ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಮುಂದಿನ ತಿಂಗಳು ಸರ್ವಧರ್ಮ ಸಮಾವೇಶ

Last Updated 23 ಏಪ್ರಿಲ್ 2022, 8:49 IST
ಅಕ್ಷರ ಗಾತ್ರ

ಕಲಬುರಗಿ: ‘ರಾಜ್ಯದ ಬೇರೆ ಬೇರೆ ಕಡೆಗೆ ಕೋಮು ಸಂಘರ್ಷಗಳು ಹೆಚ್ಚಾಗುತ್ತಿವೆ. ಆದ್ದರಿಂದ ಸಮಾಜದಲ್ಲಿ ಸೌಹಾರ್ದ ವಾತಾವರಣ ಮೂಡಿಸುವ ಉದ್ದೇಶದಿಂದ ನಗರದಲ್ಲಿ ಮೇ ತಿಂಗಳಲ್ಲಿ ಸರ್ವಧರ್ಮ ಸಮಾವೇಶ ಆಯೋಜಿಸಲಾಗುವುದು’ ಎಂದು ಕೆಪಿಸಿಸಿ ಉಪಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.

‘ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜಿ.ಹಳ್ಳಿ, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಹಲವು ಕಡೆ ಬಿಜೆಪಿ ಮುಖಂಡರು ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಆದರೆ, ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಯಾವತ್ತೂ ಹಿಂದೂ–ಮುಸ್ಲಿಮರ ಮಧ್ಯೆ ಸಂಘರ್ಷ ನಡೆದಿಲ್ಲ. ಇಲ್ಲಿಯೂ ದುಷ್ಟಶಕ್ತಿಗಳು ತಲೆಹಾಕುವ ಮುನ್ನವೇ ನಾವು ಸೌಹಾರ್ದ ಸಮಾವೇಶ ಮಾಡಲು ಉದ್ದೇಶಿಸಿದ್ದೇವೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಸಮಾವೇಶವನ್ನು ಕಾಂಗ್ರೆಸ್‌ ಪಕ್ಷದಿಂದ ಆಯೋಜಿಸಬೇಕೋ ಅಥವಾ ಎಲ್ಲ ಧರ್ಮಗಳ ಸಂಘಟನೆಗಳನ್ನು ಒಳಗೊಂಡು ಆಯೋಜಿಸಬೇಕೋ ಎಂಬ ಬಗ್ಗೆ ಶೀಘ್ರದಲ್ಲೇ ಚರ್ಚಿಸಿ ತೀರ್ಮಾನಿಸಲಾಗುವುದು. ದಿನಾಂಕ ಹಾಗೂ ಸ್ಥಳವನ್ನೂ ನಿಗದಿ ಮಾಡಲಾಗುವುದು. ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದ ಸುಮಾರು 50ಕ್ಕೂ ಹೆಚ್ಚು ಮಠಾಧೀಶರನ್ನು ಇದಕ್ಕೆ ಆಹ್ವಾನಿಸಲಾಗುವುದು. ಶಾಸಕರಾದ ಪ್ರಿಯಾಂಕ್‌ ಖರ್ಗೆ ಹಾಗೂ ಡಾ.ಅಜಯಸಿಂಗ್‌ ಅವರಿಗೆ ಉಸ್ತುವಾರಿ ವಹಿಸಲಾಗಿದೆ. ಸಮಾವೇಶವು ಜಿಲ್ಲೆಯಲ್ಲಿಯೇ ಐತಿಹಾಸಿಕ ಗುರುತಾಗಿ ಉಳಿಯುವಂತೆ ಮಾಡಲಾಗುವುದು’ ಎಂದರು.

‘ಕೆಪಿಸಿಸಿಗೆ ನನ್ನನ್ನು ಹಾಗೂ ಡಾ.ಶರಣಪ್ರಕಾಶ ಪಾಟೀಲ ಅವರನ್ನು ಉಪಾಧ್ಯಕ್ಷರನ್ನಾಗಿ, ಶರಣಕುಮಾರ ಮೋದಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಪಕ್ಷದ ಮುಖಂಡರು ನಮಗೆ ಜವಾಬ್ದಾರಿ ನೀಡಿದ್ದಾರೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲಿ ಓಡಾಡಿ ಸಂಘಟನೆ ಮಾಡಲಾಗುವುದು. ಪರಿಶಿಷ್ಟರು, ತುಳಿತಕ್ಕೆ ಒಳಗಾದವರು, ನಿಷ್ಠಾವಂತರನ್ನು ಪಕ್ಷಕ್ಕೆ ತೆಗೆದುಕೊಂಡು ಬಲಿಷ್ಠ ಸಂಘಟನೆ ಮಾಡಲಾಗುವುದು. ಸ್ಥಳೀಯವಾಗಿ ಕೆಲವರು ಪಕ್ಷ ಬಿಟ್ಟುಹೋಗಿದ್ದು ಅವರನ್ನು ಪುನಃ ಕರೆತರಲಾಗುವುದು’ ಎಂದೂ ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹೇಗೆ ಸಂಘಟನೆ ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ಏ. 27, 28ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ಪಕ್ಷದ ಉಸ್ತುವಾರಿ ಸುರ್ಜಾವಾಲ ಅವರೂ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ದಿವ್ಯಾ ಬಂಧಿಸದಿರುವುದು ಪೊಲೀಸರ ವೈಫಲ್ಯ
‘ಪಿಎಸ್‌ಐ ನೇಮಕಾತಿ ಪರೀಕ್ಷೆಯ ಹಗರಣದ ಮುಖ್ಯ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರನ್ನು ಇದೂವರೆಗೂ ಬಂಧಿಸದಿರುವುದು ಪೊಲೀಸ್‌ ವೈಫಲ್ಯಕ್ಕೆ ಸಾಕ್ಷಿ. ಇದರ ನೈತಿಕ ಹೊಣೆ ಹೊತ್ತು ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು’ ಎಂದು ತಿಪ್ಪಣ್ಣಪ್ಪ ಕಮಕನೂರ ಆಗ್ರಹಿಸಿದರು.

‘ದಿವ್ಯಾ ಅವರೇನೂ ಸುಷ್ಮಾ ಸ್ವರಾಜ್‌ ರೀತಿ ದೊಡ್ಡ ನಾಯಕಿ ಅಲ್ಲ. ಸಾಮಾನ್ಯ ಸ್ಥಳೀಯ ನಾಯಕಿ ಅಷ್ಟೇ. ಆದರೆ, ಅವರನ್ನೂ ಬಂಧಿಸಲು ಏಕೆ ಸಾಧ್ಯವಾಗುತ್ತಿಲ್ಲ? ಸಿಐಡಿ ಅಧಿಕಾರಿಗಳಿಗೆ ದಕ್ಷತೆ ಇದ್ದರೆ ಇನ್ನು 24 ಗಂಟೆಯಲ್ಲೇ ದಿವ್ಯಾ ಅವರನ್ನು ಬಂಧಿಸಬೇಕು’ ಎಂದೂ ಒತ್ತಾಯಿಸಿದರು.

‘ಪ್ರಕರಣ ಗಮನಿಸುತ್ತ ಹೋದರೆ ಇದರಲ್ಲಿ ಸರ್ಕಾರದ ಬಹಳಷ್ಟು ಮಂದಿ ಭಾಗಿಯಾದ ಶಂಕೆ ವ್ಯಕ್ತವಾಗುತ್ತದೆ. ಹಗರಣದಲ್ಲಿ ಯಾರ್‍ಯಾರಿಗೆ ಎಷ್ಟು ಹಣ ಸಂದಾಯ ಆಗಿದೆ ಎಂಬ ಬಗ್ಗೆಯೂ ನಿಷ್ಪಕ್ಷಪಾತ ತನಿಖೆ ಆಗಬೇಕು. ಇದು ಸಾಧ್ಯವಾಗಬೇಕಾದರೆ ಪ‍್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು’ ಎಂದರು.

ಜಿಲ್ಲಾ ಕಾಂಗ್ರೆಸ್‌ ಮುಖಂಡರಾದ ಅಲ್ಲಮಪ್ರಭು ಪಾಟೀಲ, ನೀಲಕಂಠರಾವ್‌ ಮೂಲಗೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT