ಮಂಗಳವಾರ, ನವೆಂಬರ್ 19, 2019
29 °C
'ಕಲಬುರ್ಗಿ ಜಿಲ್ಲೆ ನಿರ್ಲಕ್ಷಿಸಿದ ಮುಖ್ಯಮಂತ್ರಿ'

ಬರ–ನೆರೆ ಪರಿಹಾರ | ಸರ್ಕಾರಗಳ ಮಲತಾಯಿ ಧೋರಣೆ: ಮಹಿಳಾ ಕಾಂಗ್ರೆಸ್‌ ಖಂಡನೆ

Published:
Updated:
Prajavani

ಕಲಬುರ್ಗಿ: ‘ಪ್ರವಾಹ ಪರಿಹಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತಾಳುತ್ತಿವೆ’ ಎಂದು ಆರೋಪಿಸಿ ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ರೈಲು ನಿಲ್ದಾಣದ ಬಳಿ ಇರುವ ಅಂಚೆ ಕಚೇರಿ ಎದುರು ಸೇರಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನೆರೆ– ಬರದಿಂದ ನಾಶವಾದ ವಿವಿಧ ಬೆಳೆಯ ಸಸಿಗಳನ್ನು ಪ್ರಧಾನಿ ಕಚೇರಿಗೆ ಕೋರಿಯರ್‌ ಮಾಡುವ ಮೂಲಕ ಪರಿಸ್ಥಿತಿಯ ಮನವರಿಕೆ ಮಾಡಲು ಯತ್ನಿಸಿದರು.

ಭೀಮಾ ನದಿ ಪ್ರವಾಹದಿಂದಾಗಿ ಕಲಬುರ್ಗಿ, ಅಫಜಲಪುರ, ಚಿತ್ತಾಪುರ ಹಾಗೂ ಜೇವರ್ಗಿ ತಾಲ್ಲೂಕಿನಲ್ಲಿ ಅಪಾರ ಹಾನಿ ಸಂಭವಿಸಿದೆ. ರೈತರು ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಪಕ್ಕದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಭೇಟಿ ನೀಡಿದ ಸಚಿವರ ತಂಡ ಸೌಜನ್ಯಕ್ಕೂ ಕಲಬುರ್ಗಿ ಬಗ್ಗೆ ಮಾತನಾಡಿಲ್ಲ’ ಎಂದೂ ದೂರಿದರು.

ಅರ್ಧ ಜಿಲ್ಲೆ ಪ್ರವಾಹದಿಂದ ನಲುಗಿದ್ದರೆ ಇನ್ನರ್ಧ ಬರದಿಂದ ತತ್ತರಿಸುತ್ತಿದೆ. ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವೊಬ್ಬ ಮಂತ್ರಿಯೂ ಜನರ ಗೋಳು ಕೇಳಲು ತಯಾರಿಲ್ಲ. ಉದ್ದೇಶಪೂರ್ವಕವಾಗಿ ಜಿಲ್ಲೆಯ ಜನರನ್ನು ಕಡೆಗಣಿಸುತ್ತಿದ್ದಾರೆ ಎಂದೂ ಆರೋಪಿಸಿದರು.

ಒಂದಷ್ಟು ರೈತರು ಅಲ್ಲಲ್ಲಿ ಬೆಳೆದ ಹೆಸರು, ಉದ್ದು ಈಗ ಮಾರುಕಟ್ಟೆ ತರುತ್ತಿದ್ದಾರೆ. ಇವುಗಳ ದರ ಕುಸಿದಿದ್ದು, ಖರೀದಿ ಕೇಂದ್ರ ತೆರೆಯಬೇಕು ಎಂಬ ರೈತರ ಬೇಡಿಕೆಗಳಿಗೂ ಕಿವಿಗೊಟ್ಟಿಲ್ಲ. ಇಂಥ ರೈತ ವಿರೋಧ ಸರ್ಕಾರ ನಮಗೆ ಬೇಕಿಲ್ಲ ಎಂದು ಘೋಷಣೆ ಮೊಳಗಿಸಿದರು.

ಖರೀದಿ ಕೇಂದ್ರ ತೆರೆಯುವ ಬಗ್ಗೆ ಮುಖ್ಯಮಂತ್ರಿ ತಕ್ಷಣ ಪ್ರತಿಕ್ರಿಯೆ ನೀಡಬೇಕು, ಬರ ಹಾಗೂ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆ ನಡೆಸಿ ತಕ್ಷಣ ಪರಿಹಾರ ಕಲ್ಪಿಸಬೇಕು, ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ಪ್ರವಾಹ ಪರಿಹಾರ ಪ್ಯಾಕೇಜ್‌ ಕೊಡಸಬೇಕು ಎಂದೂ ಆಗ್ರಹಿಸಿದರು.

ಸರ್ಕಾರಗಳು ಇನ್ನು ಮುಂದೆಯೂ ಕಿವುಡ– ಕುರುಡ ನಾಟಕ ಮಾಡಲು ಮುಂದಾದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಪಕ್ಷದ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ರೇಣುಕಾ ಚವ್ಹಾಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾ ರವಿ ರಾಠೋಡ ಎಚ್ಚರಿಸಿದರು.

ಬ್ಲಾಕ್‌ ಅಧ್ಯಕ್ಷರಾದ ಶೋಭಾ, ವಾಣಿ, ಮುಖಂಡರಾದ ಸಂಗೀತಾ, ಜಯಶ್ರೀ, ರಾಬಿಯಾ ಶಿಖಾರಿ, ಮೆಹರುಣ್ಣೀಸಾ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)