ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ಅಂಕೆಗೂ ಸಿಗುತ್ತಿಲ್ಲ ಕೊರೊನಾ ವೈರಸ್: ಔಷಧ ವಿಜ್ಞಾನಿ

ಚೀನಾದಿಂದ ಕಲಬುರ್ಗಿಗೆ ವಾಪಸಾದ ಔಷಧ ವಿಜ್ಞಾನಿ: ಇನ್ನೂ ಆರು ಕುಟುಂಬಗಳು ಶಾಂಡಾಂಗ್‌ನಲ್ಲಿ
Last Updated 14 ಫೆಬ್ರುವರಿ 2020, 17:39 IST
ಅಕ್ಷರ ಗಾತ್ರ

ಕಲಬುರ್ಗಿ: ‘ಚೀನಾದಲ್ಲಿರುವ ವೈದ್ಯಕೀಯ ಸೌಲಭ್ಯಗಳು ಭಾರತಕ್ಕಿಂತ ಎಷ್ಟೋ ಪಟ್ಟು ಉತ್ತಮವಾಗಿವೆ. ಕೊರೊನಾ ವೈರಸ್‌ಗೆ ತುತ್ತಾದ ರೋಗಿಗಳನ್ನು ಅತ್ಯಂತ ಮುತುವರ್ಜಿಯಿಂದ ನೋಡಿಕೊಳ್ಳಲಾಗುತ್ತಿದೆ. ಆದಾಗ್ಯೂ, ಇದು ಹೊಸ ವೈರಸ್‌ ಆಗಿರುವುದರಿಂದ ಇನ್ನೂ ಔಷಧಿ ಪತ್ತೆಯಾಗಿಲ್ಲ’ ಎಂದು ಚೀನಾದಿಂದ ಕಲಬುರ್ಗಿಗೆ ವಾಪಸಾಗಿರುವ ಔಷಧ ವಿಜ್ಞಾನಿ ರಾಜಕುಮಾರ್‌ ಅಲ್ಲಿನ ಪರಿಸ್ಥಿತಿಯನ್ನು ‘ಪ್ರಜಾವಾಣಿ’ ಎದುರು ಬಿಚ್ಚಿಟ್ಟರು.

ಜಿಲ್ಲೆಯ ಆಳಂದ ತಾಲ್ಲೂಕಿನ ಮದಗುಣಕಿ ಗ್ರಾಮದ ರಾಜಕುಮಾರ್‌ ಅವರು ನಾಲ್ಕು ತಿಂಗಳ ಹಿಂದೆಯಷ್ಟೇ ಚೀನಾದ ಹೃದಯ ಭಾಗದಲ್ಲಿರುವ ಶಾಂಡಾಂಗ್‌ ಪ್ರಾವಿನ್ಸ್‌ಗೆ ತೆರಳಿದ್ದರು. ಅಲ್ಲಿನ ಪ್ರಸಿದ್ಧ ಔಷಧಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾಜ್ಯದ ಇನ್ನೂ ಆರು ಕುಟುಂಬಗಳು ಅಲ್ಲಿಯೇ ಉಳಿದಿವೆ. ಅದೇ ಕಂಪನಿಯಲ್ಲಿದ್ದ ನಾಲ್ವರು ಕರ್ನಾಟಕಕ್ಕೆ ವಾಪಸಾಗಿದ್ದೇವೆ. ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ನಮ್ಮನ್ನು ವಾಪಸ್‌ ಕರೆಸಿಕೊಳ್ಳಲು ಸಾಕಷ್ಟು ಮುತುವರ್ಜಿ ವಹಿಸಿತ್ತು ಎಂದು ಶ್ಲಾಘಿಸಿದರು.

‘ಕೊರೊನಾ ವೈರಸ್‌ ಅನ್ನು ಚೀನಿಯರು ನೋವಲ್ ಕೊರೊನಾ ಎಂದು ಕರೆಯುತ್ತಾರೆ. ನೋವಲ್‌ ಅಂದರೆ ಇದಕ್ಕೆ ಯಾವುದೇ ಲಸಿಕೆಯಾಗಲೀ, ಔಷಧಿಯಾಗಲೀ ಇನ್ನೂ ಸಂಶೋಧನೆಯಾಗಿಲ್ಲ ಎಂದರ್ಥ. ಒಂದು ಬಾರಿ ಈ ಸೋಂಕು ತಗುಲಿದರೆ ಆ ವ್ಯಕ್ತಿ 7ರಿಂದ 14 ದಿನಗಳೊಳಗಾಗಿ ಸಾಯುತ್ತಾನೆ. ಈ ವೈರಸ್‌ ಹಾವಳಿ ಚೀನಾದ ವುಹಾನ್‌ ನಗರದಲ್ಲಿ ಅತ್ಯಂತ ಹೆಚ್ಚಾಗಿದೆ. ನಾನು ಇದ್ದಿದ್ದು ವುಹಾನ್‌ನಿಂದ 850 ಕಿ.ಮೀ. ದೂರದಲ್ಲಿರುವ ಶಾಂಡಾಂಗ್‌ ಪ್ರಾವಿನ್ಸ್‌ನಲ್ಲಿ. ಅಲ್ಲಿ ವೈರಸ್‌ ಹರಡಿಲ್ಲ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ನಾನು ಭಾರತಕ್ಕೆ ವಾಪಸಾಗಿದ್ದೇನೆ. ವೈರಸ್‌ ಹಾವಳಿ ಹತೋಟಿಗೆ ಬಂದ ಬಳಿಕ ಮತ್ತೆ ವಾಪಸ್‌ ಹೋಗುವ ಯೋಚನೆ ಇದೆ’ ಎಂದು ತಿಳಿಸಿದರು.

‘ರಾಜ್ಯದ ಇನ್ನೂ ಆರು ಜನ ಔಷಧ ವಿಜ್ಞಾನಿಗಳು ಶಾಂಡಾಂಗ್‌ನಲ್ಲಿ ತಮ್ಮ ಕುಟುಂಬಗಳೊಂದಿಗೆ ಇದ್ದಾರೆ. ಅಲ್ಲಿಂದ ಬರಲು ಸಾಕಷ್ಟು ಹಣ ಖರ್ಚಾಗುತ್ತದೆ. ಹೀಗಾಗಿ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದರಷ್ಟೇ ವಾಪಸಾಗಲು ನಿರ್ಧರಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT