ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಯಿಂದ 2 ಸಾವಿರ ಜನರಿಗೆ ಹಕ್ಕುಪತ್ರ

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಂದ ಮಾಹಿತಿ
Last Updated 20 ಜೂನ್ 2019, 15:39 IST
ಅಕ್ಷರ ಗಾತ್ರ

ಕಲಬುರ್ಗಿ: ತಾಲ್ಲೂಕಿನ ಹೇರೂರ (ಬಿ) ಗ್ರಾಮದಲ್ಲಿ ಇದೇ 22ರಂದು ನಡೆಯಲಿರುವ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು2000ಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಈ‌ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕೆಲ ಫಲಾನುಭವಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ವಿತರಿಸಲಿದ್ದಾರೆ. ಭಾಗ್ಯಲಕ್ಷ್ಮಿ ಬಾಂಡ್, ಗ್ಯಾಸ್ ಸ್ಟೋವ್, ನೂತನ ಪಡಿತರ‌ಚೀಟಿ, ಹೊಲಿಗೆ ಯಂತ್ರ, ಮೆಟ್ರಿಕ್ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪುರಸ್ಕಾರ, ವಿದ್ಯಾರ್ಥಿ ವೇತನ, ವೃದ್ಧಾಪ್ಯ ವೇತನ, ವಿವಿಧ ಪ್ರಕರಣಗಳ ಅಡಿಯಲ್ಲಿ ಬಿಡುಗಡೆಯಾದ ಸಿ.ಎಂ. ಪರಿಹಾರ, ಆಶ್ರಯ ಯೋಜನೆಗಳಡಿಯಲ್ಲಿ ಮಂಜೂರಾದ ಮನೆಗಳ ಹಕ್ಕುಪತ್ರ ವಿತರಿಸಲಿದ್ದಾರೆ’ ಎಂದಿದ್ದಾರೆ.

‘ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದಿಂದ ಜಿಲ್ಲೆಯ ಗ್ರಾಮೀಣ ಭಾಗದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕೊಡುವ ಉದ್ದೇಶದಿಂದ ಮುಖ್ಯಮಂತ್ರಿಗಳೇ ಸ್ವತಃ ಜನರಿಗೆ ಬಳಿಗೆ ಬರುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸುತ್ತಿದ್ದು ಸರ್ಕಾರದ ವಿವಿಧ ಇಲಾಖೆಗಳ ಅಡಿಯಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಲಿದ್ದಾರೆ. ಹಾಗಾಗಿ, ಈ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಈ ಭಾಗದ ಸಮಸ್ಯೆಗಳಿಗೆ ಪರಿಹಾರ‌ ಕಂಡುಕೊಂಡು ಅಭಿವೃದ್ದಿಗೆ ಸಹಕರಿಸಬೇಕು’ ಎಂದು ಸಚಿವರು ಹೇಳಿದ್ದಾರೆ.

ಸಾರ್ವಜನಿಕರು ತಮ್ಮ ಅವಾಹಲುಗಳನ್ನು ನಿಗದಿತ ಅರ್ಜಿಯಲ್ಲಿ ಭರ್ತಿ ಮಾಡಬೇಕಾಗಿದ್ದು, ಅವರಿಗೆ ನೆರವಾಗಲು ಸ್ವಯಂ ಸೇವಕರ ಸೇವೆ ಲಭ್ಯವಿರುತ್ತದೆ. ಮನವಿ ಸಲ್ಲಿಸಲು ಬರುವ ಮಹಿಳೆಯರು, ವೃದ್ಧರು, ಅಂಗವಿಕಲರನ್ನು ವೇದಿಕೆಗೆ ಕರೆದೊಯ್ಯಲು ಗಾಲಿ ಕುರ್ಚಿಗಳ ವ್ಯವಸ್ಥೆ ‌ಮಾಡಲಾಗಿದೆ. ಅಲ್ಲಿಯೂ ಸ್ವಯಂ ಸೇವಕರು ನೆರವಾಗಲಿದ್ದಾರೆ. ಅರ್ಜಿ ತುಂಬಿ ಟೋಕನ್‌ ಪಡೆದುಕೊಂಡ ನಂತರ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿಯಾಗಬಹುದಾಗಿದೆ. ಈ ಹಿಂದೆ ಸಾರ್ವಜನಿಕ ಸಭೆಯಲ್ಲಿ ಅಹವಾಲು ಸಲ್ಲಿಸಿದ ನಂತರವೂ ಸಮಸ್ಯೆ ಬಗೆಹರಿಯದಿದ್ದ ಪ್ರಕರಣಗಳಿದ್ದಲ್ಲಿ ಅಂಥವರೂ ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದಾಗಿದೆ ಎಂದಿದ್ದಾರೆ.

ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಸಾರ್ವಜನಿಕರಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ವೈದ್ಯರ ತಂಡವನ್ನು ನಿಯುಕ್ತಿಗೊಳಿಸಲಾಗಿದೆ. ಅಂಬುಲೆನ್ಸ್ ಸೇರಿದಂತೆ ಇತ್ಯಾದಿ ತುರ್ತು ಸೇವೆಗಳ ನೆರವು ಒದಗಿಸಲಾಗುತ್ತಿದೆ.‌ ಜೊತೆಗೆ ಅಗ್ನಿಶಾಮಕ ಸೇವೆ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗಿದೆ.

ಕಲಬುರ್ಗಿ ಜಿಲ್ಲೆ ತೀವ್ರ ಬರದಿಂದ ತತ್ತರಿಸಿದ್ದು, ಜಿಲ್ಲಾಡಳಿತದ ವತಿಯಿಂದ ರೈತರಿಗೆ, ಕೃಷಿ ಕಾರ್ಮಿಕರಿಗೆ ನೆರವಾಗುವ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾಗುವ ಯೋಜನೆಗಳ ಪಟ್ಟಿಯೊಂದನ್ನು ಈಗಾಗಲೇ ಸಿದ್ಧಪಡಿಸಿದ್ದು ಮುಖ್ಯಮಂತ್ರಿಗಳಿಗೆ ಇದೇ ಸಂದರ್ಭದಲ್ಲಿ‌ ಸಲ್ಲಿಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT