ಭಾನುವಾರ, ನವೆಂಬರ್ 29, 2020
20 °C
ಆಳಂದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅಸಮರ್ಪಕ ಆರೋಪ: ಪ್ರತಿಭಟನೆ

ಮರು ಚುನಾವಣೆಗೆ ಕಾಂಗ್ರೆಸ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ’ಶುಕ್ರವಾರ ನಡೆದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯು ಅಸಮರ್ಪಕವಾಗಿದೆ. ಜಿಲ್ಲಾಧಿಕಾರಿಗಳು ನ್ಯಾಯಸಮ್ಮತವಾಗಿ ಮತ್ತೆ ಮರು ಚುನಾವಣೆ ಕೈಗೊಳ್ಳಬೇಕು‘ ಎಂದು ಒತ್ತಾಯಿಸಿ ಪುರಸಭೆಯ ಕಾಂಗ್ರೆಸ್‌ ಸದಸ್ಯರು ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಪ್ರಕ್ರಿಯೆಯು ನ್ಯಾಯಸಮ್ಮತವಾಗಿ ನಡೆಯುತ್ತಿಲ್ಲ ಎಂದು ಆಪಾದಿಸಿ ಕಾಂಗ್ರೆಸ್‌ನ 12 ಸದಸ್ಯರು ಸಭೆ ಬಹಿಷ್ಕರಿಸಿ ಹೊರಬಂದರು. ನಂತರ ಪುರಸಭೆ ಮುಖ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಚುನಾವಣಾಧಿಕಾರಿಗಳಿಗೆ, ಬಿಜೆಪಿ ಮುಖಂಡರಿಗೆ ಧಿಕ್ಕಾರ ಕೂಗಿದರು.

ಸದಸ್ಯರಾದ ಫಿರ್ದೋಶ್‌ ಅನ್ಸಾರಿ, ಲಕ್ಷ್ಮಣ, ಶಿವಪುತ್ರ ನಡಗೇರಿ ಮಾತನಾಡಿ, ’ಮತ ಹಾಕಲು ಸಭೆಯಲ್ಲಿದ್ದ ಸದಸ್ಯರಿಗೆ ಬೆದರಿಕೆ ಹಾಕಿ ಕೈ ಎತ್ತಲು ಸೂಚನೆ ನೀಡಲಾಗುತ್ತಿದೆ. ಕೆಲ ಸದಸ್ಯರು ಕೈ ಎತ್ತದ ಕಾರಣ ಒತ್ತಾಯ ಪೂರ್ವಕ ಕೈ ಎತ್ತಿಸಲಾಗಿದೆ‘ ಎಂದು ಆರೋಪಿಸಿದರು.

ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಕವಿತಾ ನಾಯಕ ಮಾತನಾಡಿ, ’ಚುನಾವಣೆ ಕಾಲಕ್ಕೆ ಕಾಂಗ್ರೆಸ್‌ ಸದಸ್ಯರ ಮೊಬೈಲ್‌ ಮಾತ್ರ ವಶಕ್ಕೆ ಪಡೆದಿದ್ದಾರೆ. ಎಲ್ಲ ಸದಸ್ಯರಿಗೂ ಚುನಾವಣೆ ನಿಯಮದ ಕುರಿತು ಸಮರ್ಪಕ ಮಾಹಿತಿ ನೀಡಿಲ್ಲ‘ ಎಂದು ಆಪಾದಿಸಿದರು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಳಂದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವದಲ್ಲದೇ, ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮ ಪ್ಯಾಟಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಶರಣಬಸಪ್ಪ ವಾಗೆ, ಮುಖಂಡರಾದ ಹಮೀದ್‌ ಅನ್ಸಾರಿ, ಸಂಜಯ ನಾಯಕ, ಸುಭಾಷ ಪೌಜಿ, ಲಿಂಗರಾಜ ಜಾನೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.