ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹9.80 ಕೋಟಿ ವೆಚ್ಚದಲ್ಲಿ ಶೀಥಲೀಕರಣ ಘಟಕ: ಕೃಷಿ ಸಚಿವ ಬಿ.ಸಿ. ಪಾಟೀಲ ಘೋಷಣೆ

ಕೃಷಿ ಸಚಿವ ಬಿ.ಸಿ. ಪಾಟೀಲ ಘೋಷಣೆ; ಒಂದು ವರ್ಷದಲ್ಲಿ ಕಾರ್ಯಾರಂಭ
Last Updated 12 ಜನವರಿ 2022, 14:39 IST
ಅಕ್ಷರ ಗಾತ್ರ

ಕಲಬುರಗಿ: ನಗರದಲ್ಲಿ ಆಹಾರ ಧಾನ್ಯಗಳನ್ನು ಕೆಡದಂತೆ ರಕ್ಷಿಸಿಡಲು ₹ 9.80 ಕೋಟಿ ವೆಚ್ಚದಲ್ಲಿ ಕೃಷಿ ಇಲಾಖೆಯಿಂದಲೇ ಶೀಥಲೀಕರಣ ಘಟಕ ಆರಂಭವಾಗಲಿದ್ದು, ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ಒಂದು ತಿಂಗಳಲ್ಲಿ ನಗರಕ್ಕೆ ಭೇಟಿ ನೀಡಿ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರಕಟಿಸಿದರು.

ನಗರದ ಹೊರವಲಯದ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ₹ 5.45 ಕೋಟಿ ವೆಚ್ಚದ ವಿಸ್ತರಣಾ ಘಟಕದ ನೂತನ ಕಟ್ಟಡಕ್ಕೆ ಬುಧವಾರ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಒಂದು ವರ್ಷದಲ್ಲಿ ರೈತರ ಬಳಕೆಗೆ ಲಭ್ಯವಾಗಲಿದೆ. ಕೋವಿಡ್ ಸಂದರ್ಭದಲ್ಲಿ ದ್ರಾಕ್ಷಿ ಬೆಳೆಗಾರರು ಸೂಕ್ತ ದರ ಸಿಗದೇ ಪರದಾಡಿದ್ದರು. ಹೀಗಾಗಿ ಶೀಥಲೀಕರಣ ಘಟಕವನ್ನು ಮಂಜೂರು ಮಾಡಲಾಗಿದೆ’ ಎಂದರು.

ರೈತ ಸಮುದಾಯದ ಕಷ್ಟಗಳನ್ನು ಅರಿಯುವ ಹಾಗೂ ಕೃಷಿ ಕ್ಷೇತ್ರದಲ್ಲಿ ಏನಾಗಬೇಕು ಎಂಬ ಬಗ್ಗೆ ರೈತರಿಂದಲೇ ಮಾಹಿತಿ ಪಡೆಯುವ ಉದ್ದೇಶದಿಂದ ಶೀಘ್ರವೇ ಕಲಬುರಗಿಯಲ್ಲಿ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಸಚಿವ ಪಾಟೀಲ ತಿಳಿಸಿದರು.

‘ಈಗಾಗಲೇ 12 ಜಿಲ್ಲೆಗಳಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳ ರೈತರೊಂದಿಗೆ ಸಮಯ ಕಳೆಯಬೇಕಿದೆ’ ಎಂದರು.

ನಷ್ಟ ಪರಿಹಾರ ಮೊತ್ತ ಹೆಚ್ಚಳ: ನೆರೆ ಹಾವಳಿಯಲ್ಲಿ ಹಾಳಾದ ಬೆಳೆಗಳಿಗೆ ಒಣ ಬೇಸಾಯದ ಪ್ರತಿ ಹೆಕ್ಟೇರ್‌ಗೆ ಕೇಂದ್ರ ಸರ್ಕಾರದ ₹ 6,800 ಜೊತೆಗೆ ರಾಜ್ಯ ಸರ್ಕಾರದ ₹ 6,800, ನೀರಾವರಿ ಪ್ರದೇಶದ ಪ್ರತಿ ಹೆಕ್ಟೇರ್‌ಗೆ ಕೇಂದ್ರ ಸರ್ಕಾರದ ₹ 13500ರ ಜೊತೆಗೆ ರಾಜ್ಯ ಸರ್ಕಾರದ ₹ 11,500 ಹಾಗೂ ತೋಟಗಾರಿಕೆ ಬೆಳೆಗಳ ಪ್ರತಿ ಹೆಕ್ಟೇರ್‌ಗೆ ಕೇಂದ್ರ ಸರ್ಕಾರದ ₹ 18 ಸಾವಿರದ ಜೊತೆಗೆ ರಾಜ್ಯ ಸರ್ಕಾರದ ₹ 7 ಸಾವಿರ ಸೇರಿಸಿ ಪರಿಹಾರ ನೀಡುವ ತೀರ್ಮಾನ ಕೈಗೊಳ್ಳುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಿದೆ ಎಂದರು.

ಸಂಸದ ಡಾ. ಉಮೇಶ ಜಿ. ಜಾಧವ, ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಉಮೇಶ ಜಾಧವ, ವಿಧಾನ ಪರಿಷತ್ ಶಾಸಕರಾದ ಡಾ. ಬಿ.ಜಿ.ಪಾಟೀಲ, ಶಶೀಲ್ ಜಿ. ನಮೋಶಿ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ, ವಿ.ವಿ. ವ್ಯವಸ್ಥಾಪನಾ‌ ಮಂಡಳಿ ಸದಸ್ಯರಾದ ಕೊಟ್ರಪ್ಪ ಬಿ. ಕೋರೆರ, ತ್ರಿವಿಕ್ರಮ ಜೋಶಿ, ಸುನೀಲ ವರ್ಮಾ, ಕೃಷಿ ಸಚಿವರ ತಾಂತ್ರಿಕ ಸಲಹೆಗಾರ ಎ.ಬಿ. ಪಾಟೀಲ, ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸುಗೂರು, ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಸುರೇಶ ಎಸ್.ಪಾಟೀಲ ಇದ್ದರು.

ತರಬೇತಿ ಕೇಂದ್ರಕ್ಕೆ ಗುದ್ದಲಿ ಪೂಜೆ

ಕಲಬುರಗಿ ಹೊರವಲಯದ ಕೋಟನೂರ (ಡಿ) ಕೃಷಿ ಇಲಾಖೆಯ ಆವರಣದಲ್ಲಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಿಂದ ₹ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೈತರ ತರಬೇತಿ ಕೇಂದ್ರ ಕಟ್ಟಡಕ್ಕೂ ಸಚಿವ ಬಿ.ಸಿ.ಪಾಟೀಲ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ನೂತನ ಕಟ್ಟಡವನ್ನು ಸಚಿವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT