ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಪ್ರದೇಶ ಕುರುಬ ಸಂಘದ ಜಿಲ್ಲಾ ಘಟಕ ಹಾಗೂ ಹಿಂದುಳಿದ ಸಮುದಾಯಗಳ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರು, ಕಾರ್ಯಕರ್ತರು ನಗರದ ಜಗತ್ ವೃತ್ತದಲ್ಲಿ ಮಧ್ಯಾಹ್ನ 3.30ರ ವೇಳೆಗೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು, ಟೈರ್ ಹಾಗೂ ರಾಜ್ಯಪಾಲರ ಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ, ರಾಜ್ಯಪಾಲರ ವಿರುದ್ಧ ಘೋಷಣೆ ಮೊಳಗಿಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ, ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್ ಸರ್ಕಾರದ ಏಳಿಗೆ ಸಹಿಸುತ್ತಿಲ್ಲ. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಅಧಿಕಾರ ಕಸಿಯಲು ಯತ್ನಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಕಪ್ಪು ಮಸಿ ಬಳಿಯಲು ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡು ಸಿದ್ದರಾಮಯ್ಯ ಸರ್ಕಾರ ಅಸ್ಥಿರಗೊಳಿಸಲಾಗುತ್ತಿದೆ’ ಎಂದು ಆರೋಪಿಸಿದರು.
‘ಹಿಂದಿನ ಸರ್ಕಾರದ ಅವಧಿಯಲ್ಲೂ ಇದೇ ರಾಜ್ಯಪಾಲರಿದ್ದರು. ಆಗ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಕುಮಾರಸ್ವಾಮಿ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಆಗ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದಾಗ ರಾಜ್ಯಪಾಲರು ಅನುಮತಿ ನಿರಾಕರಿಸಿರು. ಎಲ್ಲರಿಗೂ ಒಂದೇ ಅಳತೆಗೋಲು ಇರಬೇಕು. ಆಗ ಅನುಮತಿ ನಿರಾಕರಿಸಿದ್ದ ರಾಜ್ಯಪಾಲರು ಈಗ ಕೇಂದ್ರದ ದಾಳವಾಗಿ ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕೆ ಅನುಮತಿ ನೀಡಿದ್ದೀರಿ, ಯಾಕೆ’ ಎಂದು ಪ್ರಶ್ನಿಸಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಮುಖಂಡ ಸುಭಾಷ ರಾಠೋಡ್ ಮಾತನಾಡಿದರು.
ಮುಖಂಡರಾದ ನೀಲಕಂಠರಾವ್ ಮೂಲಗೆ, ಅರುಣಕುಮಾರ ಪಾಟೀಲ, ಅರವಿಂದ ಚವ್ಹಾಣ, ರಾಜು ಕಪನೂರು, ಲಚ್ಚಪ್ಪ ಜಮಾದಾರ, ಲಿಂಗರಾಜ ಕಣ್ಣಿ, ಧರ್ಮರಾಜ ಹೇರೂರು, ಸುನೀಲ ಮಾನಪಡೆ, ಮಲ್ಲಿಕಾರ್ಜುನ ನೀಲೂರು, ಶಿವಕುಮಾರ ಹೊನಗುಂಟಾ, ಸಚಿನ್ ಶಿರವಾಳ, ಮಲ್ಲಿಕಾರ್ಜುನ ಪೂಜಾರಿ, ಈರಣ್ಣ ಜಳಕಿ, ರೇಣುಕಾ ಸಿಂಗೆ, ಸಿದ್ರಾಮ ಪ್ಯಾಟಿ, ಸೀನು ಲಾಖೆ, ರೇಣುಕಾ ಹೋಳ್ಕರ್, ವಿಜಯಕುಮಾರ ಕಟ್ಟಿಮನಿ, ರಾಹುಲ ಹೊನ್ನಳ್ಳಿ, ಶರಣಗೌಡ ಪಾಟೀಲ, ಶಫಿಕ್ ಅಹ್ಮದ್, ಪ್ರವೀಣಕುಮಾರ, ಕುಮಾರ ಯಾದವ, ಶಿವಾನಂದ ತೊರವಿ, ಚಂದು ಜಾಧವ, ಸಿದ್ದು ಪೂಜಾರಿ, ಸುರೇಶ ಪೂಜಾರಿ, ಪ್ರವೀಣ ಪೂಜಾರಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
ಸಂಚಾರ ದಟ್ಟಣೆ: ಜಗತ್ ವೃತ್ತದಲ್ಲಿ ಕಾಂಗ್ರೆಸ್ ಪ್ರತಿಭಟನೆಯಿಂದ ಜಗತ್ ವೃತ್ತ ಸಂಪರ್ಕಿಸುವ ಎಸ್‌ವಿಪಿ ಸರ್ಕಲ್ ಮಾರ್ಗ, ಕೆಬಿಎನ್ ದರ್ಗಾ ಮಾರ್ಗ, ಸೂಪರ್‌ಮಾರ್ಕೆಟ್ ಮಾರ್ಗ ಹಾಗೂ ಅಪ್ಪಕೆರೆಯ ಕಡೆಯ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿ, ವಾಹನಗಳ ಸವಾರರು ಪರದಾಡಿದರು.
- ಮುಖಂಡರ ಬಂಧನ ಬಿಡುಗಡೆ
ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕ ಹಾಗೂ ಹಿಂದುಳಿದ ಸಮುದಾಯಗಳ ಮುಖಂಡರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಟೈರ್‌ಗೆ ಬೆಂಕಿ ಹೆಚ್ಚಿ ಮಾನವ ಸರಪಳಿ ನಿರ್ಮಿಸಿ ವೃತ್ತದಲ್ಲಿ ವಾಹನಗಳ ಸಂಚಾರ ತಡೆದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಪ್ರತಿಭಟನೆ ಮೊಟಕುಗೊಳಿಸಿ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಿ ಎಂದು ಕೋರಿದರು. ಆದರೆ ಪ್ರತಿಭಟನಕಾರರು ತಮ್ಮ ಪ್ರತಿಭಟನೆ ಮುಂದುವರಿಸಿದರು. ನಂತರ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ಮಾತನಾಡಿದ ಪ್ರದೇಶ ಕುರುಬ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ‘ಸಿದ್ದರಾಮಯ್ಯ 45 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಜನರ ಸೇವೆ ಮಾಡಿದ್ದಾರೆ. ಆದರೆ ಇದೀಗ ಆರ್‌ಎಸ್‌ಎಸ್ ಬಿಜೆಪಿ ಹಾಗೂ ಜೆಡಿಎಸ್ ಸೇರಿಕೊಂಡು ರಾಜ್ಯಪಾಲರ ಮೂಲಕ ಅವರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ವ್ಯಕ್ತಿಯೊಬ್ಬ 2ನೇ ಸಲ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡುತ್ತಿರುವುದು ಸಹಿಸದೇ ಇಂಥ ಕೃತ್ಯಕ್ಕೆ ಇಳಿದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಗವಂತರಾಯಗೌಡ ಪಾಟೀಲ ಮಹೇಶ ಧರಿ ಗಣಪತಿ ಮಿಣಜಗಿ ರವಿಗೊಂಡ ಕಟ್ಟಿಮನಿ ಮಲ್ಲಿಕಾರ್ಜುನ ಭಂಕೂರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
‘ಬಿಜೆಪಿ–ಜೆಡಿಎಸ್ ಕುತಂತ್ರದ ಭಾಗ’
‘ಬಹುಮತ ಇರುವ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿಯವರ ದ್ವೇಷದ ಮನೋಭಾವನೆ ಸರಿಯಲ್ಲ. ರಾಜ್ಯಪಾಲರು ಷೋಕಾಸ್ ನೋಟಿಸ್ ಹಿಂಪಡೆದು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕು’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ‘ಸಿದ್ದರಾಮಯ್ಯನವರ ಜನಪರ ಆಡಳಿತ ಸಹಿಸದೇ ಬಿಜೆಪಿ-ಜೆಡಿಎಸ್ ನಿರಂತರ ಕುತಂತ್ರಗಳನ್ನು ಮಾಡುತ್ತಲೇ ಇವೆ. ಮುಡಾ ನಿವೇಶನಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವುದು ಕೂಡ ಈ ಕುತಂತ್ರದ ಭಾಗವಾಗಿದೆ’ ಎಂದು ಪ್ರಕಟಣೆಯಲ್ಲಿ ಅವರು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.