ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಕರ ವರ್ಗಾವಣೆ | ಚಿಂಚೋಳಿ: 39 ಶಿಕ್ಷಕರ ವರ್ಗ, ಬಂದವರು ಇಬ್ಬರು!

ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಿಕ್ಷಕರ ವರ್ಗಾವಣೆ
Published : 30 ಆಗಸ್ಟ್ 2024, 4:58 IST
Last Updated : 30 ಆಗಸ್ಟ್ 2024, 4:58 IST
ಫಾಲೋ ಮಾಡಿ
Comments

ಚಿಂಚೋಳಿ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಕೊನೆಯ ಸ್ಥಾನ ಪಡೆದು ಕಳಪೆ ಸಾಧನೆ ಮಾಡಿದ ತಾಲ್ಲೂಕಿಗೆ ಶೈಕ್ಷಣಿಕ ವರ್ಷದ ಮಧ್ಯದಲ್ಲೇ ನಡೆದ ಶಿಕ್ಷಕರ ವರ್ಗಾವಣೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಬರೆ ಹಾಕಿದೆ.

ಆಗಸ್ಟ್ ಮೊದಲ ವಾರದಿಂದ ಕೊನೆಯವರೆಗೆ ತಾಲ್ಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವರ್ಗಾವಣೆಗೆ ಶಿಕ್ಷಣ ಇಲಾಖೆ ಅವಕಾಶ ನೀಡಿದ್ದರಿಂದ ತಾಲ್ಲೂಕಿನಿಂದ ಮತ್ತೆ 39 ಶಿಕ್ಷಕರು ವರ್ಗವಾಗಿದ್ದಾರೆ. ಇದಕ್ಕೆ ಬದಲಾಗಿ ಕೇವಲ ಇಬ್ಬರು ಶಿಕ್ಷಕರು ಮಾತ್ರ ತಾಲ್ಲೂಕಿಗೆ ಬಂದಿದ್ದಾರೆ.

ತಾಲ್ಲೂಕಿನಲ್ಲಿ 272 ಪ್ರಾಥಮಿಕ ಮತ್ತು 33 ಸರ್ಕಾರಿ ಪ್ರೌಢಶಾಲೆಗಳಿವೆ. 2024-25ನೇ ಶೈಕ್ಷಣಿಕ ಸಾಲಿನ ಮಧ್ಯದಲ್ಲಿ ನಡೆದ ವರ್ಗಾವಣೆಯಲ್ಲಿ ಪ್ರಾಥಮಿಕ ಶಾಲೆಗಳಿಂದ ಬೇರೆ ಜಿಲ್ಲೆಗಳಿಗೆ 6 ಮಂದಿ ಪ್ರೌಢಶಾಲೆ ಶಿಕ್ಷಕರು ವರ್ಗವಾದರೆ 33 ಮಂದಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ವರ್ಗವಾಗಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ 435 ಹುದ್ದೆಗಳು ಖಾಲಿ ಇದ್ದವು. ಇದರಲ್ಲಿ ನಿವೃತ್ತಿಯ 15 ಮತ್ತು ವರ್ಗವಾದ 36 ಶಿಕ್ಷಕರು ಸೇರಿ ಖಾಲಿ ಹುದ್ದೆಗಳ ಸಂಖ್ಯೆ 486ಕ್ಕೆ ಏರಿದೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ 78 ಹುದ್ದೆಗಳು ಖಾಲಿಯಿದ್ದವು. ಈಗ ವರ್ಗಾವಣೆಯಿಂದ ಖಾಲಿ ಹುದ್ದೆಗಳ ಸಂಖ್ಯೆ 84ಕ್ಕೆ ಏರಿದಂತಾಗಿದೆ. ಖಾಲಿ ಹುದ್ದೆಗೆ ಬದಲಾಗಿ ಪ್ರಾಥಮಿಕ ಶಾಲೆಗಳಿಗೆ 371, ಪ್ರೌಢಶಾಲೆಗೆ 78 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.

ಕನ್ನಡ ಮಾಧ್ಯಮದ ಗಂಗನಪಳ್ಳಿ, ಫರ್ಧಾರ ಮೋತಕಪಳ್ಳಿ, ಮೋತಿಮೋಕ ತಾಂಡಾ, ಧರಿ ತಾಂಡಾ, ಹೂವಿನಹಳ್ಳಿ, ಕಾಶಿರಾಮ ತಾಂಡಾ, ಮೋಘಾ ತಾಂಡಾ, ಗಂಜಗಿರಿ ತಾಂಡಾ, ಪಸ್ತಪುರ ತಾಂಡಾ ಮತ್ತು ಉರ್ದು ಮಾಧ್ಯಮದ ಶಾಲೆಗಳ ಮುಖ್ಯಶಿಕ್ಷಕರ ಜವಾಬ್ದಾರಿ ಸಮೀಪದ ಶಾಲೆಯ ಕಾಯಂ ಶಿಕ್ಷಕರಿಗೆ ಪ್ರಭಾರವಹಿಸಲಾಗಿದೆ ಆದರೆ ವಾಸ್ತವವಾಗಿ ಶಾಲೆಗಳನ್ನು ಅತಿಥಿ ಶಿಕ್ಷಕರೇ ನಡೆಸಿಕೊಂಡು ಹೋಗುತ್ತಿದ್ದಾರೆ.

ಮಕ್ಕಳೇ ಇಲ್ಲದ ಕಾರಣ ತಾಲ್ಲೂಕಿನ ಐನಾಪುರ, ಖಾನಾಪುರ, ಕನಕಪುರ ಉರ್ದು ಶಾಲೆಗಳು ಬಂದ್ ಆಗಿವೆ.

ಇಲ್ಲಿ 3 ಮಕ್ಕಳು: ತಾಲ್ಲೂಕಿನ ಕುಂಚಾವರಂ ವನ್ಯಜೀವಿ ಧಾಮದ ಹೃದಯ ಭಾಗದಲ್ಲಿರುವ ಶೇರಿಭಿಕನಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ಮೂರು ಮಕ್ಕಳ ದಾಖಲಾತಿಯಿದೆ.

ಈ ಮಕ್ಕಳಿಗೆ ಶಿಕ್ಷಣ ನೀಡಲು ಓರ್ವ ಅತಿಥಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ನೇಮಿಸಿಕೊಂಡಿದೆ. ಜತೆಗೆ ಬಿಸಿ ಊಟಕ್ಕಾಗಿ ಓರ್ವ ಸಿಬ್ಬಂದಿ ಇದ್ದಾರೆ.

ಕಳೆದ ವರ್ಷ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಿಕ್ಷಕರ ವರ್ಗ ಮಾಡಿ ಟೀಕೆಗೆ ಗುರಿಯಾಗಿದ್ದ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷವೂ ಇದೇ ತಪ್ಪು ಮಾಡಿ ಗುಣಮಟ್ಟದ ಶಿಕ್ಷಣದಿಂದ ಮಕ್ಕಳನ್ನು ವಂಚಿಸಿದೆ

-ಭೀಮಶೆಟ್ಟಿ ಮುಕ್ಕಾ ಅಧ್ಯಕ್ಷ ಭೀಮಾ ಮಿಷನ್ ಚಿಂಚೋಳಿ

ತಾಲ್ಲೂಕಿನಿಂದ 40 ಶಿಕ್ಷಕರು ಬೇರೆ ತಾಲ್ಲೂಕು ಮತ್ತು ಜಿಲ್ಲೆಗಳಿಗೆ ವರ್ಗವಾಗಿ ಹೋದರೆ ಕೇವಲ ಇಬ್ಬರು ಶಿಕ್ಷಕರು ಮಾತ್ರ ತಾಲ್ಲೂಕಿಗೆ ಬಂದಿದ್ದಾರೆ

- ವಿ.ಲಕ್ಷ್ಮಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT