ಕಲಬುರಗಿ: ಸಾಂಘಿಕ ಪ್ರದರ್ಶನ ನೀಡಿದ ಕುಡ್ಲ ಚಾಲೆಂಜರ್ಸ್ ತಂಡವು ಕರಾವಳಿ ಪ್ರೀಮಿಯರ್ ಲೀಗ್(ಕೆಪಿಎಲ್) ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕೃಷ್ಣಾ (17 ರನ್), ದಿವಾಕರ್(18 ರನ್), ಯತೀಶ್(11 ರನ್) ಹಾಗೂ ರಾಘವೇಂದ್ರ ಸಾಲಿಯಾನ್ (12ಕ್ಕೆ3) ಉತ್ತಮ ಆಟದ ಬಲದಿಂದ 35 ರನ್‌ಗಳಿಂದ ಕುಂದಾಪುರ ವಾರಿಯರ್ಸ್ ತಂಡದ ವಿರುದ್ಧ ಗೆಲುವಿನ ನಗೆ ಬೀರಿತು.
ಗಣೇಶೋತ್ಸವ ಪ್ರಯುಕ್ತ ದಕ್ಷಿಣ ಕನ್ನಡ ಸಂಘದಿಂದ ನಗರದ ಎನ್.ವಿ. ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕುಡ್ಲ ತಂಡವು, 8 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 77 ರನ್‌ಗಳಿಸಿತು.
ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ ಕುಂದಾಪುರ ತಂಡವು ನಿಗದಿತ 8 ಓವರ್‌ಗಳಲ್ಲಿ ಕೇವಲ 42 ರನ್ ಮಾತ್ರವೇ ಗಳಿಸಿತು. ತಂಡದ ಯಾವೊಬ್ಬ ಆಟಗಾರರು ಎರಡಂಕಿ ಮೊತ್ತ ಗಳಿಸಲಿಲ್ಲ.
ಟೂರ್ನಿಯಲ್ಲಿ ಕುಡ್ಲ ಚಾಲೆಂಜರ್ಸ್, ಉಡುಪಿ ಸೂಪರ್ ಕಿಂಗ್ಸ್, ಕುಂದಾಪುರ ವಾರಿಯರ್ಸ್, ಕಲಬುರಗಿ ಟೈಟನ್ಸ್ ತಂಡಗಳು ಪಾಲ್ಗೊಂಡಿದ್ದವು.
ದಕ್ಷಿಣ ಕನ್ನಡ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ, ಶಿವಾನಂದ ಹುನಗಂಟಿ, ಮಹಾಕೀರ್ತಿ ಶೆಟ್ಟಿ, ಸುನೀಲ್ ಶೆಟ್ಟಿ, ಸತ್ಯನಾಥ್ ಶೆಟ್ಟಿ, ಅರುಣಾಚಲ್ ಭಟ್, ಸುದರ್ಶನ್ ಜತ್ತನ್, ಕಿರಣ್ ಜತ್ತನ್, ನರಸಿಂಹ ಮೆಂಡನ್, ರಾಜೇಂದ್ರ ಉಪಾಧ್ಯಾಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.