಿಕ ಅಂಶಗಳ ಕಾರಣ ಇನ್ನೂ 86 ಮಂದಿಗೆ ಮಾತ್ರಸಂದಾಯವಾಗಬೇಕು. ಕಲಬುರಗಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 13,945 ವಿದ್ಯಾರ್ಥಿಗಳು, ಚಿಂಚೋಳಿ ತಾಲ್ಲೂಕಿನಲ್ಲಿ ಅತಿ ಕಡಿಮೆ 1731 ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ.

ಆಧಾರ್ ಲಿಂಕ್‌ ಆಗದ ಕಾರಣಕ್ಕೆ ಕೆಲವು ಅರ್ಜಿಗಳು ಬಾಕಿ ಇದ್ದು, ಸಂಬಂಧಪಟ್ಟ ಕಾಲೇಜುಗಳಿಗೆ ಮಾಹಿತಿ ನೀಡಿ, ದೋಷ ಸರಿಪಡಿಸುವಂತೆ ತಿಳಿಸಲಾಗಿದೆ. ತಾಂತ್ರಿಕ ಸಮಸ್ಯೆ ಬಗೆಹರಿದ ಕೂಡಲೇ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಯಾರು ವಿದ್ಯಾನಿಧಿ ಪಡೆಯಬಹುದು?: ವಿದ್ಯಾರ್ಥಿಗಳಾಗಿದ್ದರೆ ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣಕ್ಕೆ, ವಿದ್ಯಾರ್ಥಿನಿ ಆಗಿದ್ದರೆ 8ನೇ ತರಗತಿಯಿಂದ ಮುಂದಿನ ಶಿಕ್ಷಣಕ್ಕೆ ಪ್ರತಿ ವರ್ಷ ಈ ಶಿಷ್ಯವೇತನ ಪಡೆಯಬಹುದು.ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳಲ್ಲಿ ಪದವಿ ಪೂರ್ವ ತರಗತಿಯಿಂದ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶ ಪಡೆಯುತ್ತಿರಬೇಕು. ಕನಿಷ್ಠ ₹ 2000ದಿಂದ ಗರಿಷ್ಠ ₹ 11,000 ವರೆಗೆ ಶಿಷ್ಯವೇತನ ನೀಡಲಾಗುತ್ತಿದೆ.

ರಾಜ್ಯದ ಯಾವುದೇ ಭಾಗದ‌ಲ್ಲಿ ಉಳುಮೆ ಮಾಡುವ ಅಥವಾ ಕೃಷಿ ಭೂಮಿ ಹೊಂದಿದ ರೈತರ ಎಲ್ಲ ಮಕ್ಕಳೂ ಇದಕ್ಕೆ ಅರ್ಹರು. ತಂದೆ ಅಥವಾ ತಾಯಿ ಹೆಸರಿನಲ್ಲಿ ಇಲ್ಲವೇ ಫಲಾನುಭವಿ ಹೆಸರಿನಲ್ಲಿ ಜಮೀನು ಇರಬೇಕು. ಸ್ವಂತ ಮಕ್ಕಳು, ದತ್ತು ಪಡೆದ ಮಕ್ಕಳೂ ಪಡೆಯಬಹುದು. ಮೆರಿಟ್‌ನಲ್ಲಿ ಪಾಸಾಗಿ ಸೀಟು ಪಡೆದವರು, ವಿವಿಧ ಅರ್ಹತಾ ಪರೀಕ್ಷೆ ಪಾಸಾದವರು, ಈಗಾಗಲೇ ಯಾವುದೇ ಶಿಷ್ಯವೇತನ ಪಡೆದಿದ್ದರೂ ರೈತ ವಿದ್ಯಾನಿಧಿ ಪಡೆಯಬಹುದು. ಒಂದು ವರ್ಷದಲ್ಲಿ ಎರಡು ಕೋರ್ಸ್‌ ಮಾಡಿದ್ದರೆ ಒಂದಕ್ಕೆ ಮಾತ್ರ ನೀಡಲಾಗುತ್ತದೆ.

ಒಂದು ಬಾರಿ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣ ಹೊಂದಿ, ಮತ್ತೊಮ್ಮೆಗೆ ಪಾಸ್‌ ಆಗಿದ್ದರೆ ಆ ಅವಧಿಯ ಶಿಷ್ಯವೇತನ ಬರುವುದಿಲ್ಲ.

ಕಳೆದ ವರ್ಷ ಕೇವಲ ಹೊಲ ಹೊಂದಿರ ರೈತರ ಮಕ್ಕಳಿಗೆ ಮಾತ್ರ ಈ ಯೋಜನೆಯ ಲಾಭ ಬಂದಿದೆ. ಈ ವರ್ಷನೇಕಾರರು ಹಾಗೂ ಮೀನುಗಾರರ ಮಕ್ಕಳಿಗೂ ವಿಸ್ತರಣೆ ಮಾಡಲಾಗಿದೆ.

*
ಯೋಜನೆ ಲಾಭ ಪಡೆಯಲು ಪೋರ್ಟಲ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗಿದ್ದರೆ ಕೆಲವೇ ದಿನಗಳಲ್ಲಿ ಶಿಷ್ಯವೇತನ ಖಾತೆಗೆ ಹೋಗುತ್ತದೆ
-ಡಾ.ರತೇಂದ್ರನಾಥ ಸೂಗುರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT