ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಕಾರಣ ತಿರುಗಾಡಿದರೆ ‘ಸ್ವಯಂ ಸೇವೆ’ಯ ಶಿಕ್ಷೆ!

Last Updated 21 ಮಾರ್ಚ್ 2020, 13:54 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಸೋಂಕು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವುದನ್ನು ಲೆಕ್ಕಿಸದೇ ತಿರುಗಾಡುತ್ತಿರುವ ಕೆಲ ಯುವಕರನ್ನು ಸ್ವಯಂ ಸೇವಕರನ್ನಾಗಿ ಬಳಸಿಕೊಳ್ಳಲು ಜಿಲ್ಲಾ ಆಡಳಿತ ಮುಂದಾಗಿದೆ.

‘ನಿಷೇಧಾಜ್ಞೆ ಮತ್ತು ಕೊರೊನಾ ಸೋಂಕಿನ ತೀವ್ರತೆ ಅರಿಯದೇ ಕೆಲವರು ವಿನಾಕಾರಣ ಸಂಚರಿಸುತ್ತಿದ್ದಾರೆ. ಅಂತಹವರನ್ನು ವಶಕ್ಕೆ ಪಡೆದು ಕೊರೊನಾ ವಿರುದ್ಧದ ಕಾರ್ಯಾಚರಣೆಗಳಲ್ಲಿ ಸ್ವಯಂ ಸೇವಕರನ್ನಾಗಿ ಬಳಸಿಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ತಿಳಿಸಿದ್ದಾರೆ.

‘ನಿಷೇಧಾಜ್ಞೆ ಮಾರ್ಚ್‌ 22ರ ರಾತ್ರಿಯವರೆಗೂ ಇರಲಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಹೊರತುಪಡಿಸಿ ಸಾರ್ವಜನಿಕರು ಅನಾವಶ್ಯಕವಾಗಿ ಮನೆಗಳಿಂದ ಹೊರ ಬರಬಾರದು. ಜಿಲ್ಲಾ ಆಡಳಿತದ ಯತ್ನಕ್ಕೆ ಸಹಕಾರ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

811 ಜನರ ಮೇಲೆ ನಿಗಾ: ‘ಜಿಲ್ಲೆಯಲ್ಲಿ ಶನಿವಾರ ಕೋವಿಡ್‌–19 ಸೋಂಕಿನ ಪ್ರಕರಣ ವರದಿಯಾಗಿಲ್ಲ. ಈ ವರೆಗೆ 26 ಜನರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಆ ಪೈಕಿ 7 ಜನರಿಗೆ ಮಾತ್ರ ವಿಶೇಷ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಏಳು ಜನರ ಪ್ರಯೋಗಾಲಯ ವರದಿ ಬರಬೇಕಿದೆ. 811 ಜನರನ್ನು ಅವರ ಮನೆಗಳಲ್ಲಿರಿಸಿ ನಿಗಾ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಯೋಗಾಲಯ: ‘ಕೊರೊನಾ ವೈರಾಣು ಪತ್ತೆ ಮಾಡುವ ಪ್ರಯೋಗಾಲಯವನ್ನು ಇಲ್ಲಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಆರಂಭಿಸಲಾಗಿದೆ. ಪ್ರಾಥಮಿಕ ಹಂತದ ತಪಾಸಣಾ ವಿಧಾನಗಳು ಮುಗಿದಿದ್ದು ಆಂತರಿಕ ಪರೀಕ್ಷೆ ನಡೆಸಲಾಗುತ್ತಿದೆ. ದೆಹಯಲಿಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ತಜ್ಞರು ಜಿಮ್ಸ್‌ ವೈದ್ಯರಿಗೆ ನಿರ್ದೆಶನ ನೀಡಿದ್ದಾರೆ. ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಲಾಗಿದ್ದು, ಸೋಮವಾರ (ಮಾರ್ಚ್‌ 23)ದಿಂದ ಅಧಿಕೃತವಾಗಿ ಮಾದರಿಗಳನ್ನು ಪರೀಕ್ಷೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT