ಶುಕ್ರವಾರ, ಏಪ್ರಿಲ್ 3, 2020
19 °C
ಎಲ್ಲೆಡೆ ಶುಕ್ರವಾರದ ಸಾಮೂಹಿಕ ಪ್ರಾರ್ಥನೆ; ಕೆಬಿಎನ್‌ ದರ್ಗಾದಲ್ಲಿ ಸೋಂಕಿನ ಕುರಿತು ತಿಳಿವಳಿಕೆ

ನಮಾಜ್‌ಗೆ ಅಡ್ಡಿಯಾಗದ ಕೊರೊನಾ ಭೀತಿ

ಪ್ರಜವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ನಿವಾಸಿ, ಸೌದಿ ಅರೇಬಿಯಾದಿಂದ ವಾಪಸ್ಸಾಗಿದ್ದ ವೃದ್ಧ ಮಹ್ಮದ್‌ ಸಿದ್ಧಿಕಿ ಅವರು ಕೋವಿಡ್‌– 19 ಸೋಂಕಿನಿಂದ ಮೃತಪಟ್ಟಿರುವ ಬೆನ್ನಲ್ಲೇ ಜಿಲ್ಲಾಡಳಿತವು ನಗರದಾದ್ಯಂತ ಎಲ್ಲ ಮಾಲ್‌, ಸಾರ್ವಜನಿಕ ಉದ್ಯಾನವನಗಳನ್ನು ಬಂದ್‌ ಮಾಡಿದೆ. ಶಾಲಾ, ಕಾಲೇಜುಗಳಿಗೂ ರಜೆ ಘೋಷಿಸಿದೆ. 

ಕೊರೊನಾ ಭೀತಿಯ ಮಧ್ಯೆಯೂ ನಗರದಲ್ಲಿ ಶುಕ್ರವಾರ ಮಸೀದಿ, ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ನಗರದ ಖಾಜಾ ಬಂದಾ ನವಾಜ್‌ ದರ್ಗಾ, ಮುಸ್ಲಿಂ ಚೌಕ್‌, ಸೂಪರ್‌ ಮಾರ್ಕೆಟ್, ನೆಹರೂ ಗಂಜ್‌ ಬಳಿ ಇರುವ ಮಸೀದಿಗಳಲ್ಲಿಯೂ ನಮಾಜ್‌ ಸಾಂಗವಾಗಿ ನಡೆಯಿತು. ‘ಯಾವ ಸೋಂಕು ಬಂದರೇನು. ಮೇಲೆ ಇರುವ ಖುದಾ (ಅಲ್ಲಾಹ್) ನಮ್ಮನ್ನು ಕಾಯುತ್ತಾನೆ’ ಎಂದು ಕೆಬಿಎನ್‌ ದರ್ಗಾ ಬಳಿ ನಿಂತಿದ್ದ ಮೊಹಮ್ಮದ್‌ ಯೂಸುಸ್‌ ಹೇಳಿದರು.

ದರ್ಗಾದ ಮೌಲ್ವಿ ಅವರೂ ಕೊರೊನಾ ಬಗ್ಗೆ ಸಾಕಷ್ಟು ಬಾರಿ ಪ್ರಸ್ತಾಪಿಸಿ, ‘ದೇವರ ಅನುಗ್ರಹದಿಂದ ಯಾರಿಗೂ ಏನೂ ಆಗುವುದಿಲ್ಲ. ಎಲ್ಲರೂ ಧೈರ್ಯದಿಂದ ಇರಬೇಕು’ ಎಂದು ಧೈರ್ಯತುಂಬಿದರು.

ಎಲ್ಲೆಲ್ಲೂ ಮಾಸ್ಕ್‌ಧಾರಿಗಳು: ಕೋವಿಡ್‌–19 ಸೋಂಕಿನಿಂದಲೇ ನಗರದ ವೃದ್ಧ ಮೊಹ್ಮದ್‌ ಸಿದ್ಧಿಕಿ ಅವರು ಮೃತಪಟ್ಟಿರುವ ಸುದ್ದಿಯು ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಯುತ್ತಿದ್ದಂತೆ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್‌ಗಳನ್ನು ಧರಿಸಿಕೊಂಡೇ ಹೊರಗೆ ಬಂದಿದ್ದರು. ವಾಹನಗಳಲ್ಲಿ ಓಡಾಡುವಾಲೂ ಮಾಕ್ಸ್‌ ಹಾಗೂ ಕರವಸ್ತ್ರಗಳನ್ನು ಧರಿಸಿಕೊಂಡಿದ್ದರು.

ಉಮ್ರಾ, ಹಜ್‌ ಬುಕಿಂಗ್‌ ರದ್ದು

ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳಗಳಾದ ಸೌದಿ ಅರೇಬಿಯಾದ ಉಮ್ರಾ ಹಾಗೂ ಹಜ್‌ಗಳು ಪ್ರತಿ ತಿಂಗಳೂ ನಗರದಿಂದ ನೂರಾರು ಜನರು ಭೇಟಿ ನೀಡುತ್ತಾರೆ. ಅವರಿಗೆ ವಿಮಾನಯಾನದ ಬುಕಿಂಗ್‌ ಮಾಡಿಕೊಡುವ ಸಂಸ್ಥೆಗಳಿಗೂ ಇದೀಗ ಕೆಲಸವಿಲ್ಲದಂತಾಗಿದೆ. ಸೌದಿಗೆ ತೆರಳುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದ್ದರಿಂದ ಹೆಚ್ಚು ಪ್ರಯಾಣಿಕರು ಟಿಕೆಟ್‌ ಬುಕ್‌ ಮಾಡಿಸುತ್ತಿಲ್ಲ. ಆದರೆ, ಮುಂಚೆ ಮಾಡಿಸಿದವರೂ ಟಿಕೆಟ್‌ ಬುಕಿಂಗ್‌ ರದ್ದುಪಡಿಸಿದ್ದಾರೆ. ಹೀಗಾಗಿ, ಸಾಕಷ್ಟು ಆರ್ಥಿಕ ನಷ್ಟವಾಗುತ್ತಿದೆ ಎಂದು ಕೆಬಿಎನ್‌ ದರ್ಗಾ ರಸ್ತೆಯಲ್ಲಿರುವ ಟ್ರಾವೆಲ್ ಸಂಸ್ಥೆಯೊಂದರ ಮುಖ್ಯಸ್ಥ ಸಯ್ಯದ್‌ ಸಂಧಾನಿ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು