ಭಾನುವಾರ, ಸೆಪ್ಟೆಂಬರ್ 25, 2022
28 °C
ಶಹಾಬಾದ್, ಕಮಲಾಪುರ, ಕಾಳಗಿ, ಯಡ್ರಾಮಿ; ಹುಸಿಯಾದ ಜನಪ್ರತಿನಿಧಿಗಳ ಭರವಸೆ

ಕಲಬುರಗಿ | ಹೊಸ ತಾಲ್ಲೂಕು: ಮೇಲ್ದರ್ಜೆಗೊಳ್ಳದ ಆಸ್ಪತ್ರೆಗಳು!

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಜಿಲ್ಲೆಯ ಶಹಾಬಾದ್, ಕಮಲಾಪುರ, ಕಾಳಗಿ ಹಾಗೂ ಯಡ್ರಾಮಿ ತಾಲ್ಲೂಕು ಕೇಂದ್ರಗಳಾಗಿ ಮೂರು ವರ್ಷವಾದರೂ ಸಾರ್ವಜನಿಕ ರಿಗೆ ಅಗತ್ಯವಾಗಿ ಬೇಕಾದ ತಾಲ್ಲೂಕು ಆಸ್ಪತ್ರೆಗಳು ನಿರ್ಮಾಣವಾಗಿಲ್ಲ. ಹೀಗಾಗಿ, ಅಪಘಾತ, ಸುಟ್ಟ ಗಾಯಗಳು, ಹೆರಿಗೆ, ಹೃದ್ರೋಗ ಸಂಬಂಧಿ ಕಾಯಿಲೆ ಗಳು, ಡಯಾಲಿಸಿಸ್ ಸೇರಿದಂತೆ ಹಲವು ಆರೋಗ್ಯ ಸೌಲಭ್ಯಗಳು ಜನರಿಗೆ ಇನ್ನೂ ಮರೀಚಿಕೆಯಾಗಿವೆ.

ಅದರಲ್ಲೂ ಕಲಬುರಗಿ–ಬೀದರ್ ಮುಖ್ಯ ರಸ್ತೆಯಲ್ಲೇ ಇರುವ ಕಮಲಾಪುರ ತಾಲ್ಲೂಕು ಕೇಂದ್ರದಲ್ಲಿ ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರವೇ ಇದೆ! ಹೀಗಾಗಿ, ಆಗಾಗ್ಗೆ ಸಂಭವಿಸುವ ರಸ್ತೆ ಅಪಘಾತದಲ್ಲಿ ಗಾಯಗೊಂಡ ವರನ್ನು ಜಿಲ್ಲಾ ಕೇಂದ್ರ ಕಲಬುರಗಿಗೇ ಕರೆತರಬೇಕಿದೆ. ಕೆಲ ತಿಂಗಳ ಹಿಂದೆ ಕಮಲಾಪುರ ಬಳಿ ಸಂಭವಿಸಿದ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸ್ಫೋಟವಾದ ಪ್ರಕರಣದಲ್ಲಿ ಗಾಯಗೊಂಡವರನ್ನು ಕಲಬುರಗಿಗೇ ಕರೆತರಲಾಗಿತ್ತು. ಅಲ್ಲಿಯೇ ಸುಸಜ್ಜಿತ ತಾಲ್ಲೂಕು ಆಸ್ಪತ್ರೆ ಇದ್ದರೆ ತಕ್ಷಣ ಚಿಕಿತ್ಸೆ ನೀಡಬಹುದಾಗಿತ್ತು. ಕಮಲಾಪುರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು 100 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ತೆರೆಯಲಾಗುವುದು ಎಂದು ಘೋಷಿಸಿದ್ದರು. ಆದರೆ, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಚಿಂಚೋಳಿ ಹಾಗೂ ಚಿತ್ತಾಪುರ ತಾಲ್ಲೂಕಿನ ಹಲವು ಗ್ರಾಮಗಳನ್ನು ಕೂಡಿಸಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಳಗಿ ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ. ಪಟ್ಟಣಕ್ಕೆ ಸಚಿವರು ಭೇಟಿ ನೀಡಿದಾಗ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆದಷ್ಟು ಬೇಗ 50 ಹಾಸಿಗೆ ಆಸ್ಪತ್ರೆಯನ್ನಾಗಿ ಮಾಡುವ ಭರವಸೆ ನೀಡಿದರು. ಆದರೆ ಇಲ್ಲಿಯವರೆಗೂ ಆ ಭರವಸೆಯೂ ಈಡೇರಿಲ್ಲ.

ಪ್ರಸ್ತುತ 30 ಹಾಸಿಗೆ ಹೊಂದಿರುವ ಆರೋಗ್ಯ ಕೇಂದ್ರದಲ್ಲಿ ಕೇವಲ 3 ಜನ ಕಾಯಂ ಮತ್ತು ಒಬ್ಬರು ನಿಯೋಜನೆ ಮೇರೆಗೆ ವೈದ್ಯರಿದ್ದು ಈ ಮೂವರೇ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 6 ಜನ ಸ್ಟಾಫ್ ನರ್ಸ್ ಕರ್ತವ್ಯ ಸಲ್ಲಿಸುತ್ತಿದ್ದು, 10 ಜನ ‘ಡಿ’ ಗ್ರೂಪ್ ನೌಕರರ ಪೈಕಿ ಕೇವಲ 4 ಜನರು ಇಲ್ಲಿದ್ದಾರೆ. ಮಾತ್ರೆ ವಿತರಕರ ಹುದ್ದೆ ಖಾಲಿ ಇದೆ. ಆಂಬುಲೆನ್ಸ್‌ಗೆ ಚಾಲಕರಿಲ್ಲ. 17 ವಸತಿ ಗೃಹಗಳಲ್ಲಿ 3 ಸಂಪೂರ್ಣ ಹಾಳಾಗಿ 14 ದುರಸ್ತಿಗೆ ಕಾಯುತ್ತಿವೆ. ಕಾಳಗಿ ಅಲ್ಲದೆ ಚಿಂಚೋಳಿ ತಾಲ್ಲೂಕಿನ ಬಹುತೇಕ ಊರುಗಳಿಂದ ದಿನನಿತ್ಯ 20 ಒಳರೋಗಿಗಳು, 80 ರಿಂದ 150 ಹೊರ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ರೋಗಿಗಳಿಗೆ ಸಮರ್ಪಕ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಆರೋಗ್ಯ ಕೇಂದ್ರ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿದರೆ ಕನಿಷ್ಠ 50 ಹಾಸಿಗೆ, 13 ಜನ ವೈದ್ಯರು, 20 ಸ್ಟಾಫ್ ನರ್ಸ್, 28 ‘ಡಿ’ ಗ್ರೂಪ್ ಸಿಬ್ಬಂದಿ, ಎಕ್ಸ್ ರೇ, ಪ್ರಯೋಗಾಲಯ, ಆಂಬುಲೆನ್ಸ್, ಫಾರ್ಮಾಸಿಸ್ಟ್ ಸಿಬ್ಬಂದಿ ವ್ಯವಸ್ಥೆ ದೊರೆತು ತಾಲ್ಲೂಕು ಆರೋಗ್ಯ ಅಧಿಕಾರಿ ನೇಮಕ, ಸಿಬ್ಬಂದಿ ಮತ್ತು ಕಚೇರಿ ಕಟ್ಟಡ ಭಾಗ್ಯ ಲಭಿಸಲಿದೆ.

ಯಡ್ರಾಮಿ ತಾಲ್ಲೂಕು ಕೇಂದ್ರವೆಂದು ಘೋಷಣೆ ಮಾಡಿ ಮೂರು ವರ್ಷ ಕಳೆದರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿಲ್ಲ. ಇಲ್ಲಿ ವೈದ್ಯರು, ಬೆಡ್, ನರ್ಸ್‌ ಹಾಗೂ ಡಿ ಗ್ರೂಪ್ ನೌಕರರ ಕೊರತೆ ಇದೆ.

ಆಸ್ಪತ್ರೆಗೆ ಸರಿಯಾಗಿ ವೈದ್ಯರು ಬರುವುದಿಲ್ಲ ಎಂಬ ಆರೋಪಗಳಿವೆ. ಗರ್ಭಿಣಿಯರು ಪರೀಕ್ಷೆಗೆ ಬಂದರೆ ರಕ್ತ ಪರೀಕ್ಷೆ, ಯಂತ್ರ ಸೇರಿದಂತೆ ಇತರೆ ಸಮಸ್ಯೆ ಕಾರಣ ಹೇಳಿ ಜೇವರ್ಗಿಗೆ ಹೋಗಿ ಎಂದು ವೈದ್ಯರು ಹೇಳುತ್ತಾರೆ ಎನ್ನುತ್ತಾರೆ ಗರ್ಭಿಣಿಯೊಬ್ಬರು. ಇದರಿಂದಾಗಿ ಜೇವರ್ಗಿ, ಶಹಾಪುರ, ಕಲಬುರಗಿ ಅಥವಾ ವಿಜಯಪುರಕ್ಕೆ ಚಿಕಿತ್ಸೆ ಪಡೆಯಲು ತೆರಳುತ್ತಾರೆ.

ಅಪಘಾತ ಇನ್ನಿತರ ಸಮಸ್ಯೆಗಳು ಎದುರಾದಾಗ ಯಡ್ರಾಮಿ ಆಸ್ಪತ್ರೆಗೆ ಬಂದರೆ ಜೇವರ್ಗಿಗೆ ಕರೆದುಕೊಂಡು ಹೋಗಿ ಎಂಬ ಉತ್ತರ ಇಲ್ಲಿ ಸಿಗುತ್ತದೆ. ಅಪಘಾತ ಸಂಭವಿಸಿದ ಸ್ಥಳದಿಂದ ವ್ಯಕ್ತಿಯನ್ನು ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ಯಲು ತಕ್ಷಣಕ್ಕೆ ಆಂಬುಲೆನ್ಸ್ ಸಿಗದೆ ಖಾಸಗಿ ವಾಹನಗಳ ಮೊರೆ ಹೋಗುತ್ತಾರೆ. ಕೆಲವು ಬಾರಿ ಖಾಸಗಿ ವಾಹನ ಸಹ ಸಿಗದೇ ಸಾವನ್ನಪ್ಪಿರುವವರ ಉದಾಹರಣೆಗಳು ಇಲ್ಲಿವೆ.

‘ಸರ್ಕಾರದ ಬಳಿ ಹಣವಿದ್ದಂತಿಲ್ಲ’
ಯಡ್ರಾಮಿಯಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ಒಂದೂವರೆ ವರ್ಷದ ಹಿಂದೆಯೇ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದೆ. ಅಲ್ಲದೇ, ಯಡ್ರಾಮಿಯಲ್ಲಿ ಮಿನಿ ವಿಧಾನಸೌಧ ಹಾಗೂ ಕ್ಷೇತ್ರದ ಮೂರು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೊಡುವಂತೆಯೂ ಕೋರಿದ್ದೆ. 100 ಪಿಎಚ್‌ಸಿಗಳನ್ನು ಮಂಜೂರು ಮಾಡಿ, ಅದರಲ್ಲಿ ಮೂರು ಜೇವರ್ಗಿ ವಿಧಾನಸಭಾ ಕ್ಷೇತ್ರಕ್ಕೆ ನೀಡುವುದಾಗಿ ಹೇಳಿದ್ದರು. ಆದರೆ, ಸರ್ಕಾರದ ಬಳಿ ಹಣವಿದ್ದಂತಿಲ್ಲ. ಈ ಬಾರಿಯ ಅಧಿವೇಶನದಲ್ಲಿಯೂ ಮತ್ತೆ ಮನವಿ ಮಾಡುತ್ತೇನೆ.
–ಡಾ. ಅಜಯ್ ಸಿಂಗ್, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ

‘ಶೀಘ್ರ ಮಂಜೂರಾತಿ’
ಕಮಲಾಪುರ ಆಸ್ಪತ್ರೆಯನ್ನು 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಆದಷ್ಟು ಶೀಘ್ರ ಸರ್ಕಾರದಿಂದ ಮಂಜೂರಾತಿ ಪಡೆಯಲಾಗುವುದು.
–ಬಸವರಾಜ ಮತ್ತಿಮಡು, ಶಾಸಕ

ಇಲಾಖೆಗೆ ಪ್ರಸ್ತಾವ ಸಲ್ಲಿಕೆ
ಹೊಸ ತಾಲ್ಲೂಕುಗಳಿಗೆ ಅಗತ್ಯವಿರುವ ಕಟ್ಟಡ, ವೈದ್ಯಕೀಯ ಸಿಬ್ಬಂದಿಯನ್ನು ಮಂಜೂರು ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಸಚಿವರೂ ಆ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.
–ಡಾ. ಗಿರೀಶ್ ಡಿ. ಬದೋಲೆ, ಜಿ.ಪಂ. ಸಿಇಒ

‘ಹೊಸ ಕಟ್ಟಡ ನಿರ್ಮಾಣ ಅಗತ್ಯ’
ಶಹಾಬಾದ್‌ನಲ್ಲಿ ತಾಲ್ಲೂಕು ಆಸ್ಪತ್ರೆಯಾದರೆ ಸುಮಾರು 10 ರಿಂದ 12 ವಿಶೇಷ ತಜ್ಞ ವೈದ್ಯರು 100 ಹಾಸಿಗೆ, 40 ನರ್ಸ್‌ಗಳು, 28 ಡಿ ಗ್ರೂಪ್ ಸಿಬ್ಬಂದಿ ಬೇಕಾಗುತ್ತದೆ. ಆದರೆ ಈಗಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇದಕ್ಕೆ ಸಾಕಷ್ಟು ಜಾಗವಿಲ್ಲದ ಕಾರಣ ಹೊಸ ಕಟ್ಟಡ ನಿರ್ಮಾಣವೂ ಮಾಡಬೇಕಾಗುತ್ತದೆ.
ಡಾ.ಅಮರದೀಪ ಪವಾರ, ತಾಲ್ಲೂಕು ಆರೋಗ್ಯಾಧಿಕಾರಿ, ಶಹಾಬಾದ್

‘ತಕ್ಷಣ ಆಸ್ಪತ್ರೆ ಮೇಲ್ದರ್ಜೆಗೇರಿಸಿ’
ಶಹಾಬಾದ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾಮರ್ಥ್ಯ ಮೀರಿ ಹೆಚ್ಚಿನ ರೋಗಿಗಳನ್ನು ನೋಡಲಾಗುತ್ತಿದೆ. ತಾಲ್ಲೂಕಿನ ಜನಸಂಖ್ಯೆ ಹೆಚ್ಚಿದಂತೆ ಅದಕ್ಕೆ ತಕ್ಕುದಾದ ಸೌಲಭ್ಯಗಳು ಇಲ್ಲ. ತಾಲ್ಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಇಎಸ್‍ಐ ಆಸ್ಪತ್ರೆಯನ್ನು ತಕ್ಷಣ ಪ್ರಾರಂಭಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
–ಜಗನ್ನಾಥ ಎಚ್‌.ಎಸ್‌., ಜಿಲ್ಲಾ ಅಧ್ಯಕ್ಷ, ಎಐಡಿವೈಒ

‘ಹೆಚ್ಚು ಸಿಬ್ಬಂದಿ ಬೇಕು’
ಬೇರೆ ತಾಲ್ಲೂಕು ಆಸ್ಪತ್ರೆಗೆ ಹೋಲಿಸಿದರೆ ಇಲ್ಲಿನ ಸಿಬ್ಬಂದಿ ವರ್ಗ ರೋಗಿಗಳಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಾರೆ. ಸರ್ಕಾರ ಇನ್ನೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು.
–ಪ್ರಸಾದ ಹಳ್ಳಿ, ತೆಂಗಳಿ, ಕಾಳಗಿ ತಾಲ್ಲೂಕು

ತಾಲ್ಲೂಕು ಆಸ್ಪತ್ರೆಯೂ ಇಲ್ಲ, ಇಎಸ್‌ಐ ಆರಂಭವೂ ಇಲ್ಲ
ಜಿಲ್ಲೆಯ ಏಕೈಕ ನಗರಸಭೆ ಎಂಬ ಖ್ಯಾತಿ ಪಡೆದ ಶಹಾಬಾದ್‌ನಲ್ಲಿಯೂ ಆರೋಗ್ಯ ಸೇವೆಗಳು ಉತ್ತಮವಾಗಿಲ್ಲ. ವಾಡಿ, ಶಹಾಬಾದ್ ಸುತ್ತಮುತ್ತ ಹಲವು ಸಿಮೆಂಟ್ ಕಾರ್ಖಾನೆಗಳು, ಕಲ್ಲಿನ ಕಣಿಗಳು ಇರುವುದರಿಂದ ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಆಗಾಗ್ಗೆ ಅನಾರೋಗ್ಯಕ್ಕೀಡಾಗುವುದು, ಅವಘಡಗಳಾಗಿ ಗಾಯಗೊಳ್ಳುವ ಘಟನೆಗಳು ನಡೆಯುತ್ತವೆ. ಅಂತಹ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗಾಗಿ ಕಲಬುರಗಿ ಅಥವಾ ಚಿತ್ತಾಪುರಕ್ಕೆ ಕರೆದುಕೊಂಡು ಹೋಗಬೇಕಿದೆ. ತಾಲ್ಲೂಕು ಆಸ್ಪತ್ರೆಗಾಗಿ ಹೋರಾಟಗಳು ನಡೆದರು ಇನ್ನೂ ಆರಂಭವಾಗಿಲ್ಲ. ಮುರುಗೇಶ ನಿರಾಣಿ ಅವರು ಕೋವಿಡ್ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಪಾಳು ಬಿದ್ದಿದ್ದ ಇಎಸ್‌ಐ ಆಸ್ಪತ್ರೆಯ ನವೀಕರಣಕ್ಕೆ ಹಣ ಬಿಡುಗಡೆ ಮಾಡಿದ್ದರು. ಕಟ್ಟಡ ಸಿದ್ಧವಾಗಿದ್ದರೂ ಆಸ್ಪತ್ರೆ ಇನ್ನೂ ಆರಂಭವಾಗಿಲ್ಲ.

ಶಹಾಬಾದ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನನಿತ್ಯ ಸುಮಾರು 350 ರಿಂದ 400 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ರೋಗಿಗಳಿಗೆ ಬೇಕಾದ ಅಗತ್ಯ ಔಷಧಗಳ ಪೂರೈಕೆಯಿಲ್ಲದಿರುವುದರಿಂದ ತೊಂದರೆಯೂ ಅನುಭವಿಸುವಂತಾಗಿದೆ. ತಿಂಗಳಿಗೆ 60 ರಿಂದ 80 ಹೆರಿಗೆಗಳು ಆಗುತ್ತವೆ. 30 ರಿಂದ 40 ಕುಟುಂಬ ಯೋಜನೆ ಶಸ್ತ್ರ ಚಿಕಿತ್ಸೆಗಳಾಗುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು