ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌–ಜೆಡಿಎಸ್‌ ಜಂಟಿ ಪ್ರಚಾರಕ್ಕೆ ನಿರ್ಧಾರ

ಖರ್ಗೆ ಪರ ಪ್ರಚಾರಕ್ಕೆ ಕುಮಾರಸ್ವಾಮಿ, ಸಿದ್ದರಾಮಯ್ಯ
Last Updated 3 ಏಪ್ರಿಲ್ 2019, 11:28 IST
ಅಕ್ಷರ ಗಾತ್ರ

ಕಲಬುರ್ಗಿ: ‘ಗುಲಬರ್ಗಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಜಂಟಿಯಾಗಿ ಮತ್ತು ಕೆಲವೆಡೆ ಪ್ರತ್ಯೇಕವಾಗಿ ಪ್ರಚಾರ ನಡೆಸಲು ನಿರ್ಧರಿಸಿದ್ದೇವೆ’ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಬುಧವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ತಡಕಲ್‌, ‘ಉಭಯ ಪಕ್ಷಗಳ ಸಮನ್ವಯ ಸಮಿತಿ ರಚಿಸಿ ಜಂಟಿ ಸಭೆಗಳನ್ನು ನಡೆಸಿದ್ದೇವೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಪರಿಹರಿಸಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ’ ಎಂದರು.

‘ದೇವೇಗೌಡ ಮತ್ತು ಖರ್ಗೆ ಅವರು ಮಹಾಘಟಬಂಧನದ ನಮ್ಮ ರಾಜ್ಯದ ಪ್ರಮುಖ ನಾಯಕರು. ಅವರಿಬ್ಬರನ್ನೂ ಗೆಲ್ಲಿಸುವ ಹೊಣೆ ನಮ್ಮ ಮೇಲಿದೆ. ಖರ್ಗೆ ಅವರನ್ನು ಬೆಂಬಲಿಸುವಂತೆ ನಮ್ಮ ವರಿಷ್ಠರು ಸೂಚಿಸಿದ್ದು, ಅವರ ಗೆಲುವಿನ ಮಾರ್ಗವನ್ನು ನಾವು ಸುಗಮ ಮಾಡುತ್ತೇವೆ’ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದ ಜಿಲ್ಲಾ ಘಟಕದ ಉಸ್ತುವಾರಿ ಡಾ.ಶರಣಪ್ರಕಾಶ ಪಾಟೀಲ, ‘ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮಧ್ಯೆ ಸ್ಪರ್ಧೆ ಇತ್ತು. ಈಗ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೀದರ್‌ಗೆ ಬಂದಾಗ ಸ್ಪಷ್ಟ ಸಂದೇಶ ನೀಡಿದ್ದು, ಗುರುಮಠಕಲ್‌ ಕ್ಷೇತ್ರದಲ್ಲಿಯ ಗೊಂದಲವೂ ಪರಿಹಾರವಾಗಿದೆ’ ಎಂದರು.

ಜೇವರ್ಗಿ ಶಾಸಕ ಡಾ.ಅಜಯ್‌ ಸಿಂಗ್‌, ‘ಜೇವರ್ಗಿ ಕ್ಷೇತ್ರದಲ್ಲಿ ಜೆಡಿಎಸ್‌ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಮತ್ತು ನಾನು ಒಟ್ಟಾಗಿ ಪ್ರಚಾರ ಮಾಡುತ್ತೇವೆ. ಖರ್ಗೆ ಅವರಿಗೆ ಹೆಚ್ಚಿನ ಲೀಡ್‌ ಕೊಡುತ್ತೇವೆ. ಇದರಲ್ಲಿ ಅನುಮಾನ ಬೇಡ’ ಎಂದರು.

ಜೆಡಿಎಸ್‌ ಮುಖಂಡ ರೇವೂ ನಾಯಕ ಬೆಳಮಗಿ, ‘ಖರ್ಗೆ ವಿರುದ್ಧ ನಾನು ಎರಡು ಬಾರಿ ಸ್ಪರ್ಧಿಸಿದ್ದೆ. ಭಗವಂತ ಅವರ ಕಡೆ ಇರೋದ್ರಿಂದ ನಾನು ಗೆಲ್ಲಲಾಗಲಿಲ್ಲ. ಬಂಜಾರ ಸಮಾಜದವರಿಗೆ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ನಿಮ್ಮ ಕೆಲಸವನ್ನು ನಾನು ಮಾಡಿದ್ದರೆ ಖರ್ಗೆ ಅವರಿಗೆ ಮತ ನೀಡಿ ಗೆಲ್ಲಿಸಿ’ ಎಂದು ಹೇಳಿದರು.

ಶಾಸಕ ಎಂ.ವೈ. ಪಾಟೀಲ,ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಜೆಡಿಎಸ್‌ ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ, ದೇವೇಗೌಡ ತೆಲ್ಲೂರ, ಪೊದ್ದಾರ, ಕಾಂಗ್ರೆಸ್‌ ಮುಖಂಡರಾದ ಭೀಮರೆಡ್ಡಿ ಪಾಟೀಲ ಕುರಕುಂದಾ, ದಿಲೀಪ ಪಾಟೀಲ ಇದ್ದರು.

ಏ.4ರಂದು ಖರ್ಗೆ ನಾಮಪತ್ರ

‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಏ.4ರಂದು ನಾಮಪತ್ರ ಸಲ್ಲಿಸಲಿದ್ದಾರೆ.

‘ಬೆಳಿಗ್ಗೆ 11ಕ್ಕೆ ಇಲ್ಲಿಯ ನಗರೇಶ್ವರ ಶಾಲೆಯಿಂದ ಮೆರವಣಿಗೆ ಹೊರಡಲಿದೆ. ಜಗತ್‌ ವೃತ್ತದ ಬಳಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ನಾಮಪತ್ರ ಸಲ್ಲಿಸುವರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಸಚಿವರಾಜ ರಾಜಶೇಖರ ಪಾಟೀಲ, ರಹೀಂ ಖಾನ್‌, ಉಭಯ ಪಕ್ಷಗಳ ಸ್ಥಳೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಕೋಲಿ, ಗೊಂಡ: ಮೀಸಲಾತಿ ತಿರಸ್ಕರಿಸಿದ್ದೇಕೆ

‘ಕೋಲಿ, ಗೊಂಡ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ರಾಜ್ಯ ಸರ್ಕಾರ ಮಾಡಿದ ಶಿಫಾರಸನ್ನು ಕೇಂದ್ರದ ಬಿಜೆಪಿ ಸರ್ಕಾರ ಏಕೆ ತಿರಸ್ಕರಿಸಿತು? ಬಿಜೆಪಿಗರು ಈ ಬಗ್ಗೆ ಉತ್ತರ ನೀಡಬೇಕು’ ಎಂದು ಪ್ರಿಯಾಂಕ್‌ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ ಆಗ್ರಹಿಸಿದರು.

‘ಕೋಲಿ, ಕಬ್ಬಲಿಗ, ಟೋಕರೆ ಕೋಳಿ ಮತ್ತಿತರ ಪರ್ಯಾಯ ಪದಗಳಿಂದ ಕರೆಯಲ್ಪಡುತ್ತಿರುವ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಕುಲ ಅಧ್ಯಯನ ವರದಿಯೊಂದಿಗೆ ಕೇಂದ್ರಕ್ಕೆ ಎರಡು ಬಾರಿ ಪ್ರಸ್ತಾವ ಸಲ್ಲಿಸಿತ್ತು. ಮಲ್ಲಿಕಾರ್ಜುನ ಖರ್ಗೆ ಅವರೂ ಪತ್ರ ಬರೆದು ಕೇಂದ್ರ ಮೇಲೆ ಒತ್ತಡ ಹೇರಿದ್ದರು. ಆದರೆ, ಕೇಂದ್ರ ಎರಡೂ ಶಿಫಾರಸನ್ನು ತಿರಸ್ಕರಿಸಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಮತ್ತೆ ಪ್ರಸ್ತಾವ–ನೆನಪೋಲೆ ಕಳಿಸಿದ್ದು, ಎರಡು ಬಾರಿ ನಾನೇ ಸಂಬಂಧಿಸಿದವರನ್ನು ಭೇಟಿಯಾಗಿ ಬಂದಿದ್ದೇನೆ’ ಎಂದ ಪ್ರಿಯಾಂಕ್‌ ಖರ್ಗೆ ಹೇಳಿದರು.

‘ಕಲಬುರ್ಗಿ, ಬೀದರ್‌, ಯಾದಗಿರಿಯಲ್ಲಿರುವ ಗೊಂಡ ಕುರುಬ ಸಮಾಜವನ್ನು 2 ಎ ಜಾತಿಯಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದರೂ ಅದನ್ನೂಕೇಂದ್ರ ತಿರಸ್ಕರಿಸಿದೆ. ಮರು ಪರಿಶೀಲನೆಗೆ ಪತ್ರ ಬರೆದಿದ್ದರೂ ಆ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ಅವರು ಆರೋಪಿಸಿದರು.

‘ಬಿಜೆಪಿಯವರು ಮೀಸಲಾತಿ ವಿರೋಧಿಗಳು. ಹೀಗಾಗಿ ಈ ಸಮುದಾಯಗಳಿಗೆ ಮೀಸಲಾತಿ ನೀಡುತ್ತಿಲ್ಲ. ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶದಲ್ಲಿ ಈ ಸಮುದಾಯಗಳಿಗೆ ಮೀಸಲಾತಿ ಇದ್ದರೂ ನಮ್ಮ ರಾಜ್ಯದಲ್ಲಿಯವರಿಗೆ ಮೀಸಲಾತಿ ನೀಡುತ್ತಿಲ್ಲ’ ಎಂದು ಶರಣಪ್ರಕಾಶ ಟೀಕಿಸಿದರು.

‘ತಿಪ್ಪಣ್ಣಪ್ಪ ಕಮಕನೂರ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ನೇಮಿಸಲು ಈಗಲೂ ಅವಕಾಶ ಇದೆ. ಇದಕ್ಕೆ ಬಿಜೆಪಿಯವರು ಮನಸ್ಸುಮಾಡಿ ರಾಜ್ಯಪಾಲರಿಗೆ ಹೇಳಬೇಕು. ಈಗ ಚುನಾವಣೆ ಇರುವುದರಿಂದ ನಾನೇನು ಹೆಚ್ಚು ಮಾತನಾಡುವುದಿಲ್ಲ’ ಎಂದು ಪ್ರಿಯಾಂಕ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT