ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಡಿ | ಬಿಸಿಯೂಟ ಸೇವನೆ: 30ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

ಚಿತ್ತಾಪುರ ತಾಲ್ಲೂಕಿನ ಕನಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ
Published 2 ಜುಲೈ 2024, 5:06 IST
Last Updated 2 ಜುಲೈ 2024, 5:06 IST
ಅಕ್ಷರ ಗಾತ್ರ

ವಾಡಿ: ಅಕ್ಷರದಾಸೋಹ ಯೋಜನೆ ಮಧ್ಯಾಹ್ನದ ಬಿಸಿಯೂಟ ಸೇವಿಸಿ 30ಕ್ಕೂ ಅಧಿಕ ವಿದ್ಯಾರ್ಥಿಗಳು ವಾಂತಿ–ಭೇದಿಯಿಂದ ಬಳಲಿ ಸುಸ್ತಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಚಿತ್ತಾಪುರ ತಾಲ್ಲೂಕಿನ ಸನ್ನತಿ ಗ್ರಾ.ಪಂ ವ್ಯಾಪ್ತಿಯ ಕನಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜರುಗಿದೆ.

ಘಟನೆಯಲ್ಲಿ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, 5-6 ವಿದ್ಯಾರ್ಥಿಗಳ ಆರೋಗ್ಯ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಮಧ್ಯಾಹ್ನದ ಬಿಸಿಯೂಟ ಸೇವಿಸಿದ ತಾಸಿನ ಬಳಿಕ ಶಾಲೆಯಲ್ಲಿಯೇ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಕೆಲವರಲ್ಲಿ ವಾಂತಿ–ಭೇದಿ, ಕೈಕಾಲು ಸೆಳೆತ, ತಲೆಸುತ್ತು ಉಂಟಾಗಿದೆ.

ಗಾಬರಿಗೊಂಡ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಸಮೀಪದ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗಂಭೀರ ಸಮಸ್ಯೆ ಕಂಡು ಬಂದ 5 ವಿದ್ಯಾರ್ಥಿಗಳನ್ನು ವಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರೆ, ಇನ್ನುಳಿದ 3-4 ವಿದ್ಯಾರ್ಥಿಗಳನ್ನು ಪೋಷಕರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ.

ಸಂಜೆಯಾಗುತ್ತಿದ್ದಂತೆ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ್ದ ಇನ್ನುಳಿದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದ್ದರಿಂದ ಗ್ರಾಮದಲ್ಲಿ ಡಂಗುರ ಸಾರಿಸಿ ಮಕ್ಕಳನ್ನು ಆಸ್ಪತ್ರೆಗೆ ಕರೆಸಿಕೊಂಡು ಅರೋಗ್ಯ ತಪಾಸಣೆ ಮಾಡಲಾಯಿತು.

ಘಟನೆಗೆ ಬಿಸಿಯೂಟ ಸೇವನೆ ಅಥವಾ ನೀರು ಸೇವನೆ ಕಾರಣ ಎಂಬುದು ತಿಳಿದು ಬಂದಿಲ್ಲ. ವಿದ್ಯಾರ್ಥಿಗಳ ಅರೋಗ್ಯದಲ್ಲಿನ ಏರುಪೇರಿನಿಂದ ಗ್ರಾಮದಲ್ಲಿ ಈಗ ಆತಂಕದ ವಾತಾವರಣ ಉಂಟಾಗಿದೆ. ಆಸ್ಪತ್ರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಗದೇವಿ ಅತ್ತೂರು, ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ ಹಾಗೂ ಪಿಎಸ್ಐ ತಿರುಮಲೇಶ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುತ್ತ ಕೊಳಚೆ ನೀರು ಹಾಗೂ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಸ್ವಚ್ಛತೆ ಹಾಗೂ ಉತ್ತ ಶೈಕ್ಷಣಿಕ ವಾತಾವರಣ ರೂಪಿಸುವಲ್ಲಿ ಗ್ರಾ.ಪಂವಿಫಲವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬಿಸಿಯೂಟ ತಯಾರಿಕೆಯಲ್ಲಿ ನಿರ್ಲಕ್ಷ್ಯ ಕಂಡು ಬಂದಿದ್ದರೆ ತಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಬೇಕು’ ಎಂದು ಪೋಷಕ ಸಿದ್ದರಾಮಯ್ಯ ಸ್ವಾಮಿ ಒತ್ತಾಯಿಸಿದ್ದಾರೆ.

ಚಿತ್ತಾಪುರ ತಾಲ್ಲೂಕಿನ ಕನಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವುದು
ಚಿತ್ತಾಪುರ ತಾಲ್ಲೂಕಿನ ಕನಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವುದು
ಚಿತ್ತಾಪುರ ತಾಲ್ಲೂಕಿನ ಕನಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವುದು
ಚಿತ್ತಾಪುರ ತಾಲ್ಲೂಕಿನ ಕನಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT