ಭಾನುವಾರ, ಜೂನ್ 20, 2021
29 °C
ಕಠಿಣ ಲಾಕ್‌ಡೌನ್‌; ಕಟ್ಟಡ ಕಾಮಗಾರಿ ಸ್ಥಳಕ್ಕೆ ಬರಲು ಕಾರ್ಮಿಕರ ಹಿಂದೇಟು, ಪೊಲೀಸರ ಭಯ

ಹೆಸರಿಗಷ್ಟೇ ವಿನಾಯಿತಿ; ಕಾರ್ಮಿಕರಿಗಿಲ್ಲ ಕೆಲಸ!

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಲಾಕ್‌ಡೌನ್‌ ಸಮಯದಲ್ಲಿಯೂ ಕಟ್ಟಡ ಕಾಮಗಾರಿಗಳನ್ನು ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ, ಕಾರ್ಮಿಕರು ಕಟ್ಟಡ ನಿರ್ಮಾಣ ಸ್ಥಳಕ್ಕೆ ಬರಲು ಹಲವು ಅಡ್ಡಿಆತಂಕಗಳಿವೆ. ಇದರಿಂದಾಗಿ ಜಿಲ್ಲೆಯ ಶೇ 90ರಷ್ಟು ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿವೆ.

ಕಲಬುರ್ಗಿ ನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ನಡೆಯುತ್ತಿರುವ ಸರ್ಕಾರಿ ಕಾಮಗಾರಿಗಳು ಹಾಗೂ ಖಾಸಗಿ ಕಟ್ಟಡ ಕಾಮಗಾರಿಗಳಿಗೆ ಕಾರ್ಮಿಕರು ಬೇರೆ ಭಾಗಗಳಿಂದ ಬರುತ್ತಾರೆ. ಬೆಳಿಗ್ಗೆ ಬಂದು ಸಂಜೆ ವಾಪಸಾಗುವ ಕಾರ್ಮಿಕರ ಸರಾಗ ಓಡಾಟಕ್ಕೆ ಪೊಲೀಸರು ಅವಕಾಶ ನೀಡುತ್ತಿಲ್ಲ. ಕೆಲವು ಕಾಮಗಾರಿಗಳು ನಡೆಯುವ ಸ್ಥಳದಲ್ಲೇ ಕಾರ್ಮಿಕರು ಟೆಂಟ್ ಹಾಕಿಕೊಂಡು ಇರುತ್ತಾರಾದರೂ ಕಾಮಗಾರಿ ನಡೆಸಲು ಬೇಕಾದ ಟೈಲ್ಸ್, ಗ್ರಾನೈಟ್, ಸಿಮೆಂಟ್, ಇಟ್ಟಿಗೆ, ಎಲೆಕ್ಟ್ರಿಕಲ್ ವಸ್ತುಗಳು, ಪ್ಲಂಬಿಂಗ್ ಪೈಪುಗಳು, ಹಾರ್ಡ್‌ವೇರ್‌ ಅಂಗಡಿಗಳು ತೆರೆಯುತ್ತಿಲ್ಲ. ಇದರಿಂದಾಗಿ ಕಟ್ಟಡ ಕಾಮಗಾರಿ ಮುಂದುವರಿಸಲು ಆಗುತ್ತಿಲ್ಲ.

ಮತ್ತೊಂದು ಪ್ರಮುಖ ಸಮಸ್ಯೆ ಸಾರ್ವಜನಿಕ ಸಾರಿಗೆ ಬಂದ್ ಆಗಿರುವುದು. ಸೆಮಿ ಲಾಕ್‌ಡೌನ್‌ ಆರಂಭವಾದ ದಿನದಿಂದಲೇ ಬಸ್ ಸಂಚಾರ ಹಾಗೂ ಖಾಸಗಿ ವಾಹನಗಳ ಸೇವೆ ಬಂದ್ ಆಗಿದ್ದರಿಂದ ಕಲಬುರ್ಗಿ ಸುತ್ತಮುತ್ತಲಿನ ಕಾರ್ಮಿಕರು ಬಂದು ಹೋಗಲು ಅಡ್ಡಿಯಾಗಿದೆ. ಬೈಕ್‌ಗಳಲ್ಲಿ ಬರಲು ಮುಂದಾದರೂ ಅವರ ಬೈಕ್‌ಗಳನ್ನು ಜಪ್ತಿ ಮಾಡಲಾಗುತ್ತಿದೆ. ಹೀಗಾಗಿ, ಬೈಕ್‌ಗೆ ದಂಡ ಕಟ್ಟುವ ತಾಪತ್ರಯವೇ ಬೇಡವೆಂದು ಮನೆಯಲ್ಲೇ ಉಳಿಯುತ್ತಿದ್ದಾರೆ. ಇದರಿಂದಾಗಿ ಕಟ್ಟಡ ನಿರ್ಮಾಣಕ್ಕೆ ಕಾರ್ಮಿಕರ ಕೊರತೆ ತೀವ್ರವಾಗಿ ಕಾಡುತ್ತಿದೆ.

ಟೈಲ್ಸ್ , ಗ್ರಾನೈಟ್ ಹಾಗೂ ಆರ್‌ಸಿಸಿ ಕೆಲಸಗಳನ್ನು ಮಾಡಲು ಇಲ್ಲಿಗೆ ಹೆಚ್ಚಾಗಿ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಂದ ಕಾರ್ಮಿಕರು ಬರುತ್ತಾರೆ. ಜಿಲ್ಲೆಯ ಕಾರ್ಮಿಕರಿಗಿಂತ ಅಗ್ಗದ ವೇತನ ಪಡೆದೂ ಉತ್ತಮ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಆದರೆ, ಕೊರೊನಾ ಹಾವಳಿ ನಿಯಂತ್ರಿಸಲು ಜಿಲ್ಲೆಯಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿದ ಬಳಿಕ ರೈಲಿನ ಮೂಲಕ ತಮ್ಮ ರಾಜ್ಯಗಳಿಗೆ ವಾಪಸಾಗಿದ್ದಾರೆ. ಎಷ್ಟೋ ಜನ ಕಳೆದ ವರ್ಷದ ಲಾಕ್‌ಡೌನ್‌ ಸಂದರ್ಭದಲ್ಲಿ ವಾಪಸಾದವರು ಇನ್ನೂ ಇಲ್ಲಿಗೆ ಬಂದಿಲ್ಲ ಎನ್ನುತ್ತಾರೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳು.

ಒಂದು ಅಂದಾಜಿನ ಪ್ರಕಾರ ನಿತ್ಯವೂ ಕಲಬಬುರ್ಗಿಗೆ ಪಕ್ಕದ ಶಹಾಬಾದ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಐದು ಸಾವಿರಕ್ಕೂ ಅಧಿಕ ಕಾರ್ಮಿಕರು, ಬಸ್, ಕ್ರೂಸರ್‌, ಬೈಕ್‌ ಮೂಲಕ ಬಂದು ಕಟ್ಟಡ ಕೆಲಸಗಳನ್ನು ಮುಗಿಸಿಕೊಂಡು ಹೋಗುತ್ತಿದ್ದರು. ಆದರೆ, ಜಿಲ್ಲೆಯಲ್ಲಿ ಸೆಮಿ ಲಾಕ್‌ಡೌನ್ ಆರಂಭವಾದ 20 ದಿನಗಳಿಂದ ಅವರ ಸಂಚಾರ ಬಹುತೇಕ ಬಂದ್ ಆಗಿದೆ. ಕೆಲವರು ಬರುವ ಧೈರ್ಯ ತೋರಿಸಿದರೂ ಪೊಲೀಸರು ಅಲ್ಲಲ್ಲಿ ಹಾಕಿರುವ ನಾಕಾಬಂದಿಯನ್ನು ದಾಟಿ ಬರುವುದೇ ದುರ್ಲಭವಾಗಿದೆ. ಬಹುತೇಕ ಕಟ್ಟಡ ಕಾರ್ಮಿಕರ ಬಳಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನೀಡಿರುವ ಗುರುತಿನ ಚೀಟಿಗಳೂ ಇಲ್ಲ. ಹೀಗಾಗಿ, ಬೈಕ್ ಜಪ್ತಿಯಾಗುತ್ತಿವೆ ಎಂಬ ದೂರುಗಳು ಸಾಮಾನ್ಯವಾಗಿವೆ.

ಗ್ರಾನೈಟ್, ಎಲೆಕ್ಟ್ರಿಕ್ ಮಳಿಗೆ ಬಂದ್

ಜಿಲ್ಲೆಯಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗಳಿಗೆ ಅತ್ಯಗತ್ಯವಾಗಿ ಬೇಕಾದದ್ದು ಗ್ರಾನೈಟ್, ಟೈಲ್ಸ್, ಸಿಮೆಂಟ್, ಎಲೆಕ್ಟ್ರಾನಿಕ್ಸ್ ವಸ್ತುಗಳು. ಜಿಲ್ಲಾಡಳಿತ ಅತ್ಯಗತ್ಯ ವಸ್ತುಗಳ ಪಟ್ಟಿಯಲ್ಲಿ ಕಿರಾಣಿ ಅಂಗಡಿ, ಹಣ್ಣಿನ ಅಂಗಡಿ, ಹೋಟೆಲ್‌ಗಳಲ್ಲಿ ಪಾರ್ಸೆಲ್, ಬ್ಯಾಂಕಿಂಗ್ ಸೇವೆಗಳಿಗೆ ಅನುಮತಿ ನೀಡಿದೆ. ಆದರೆ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿಲ್ಲ. ಹಾಗಾದರೆ, ಕೆಲಸ ಮುಂದುವರಿಯುವುದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಪೊಲೀಸ್ ಗಸ್ತು ಇಲ್ಲದ ಕೆಲವೆಡೆ ಅಂಗಡಿಗಳನ್ನು ಕದ್ದುಮುಚ್ಚಿ ತೆಗೆದು ವಹಿವಾಟು ನಡೆಸುತ್ತಾರಾದರೂ ಅವುಗಳ ಖರೀದಿಗೆ ಬರುವವರು 10 ಗಂಟೆಯೊಳಗೆ ಬರದಿದ್ದರೆ ಖರೀದಿಯೂ ಪೂರ್ಣಗೊಳ್ಳುವುದಿಲ್ಲ. ಗ್ರಾನೈಟ್‌ನಂತಹ ಭಾರದ ವಸ್ತುಗಳನ್ನು ಸಾಗಿಸಲು ಲಾರಿಯಂತಹ ಗೂಡ್ಸ್‌ ವಾಹನಗಳ ಅವಶ್ಯಕತೆ ಇದೆ. ಆದರೆ, ಸಾರ್ವಜನಿಕ ಸಾರಿಗೆಯೇ ಬಂದ್ ಆಗಿರುವುದರಿಂದ ಲಾರಿ ಹಾಗೂ ಗೂಡ್ಸ್‌ ವಾಹನಕ್ಕೂ ಅನುಮತಿ ನೀಡುತ್ತಿಲ್ಲ.

ಕೈಗೆಟುಕದ ರೈಲು ಸೇವೆ

ಶಹಾಬಾದ್, ವಾಡಿಯಿಂದ ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ನಿತ್ಯ ಬರುವ ಕಾರ್ಮಿಕರು ಬಸ್, ಜೀಪ್‌ಗಳ ಸಂಚಾರ ಬಂದ್ ಆಗಿದ್ದರಿಂದ ಬರಲಾಗುತ್ತಿಲ್ಲ. ರೈಲು ಸೇವೆ ಚಾಲ್ತಿಯಲ್ಲಿದೆಯಾದರೂ ಆನ್‌ಲೈನ್‌ನಲ್ಲಿ ಟಿಕೆಟ್ ಮಾಡಿಸಬೇಕು. ಐಆರ್‌ಸಿಟಿಸಿ ಅಕೌಂಟ್ ಇಲ್ಲದ ಕಾರ್ಮಿಕರು ದುಬಾರಿ ಬೆಲೆ ತೆತ್ತು ರೈಲ್ವೆ ಟಿಕೆಟ್ ಖರೀದಿಸಲು ಆಗುವುದಿಲ್ಲ. ಹೀಗಾಗಿ ಕಟ್ಟಡ ಕಾರ್ಯದಲ್ಲಿ ತೊಡಗಿಸಿ ಕೊಳ್ಳುವುದು ಆಗುತ್ತಿಲ್ಲ ಎನ್ನುತ್ತಾರೆ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಸದಸ್ಯ ಭಾಗಣ್ಣ ಬುಕ್ಕಾ.

ಕಟ್ಟಡ ಮಾಲೀಕರ ಪರದಾಟ

ಸತತ ಲಾಕ್‌ಡೌನ್‌ನಿಂದಾಗಿ ಬೇಗನೇ ಮನೆ ಕಟ್ಟಿಕೊಂಡು ಒಳಗೆ ಹೋಗಬೇಕು ಎಂಬ ಕಟ್ಟಡ ಮಾಲೀಕರ ಆಸೆಗೆ ತಣ್ಣೀರೆರಚಿದಂತಾಗಿದೆ. ಗೂಡ್ಸ್‌ ವಾಹನಗಳ ಸಂಚಾರ ಬಂದ್ ಆಗಿದ್ದರಿಂದ ಮನೆ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳ ಪೂರೈಕೆ ಬೇಡಿಕೆಯಷ್ಟು ಆಗುತ್ತಿಲ್ಲ. ಹೀಗಾಗಿ, ದರಗಳು ದುಪ್ಪಟ್ಟಾಗಿದ್ದು, ಮನೆಗಾಗಿ ಮಾಡಿದ್ದ ಬ್ಯಾಂಕ್‌ ಸಾಲವೂ ಖರ್ಚಾಗಿ ಬೇರ ಮೂಲಗಳಿಂದ ಕೈಗಡ ತಂದು ಮನೆ ಪೂರ್ಣಗೊಳಿಸಬೇಕಾಗಿದೆ.

ಆದರೆ, ಮೇ ಮೊದಲ ವಾರದಿಂದ ಜಾರಿಗೆ ಬಂದ ಸೆಮಿ ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ನಿರ್ಮಾಣ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದು ನಗರದಲ್ಲಿನ ಹಲವು ಕಟ್ಟಡಗಳು ಅರ್ಧಕ್ಕೇ ನಿಂತಿವೆ. ಇನ್ನೇನು ಕೊನೆಯ ಹಂತಕ್ಕೆ ಬಂದ ಮನೆಗಳ ಮಾಲೀಕರು ದುಪ್ಪಟ್ಟು ಬೆಲೆ ತೆತ್ತು ಸಾಮಗ್ರಿಗಳನ್ನು ಖರೀದಿಸಿ ಪೂರ್ಣಗೊಳಿಸಲು ಮುಂದಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.