ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ವಾಣಿಜ್ಯ ತೆರಿಗೆ ಇಲಾಖೆ ಕಚೇರಿ: ಟಿಡಿಎಸ್‌ ಹೆಸರಲ್ಲಿ ₹6 ಕೋಟಿ ವಂಚನೆ

ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಅವ್ಯವಹಾರ
Last Updated 23 ಮೇ 2022, 4:07 IST
ಅಕ್ಷರ ಗಾತ್ರ

ಕಲಬುರಗಿ: ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕೆಲವರು ಸುಳ್ಳು ದಾಖಲೆ ಸೃಷ್ಟಿಸಿ ‘ಟಿಡಿಎಸ್‌ ಮರುಪಾವತಿ’ ನೆಪದಲ್ಲಿ ಕೋಟ್ಯಂತರ ಹಣ ಕಬಳಿಸಲಾಗಿದೆ. ಈವರೆಗೆ ₹ 2 ಕೋಟಿಗೂ ಅಧಿಕ ಹಣ ಕಬಳಿಸಿದ್ದು ಬೆಳಕಿಗೆ ಬಂದಿದ್ದು, ಇನ್ನೂ ಪರಿಶೀಲನೆ ನಡೆದಿದೆ. ಅಂದಾಜು ₹ 6 ಕೋಟಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

‘ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಪಂಡರಿನಾಥ ಮತ್ತು ಹೊರಗುತ್ತಿಗೆ ನೌಕರರಾದ ಮಹಮ್ಮದ್ ರಹೀಲ್, ಮಹಮ್ಮದ್ ಇರ್ಫಾನ್‌,ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿ ನೌಕರ ಆಸಿಫ್‌ ಸೇರಿ ಈ ಅವ್ಯವಹಾರ ನಡೆಸಿದ್ದಾರೆ’ ಎಂದುವಾಣಿಜ್ಯ ತರಿಗೆ ಸಹಾಯಕ ಆಯುಕ್ತ ಮಹೇಶ ಇಲ್ಲಿನ ಸ್ಟೇಷನ್ ಬಜಾರ್‌ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.

ಈ ನಾಲ್ವರೂ ಸೇರಿ 2005ರಿಂದ 2017ರವರೆಗೆ (ವ್ಯಾಟ್‌ ಇದ್ದ ಅವಧಿ) ‘ಫಾರ್ಮ್‌ ನಂಬರ್‌ 156’ ದುರ್ಬಳಕೆ ಮಾಡಿಕೊಂಡಿದ್ದಾರೆ. ಮೆ.ರಿದನಾಲ್‌ ವಾಟರ್‌ ಪ್ಯುರಿಫಯರ್ ಎಂಬ ನಕಲಿ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಇದೇ ಹೆಸರಲ್ಲಿ ನಕಲಿ ಬ್ಯಾಂಕ್‌ ಖಾತೆಯನ್ನೂ ತೆರೆದಿದ್ದಾರೆ. ಇದರ ಮೂಲಕ ವಾಣಿಜ್ಯ ತೆರಿಗೆಯಿಂದ ಕೋಟ್ಯಂತರ ರೂಪಾಯಿಮರುಪಾವತಿ (ಟಿಡಿಎಸ್‌) ಮಾಡಿಸಿಕೊಂಡಿದ್ದಾರೆ. 2017ರವರೆಗೆ ಈ ಸಂಸ್ಥೆ ಹೆಸರಲ್ಲಿ ₹ 1.75 ಕೋಟಿ ಮರುಪಾವತಿ ಮಾಡಲಾಗಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಫಾರ್ಮ್‌ ನಂಬರ್‌ 156ರ ಜೊತೆಗೆ 334 ಕೂಡ ದುರ್ಬಳಕೆ ಆಗಿರುವ ಸಾಧ್ಯತೆ ಇದೆ. ಇದೂ
ವರೆಗೆ200ಕ್ಕೂ ಹೆಚ್ಚಿನ ಫಾರ್ಮ್‍ಗಳನ್ನು ದುರ್ಬಳಕೆ ಮಾಡಿಕೊಂಡಿರಬಹುದು’ ಎಂದು ಮೂಲಗಳು ತಿಳಿಸಿವೆ.

‘ಟಿಡಿಎಸ್‌ ಮರುಪಾವತಿ ಹೆಸರಿನಲ್ಲಿ ಹಣ ಕಬಳಿಸಿದ ಬಗ್ಗೆ ಒಂದೂವರೆ ತಿಂಗಳ ಹಿಂದೆಯೇ ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಆಗ, ₹ 14 ಲಕ್ಷ ಕಬಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ದಾಖಲೆಗಳ ಸಂಗ್ರಹ ನಡೆದಿದೆ. ಸೂಕ್ತ ದಾಖಲೆಗಳು ಸಿಕ್ಕ ನಂತರ ಆರೋಪಿಗಳನ್ನು ಬಂಧಿಸುವ ಬಗ್ಗೆ ನಿರ್ಧರಿಸಲಾಗುವುದು. ಸದ್ಯಕ್ಕೆ ನಾಲ್ವರೂ ತಲೆಮರೆಸಿಕೊಂಡಿದ್ದಾರೆ’ ಎಂದು ಸ್ಟೇಷನ್‌ ಬಜಾರ್ ಠಾಣೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಕಿಗೆ ಬಂದಿದ್ದು ಹೀಗೆ: ಮೆ. ರಿದನಾಲ್‌ ವಾಟರ್ ಪ್ಯುರಿಫಯರ್ ಸಂಸ್ಥೆ 2017ರಲ್ಲಿ ಮುಚ್ಚಿದೆ. ಆದರೆ, ಈ ನೀರು ಶುದ್ಧೀಕರಣ ಸಂಸ್ಥೆಗೆ ಟಿಡಿಎಸ್‌ ಮರುಪಾವತಿ ಅರ್ಜಿ ಸಲ್ಲಿಸಲಾಗಿತ್ತು.

ಇದರ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರ ಸಹಿಗೆ ಕಳುಹಿಸಲಾಗಿತ್ತು. ಅನುಮಾನ ಬಂದ ಜಂಟಿ ಆಯುಕ್ತರು ಇದರ ತನಿಖೆಗೆ ಆದೇಶಿಸಿದರು. ಆಂತರಿಕ ವಿಚಾರಣೆ ವೇಳೆ ಅವ್ಯವಹಾರ ಬೆಳಕಿಗೆ ಬಂದಿದೆ.

ಬಂದ್‌ ಆಗಿದ್ದ ಸಂಸ್ಥೆಯ ಹೆಸರಿನಲ್ಲಿಯೇ ನಾಲ್ವರೂ ಆರೋಪಿಗಳು ₹ 12.65 ಲಕ್ಷ ಮರು ಪಾವತಿಗೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಸಂಶಯಗೊಂಡ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರು, ಕಡತಕ್ಕೆ ಸಹಿ ಹಾಕುವ ಬದಲಿಗೆ ಅರ್ಜಿಯಲ್ಲಿ ನ್ಯೂನತೆಗಳಿದ್ದು, ಪರಿಶೀಲಿಸಲು ಸೂಚಿಸಿದ್ದರು. ಪರಿಶೀಲನೆ ನಡೆಸಿದಾಗ ಒಂದೊಂದೇ ಅಕ್ರಮಗಳು ಬೆಳಕಿಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಸಂಬಂಧಿಸಿದಂತೆ ವಾಣಿಜ್ಯ ತೆರಿಗೆಗಳ ಉಪ ಆಯುಕ್ತ, ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ, ವಾಣಿಜ್ಯ ತೆರಿಗೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ತನಿಖೆ ನಡೆಸಲು ಆದೇಶಿಸಲಾಗಿತ್ತು. ಈ ಸಮಿತಿ ನೀಡಿದ ವರದಿ ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT