ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಸಿಗುವುದೇ ಸ್ಪಷ್ಟ ಬಹುಮತ?

ಬಿಜೆಪಿ, ಕಾಂಗ್ರೆಸ್‌ ಪಕ್ಷಗಳನ್ನು ಕಾಡುತ್ತಿರುವ ಬಂಡುಕೋರ ಅಭ್ಯರ್ಥಿಗಳು
Last Updated 1 ಸೆಪ್ಟೆಂಬರ್ 2021, 5:31 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆಗೆ ಅಖಾಡ ಸಜ್ಜುಗೊಳ್ಳುತ್ತಿದ್ದಂತೆಯೇ ಯಾವ ಪಕ್ಷ ಗೆಲ್ಲಲಿದೆ? ಈ ಬಾರಿಯಾದರೂ ಸ್ಪಷ್ಟ ಬಹುಮತದಿಂದ ಯಾವುದಾದರೂ ಒಂದು ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆಯೇ ಎಂಬ ಲೆಕ್ಕಾಚಾರಗಳು ಗರಿಗೆದರುತ್ತಿವೆ.

ಕಳೆದ ಬಾರಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಪಕ್ಷವೂ ಅಧಿಕಾರ ನಡೆಸಲು ಬೇಕಿದ್ದ ಸ್ಪಷ್ಟ ಬಹುಮತವನ್ನು ಪಡೆದಿರಲಿಲ್ಲ. ಹೀಗಾಗಿ, ಪಕ್ಷೇತರರ ನೆರವಿನಿಂತ ತನ್ನ ಅಧಿಕಾರವಧಿ ಪೂರ್ಣಗೊಳಿಸಿತ್ತು. ಬಿಜೆಪಿಯಿಂದ ಸಿಡಿದು ಕೆಜೆಪಿ ಕಟ್ಟಿಕೊಂಡಿದ್ದ ಯಡಿಯೂರಪ್ಪ ಅವರ ಬಣದೊಂದಿಗೆ ಗುರುತಿಸಿಕೊಂಡಿದ್ದ ಹಲವು ಮುಖಂಡರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ದ್ದರು. ವಿಧಾನಸಭಾ ಉಪ ಚುನಾವಣೆ ಯಲ್ಲಿ ತಮಗೆ ಟಿಕೆಟ್ ಸಿಗದ ಕಾರಣ ಮುನಿಸಿಕೊಂಡಿದ್ದ ದತ್ತಾತ್ರೇಯ ಪಾಟೀಲ ರೇವೂರ ಜೆಡಿಎಸ್‌ನಲ್ಲಿದ್ದರು. ಹೀಗಾಗಿ, ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಜೆಡಿಎಸ್‌ ಮತ್ತು ಪಕ್ಷೇತರರು ಆಯ್ಕೆಯಾಗಿದ್ದರು.

ಕಾಂಗ್ರೆಸ್‌ 23 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಬಹುಮತಕ್ಕೆ ಬೇಕಿದ್ದ ಇನ್ನೂ ಐದು ಸ್ಥಾನಗಳನ್ನು ಪಕ್ಷೇತರರ ಬೆಂಬಲ ಪಡೆದುಕೊಂಡು ಅಧಿಕಾರ ನಡೆಸಿತ್ತು. ಬಿಜೆಪಿ, ಕೆಜೆಪಿ ಪಕ್ಷಗಳ ಆಂತರಿಕ ಕಚ್ಚಾಟದಿಂದಾಗಿ ಬಿಜೆಪಿ ಮತ್ತೆ ವಿರೋಧ ಪಕ್ಷದಲ್ಲೇ ಕುಳಿತಿತ್ತು.

ಇದೀಗ ಕಲಬುರ್ಗಿ ನಗರದ ರಾಜಕಾರಣದ ವಾತಾವರಣ ಸಾಕಷ್ಟು ಬದಲಾಗಿದೆ. ಕಾಂಗ್ರೆಸ್‌ ಪಕ್ಷವನ್ನು ಪಾಲಿಕೆಯಲ್ಲಿ ಸತತವಾಗಿ ಅಧಿಕಾರಕ್ಕೆ ತರಲು ಬೇಕಿದ್ದ ದಕ್ಷ ನಾಯಕತ್ವ, ಚುನಾವಣಾ ತಂತ್ರಗಾರಿಕೆ, ಜಾತಿ ರಾಜಕಾರಣದ ಒಳಸುಳಿಗಳನ್ನು ಚೆನ್ನಾಗಿ ಬಲ್ಲವರಾಗಿದ್ದ ಖಮರುಲ್ ಇಸ್ಲಾಂ ಅವರ ಅಗಲಿಕೆ ಆ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಅಲ್ಲದೇ, ಪಾಲಿಕೆಗೆ ಚುನಾವಣೆ ನಡೆದ ಬಹುತೇಕ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಈ ಎರಡು ಅಂಶಗಳು ಕಾಂಗ್ರೆಸ್‌ ಪಾಲಿಗೆ ಕೊಂಚ ದುಬಾರಿಯಾಗಬಹುದು.

ಆದಾಗ್ಯೂ, ಸಂಘಟನಾತ್ಮಕವಾಗಿ ಕೊಂಚ ಉದಾಸೀನವಾಗಿಯೇ ಇರುತ್ತಿದ್ದ ಕಾಂಗ್ರೆಸ್ ಈ ಬಾರಿ ಮೈ ಕೊಡವಿಕೊಂಡು ಎದ್ದು ನಿಂತು ಚುನಾವಣೆ ಎದುರಿಸುವ ಮುನ್ಸೂಚನೆ ನೀಡಿದೆ. ಎಐಸಿಸಿ ವೀಕ್ಷಕರಾಗಿರುವ ಪಂಜಾಬ್ ಶಾಸಕ ರಣಿಂದರ್ ಸಿಂಗ್ ಆವ್ಲಾ ಮೇಲ್ವಿ ಚಾರಣೆಯಲ್ಲಿ ಪಕ್ಷದ ನಾಲ್ವರು ರಾಜ್ಯಮಟ್ಟದ ನಾಯಕರು ನಿರಂತರವಾಗಿ ಜಿಲ್ಲೆಗೆ ಭೇಟಿ ನೀಡಿ ಟಿಕೆಟ್ ಅಂತಿಮಗೊಳಿಸುವ ಪ್ರಕ್ರಿಯೆ ಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಅಭ್ಯರ್ಥಿಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಜೆಪಿಯ ಪರಿಸ್ಥಿತಿ ಇದಕ್ಕಿಂತ ಭಿನ್ನ. ಬಿಜೆಪಿ, ಕೆಜೆಪಿ, ಜೆಡಿಎಸ್‌ ಎಂದು ಒಡೆದು ಹೋಗಿದ್ದ ‘ಕಮಲದ ದಳ’ಗಳು ಇದೀಗ ಒಂದಾಗಿವೆ. ಮತ್ತೊಂದು ಅನುಕೂಲಕರ ಪರಿಸ್ಥಿತಿ ಏನೆಂದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕಳೆದ ಒಂದು ತಿಂಗಳಿಂದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರು ನಿರಂತರವಾಗಿ ಸಭೆಗಳನ್ನು ನಡೆಸಿ ಅಭ್ಯರ್ಥಿಗಳ ಮನೋಬಲ ಹೆಚ್ಚಿಸುತ್ತಿದ್ದಾರೆ. ಹಾಗೆಂದು ಪರಿಸ್ಥಿತಿ ಸಂಪೂರ್ಣ ಬಿಜೆಪಿ ಪರವಾಗಿ ಇದೆ ಎಂದೇನಲ್ಲ. ಬಿಜೆಪಿ ವೋಟ್‌ಬ್ಯಾಂಕ್‌ನ ಪ್ರಮುಖ ಸಮುದಾಯವಾದ ಬ್ರಾಹ್ಮಣ ಹಾಗೂ ಪರಿಶಿಷ್ಟ ಮಾದಿಗ ಸಮುದಾಯಕ್ಕೆ ಜನಸಂಖ್ಯೆಗೆ ತಕ್ಕಂತೆ ಟಿಕೆಟ್ ಹಂಚಿಕೆ ಮಾಡಿಲ್ಲ ಎಂಬ ಬೇಗುದಿ ಬಹಿರಂಗವಾಗಿಯೇ ಸ್ಫೋಟವಾಗಿದೆ. ಅದನ್ನು ವರಿಷ್ಠರು ಹೇಗೆ ಶಮನ ಮಾಡುತ್ತಾರೆ ಎಂಬುದರ ಮೇಲೆ ಬಿಜೆಪಿಯ ಗೆಲುವಿನ ಸಾಧ್ಯತೆ ನಿಂತಿದೆ.

ಹಲವು ದಶಕಗಳಿಂದ ಜಿಲ್ಲೆಯಲ್ಲಿ ಪ್ರಬಲವಾಗಿಯೇ ಇರುವ ಜೆಡಿಎಸ್‌ ತನ್ನ ಅನೇಕ ಮುಖಂಡರು ಬೇರೆ ಪಕ್ಷಗಳಿಗೆ ವಲಸೆ ಹೋದರೂ ಮತ್ತೆ ಎದ್ದುಬರುವ ಯತ್ನ ಮಾಡುತ್ತಿದೆ. 55 ವಾರ್ಡ್‌ಗಳ ಪೈಕಿ 45 ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಜೆಡಿಎಸ್‌ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಮುನಿಸಿಕೊಂಡಿರುವವರನ್ನೂ ಪಕ್ಷಕ್ಕೆ ಬರಮಾಡಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೇ ಅಭ್ಯರ್ಥಿಗಳ ಪರವಾಗಿ ಎರಡು ದಿನ ನಗರದಲ್ಲಿದ್ದು ಪ್ರಚಾರದಲ್ಲಿ ಭಾಗವಹಿಸಿರುವುದು ಹೊಸ ಹುಮ್ಮಸ್ಸು ನೀಡಿದೆ.

ಚುನಾವಣೆ ಮೂಲಕ ಜಿಲ್ಲೆ ಯಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಾರ್ಟಿ ತಾನೇನೂ ಕಡಿ ಮೆ ಇಲ್ಲ ಎಂಬಂತೆ 27 ಸ್ಥಾನಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿದ್ದು, ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಪ್ರಚಾರ ಮಾಡುತ್ತಿದೆ. ಬಿಜೆಪಿ, ಕಾಂಗ್ರೆಸ್‌ನಂತೆ ಪ್ರಣಾಳಿಕೆ ಬಿಡುಗಡೆ ಮಾಡುವ ಬದಲು ತಾನು ಅಧಿಕಾರಕ್ಕೆ ಬಂದರೆ ಏನು ಮಾಡಲಿದ್ದೇವೆ ಎಂಬ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡುವ ಮೂಲಕ ಮತದಾರರ ಮನಗೆಲ್ಲಲು ಹೊರಟಿದೆ.

ಹೈದರಾಬಾದ್ ಸಂಸದ ಅಸಾದು ದ್ದೀನ್ ಓವೈಸಿ ಅವರ ಎಐಎಂಎಐಂ ಪಕ್ಷವು ಮುಸ್ಲಿಂ ಸಮುದಾಯ ಬಹುಸಂಖ್ಯೆಯಲ್ಲಿರುವ ಕಲಬುರ್ಗಿ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿದ್ದು, ಕೆಲ ದಿನಗಳ ಹಿಂದೆ ಓವೈಸಿ ಅವರು ನಗರಕ್ಕೆ ಭೇಟಿ ನೀಡಿ ಪ್ರಚಾರವನ್ನೂ ನಡೆಸಿದ್ದಾರೆ. ಎಐಎಂಐಎಂ ಅಭ್ಯರ್ಥಿಗಳು ಗೆದ್ದಷ್ಟೂ ಕಾಂಗ್ರೆಸ್‌ಗೆ ನಷ್ಟವಾಗಲಿದೆ ಎಂದು ವಿಶ್ಲೇಷಿಸುತ್ತಾರೆ ಕಾಂಗ್ರೆಸ್‌ನ ಮುಖಂಡರೊಬ್ಬರು.

ಭ್ರಷ್ಟಾಚಾರ ನಿರ್ಮೂಲನೆ ವಿಚಾರ ವನ್ನು ಮುನ್ನೆಲೆಗೆ ತಂದು ಹೋರಾಟ ಮಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌),
ಎಡಪಂಥೀಯ ವಿಚಾರಧಾರೆ ಹೊಂದಿದ ಕಮ್ಯುನಿಸ್ಟ್ ಪಕ್ಷಗಳೂ ಈ ಬಾರಿ ಕಣದಲ್ಲಿವೆ.

ಸ್ಥಳೀಯ ವಿಚಾರಗಳೇ ನಿರ್ಣಾಯಕ

ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಸ್ಥಳೀಯ ಸಮಸ್ಯೆಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಪೂರೈಕೆ, ಉದ್ಯಾನವನಗಳ ಅಭಿವೃದ್ಧಿ, ಆಸ್ತಿ ತೆರಿಗೆ, ಪಾರ್ಕಿಂಗ್‌ ಅವ್ಯವಸ್ಥೆಯಂತಹ ವಿಚಾರಗಳೇ ನಿರ್ಣಾಯಕವಾಗುತ್ತದೆ. ರಾಜ್ಯ ಹಾಗೂ ರಾಷ್ಟ್ರೀಯ ವಿಚಾರಗಳು ಈ ಚುನಾವಣೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತದೆ. ಪಕ್ಷಕ್ಕಿಂತ ಅಭ್ಯರ್ಥಿಯು ಅಲ್ಲಿನ ಜನಗಳೊಂದಿದ ಹೊಂದಿದ ಒಡನಾಟದ ಮೇಲೆಯೂ ಗೆಲುವು ನಿರ್ಧಾರವಾಗುತ್ತದೆ.

ಈ ಬಾರಿ ಕೋವಿಡ್‌ನಿಂದಾಗಿ ಚುನಾವಣೆ ಪ್ರಚಾರಕ್ಕೆ ಅತ್ಯಂತ ಕಡಿಮೆ ಸಮಯ ಸಿಕ್ಕಿದೆ. ಪ್ರಮುಖ ಪಕ್ಷಗಳೇ ಅತಿ ಕಡಿಮೆ ಸಮಯದಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಪ್ರಯಾಸಪಡಬೇಕಾಯಿತು. ಮೊದಲು ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದ್ದುದನ್ನು ಕೆಲ ದಿನಗಳ ಬಳಿಕ ಆಟೊ ಪ್ರಚಾರಕ್ಕೂ ಅವಕಾಶ ಸಿಕ್ಕಿದ್ದರಿಂದ ಅಭ್ಯರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಅಭ್ಯರ್ಥಿಗಳ ಖರ್ಚು ತಗ್ಗಿಸಿದ ಶ್ರಾವಣ!

ಶ್ರಾವಣದ ಸಂದರ್ಭದಲ್ಲೇ ಪಾಲಿಕೆ ಚುನಾವಣೆಯೂ ಬಂದುದು ಅಭ್ಯರ್ಥಿಗಳಿಗೆ ದೊಡ್ಡ ವರದಾನವಾಗಿದ್ದು, ತಮ್ಮ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಮಾಡಬೇಕಿದ್ದ ಖರ್ಚಿನ ಪ್ರಮಾಣವೂ ಬಹುತೇಕ ಕಡಿಮೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶ್ರಾವಣ ಮಾಸ ಇಲ್ಲದಿದ್ದರೆ ನಿತ್ಯ ಕಾರ್ಯಕರ್ತರಿಗೆ ಸಮೀಪದ ಡಾಬಾಗಳಲ್ಲಿ ಊಟದ ವ್ಯವಸ್ಥೆ ಮಾಡಬೇಕಿತ್ತು. ಇಡೀ ದಿನದ ಖರ್ಚು ನೋಡಿಕೊಳ್ಳುವುದರ ಜೊತೆಗೆ ರಾತ್ರಿ ಪಾರ್ಟಿ ಖರ್ಚಿನ ಮೊತ್ತವೇ ಹಲವು ಸಾವಿರವಾಗುತ್ತಿತ್ತು. ಆ ಖರ್ಚು ಶ್ರಾವಣದ ನೆಪದಲ್ಲಿ ಉಳಿದಿದೆ ಎಂದು ಅಭ್ಯರ್ಥಿಯೊಬ್ಬರು ಗುಟ್ಟು ಬಿಚ್ಚಿಟ್ಟರು.

‘ಚುನಾವಣಾ ಆಯೋಗವು ಪ್ರತಿ ಅಭ್ಯರ್ಥಿಗಳು ಮಾಡಬೇಕಿರುವ ವೆಚ್ಚದ ಮಿತಿ ₹ 3 ಲಕ್ಷ ಎಂದು ತಿಳಿಸಿದೆ. ಆದಾಗ್ಯೂ, ಪ್ರತಿ ಅಭ್ಯರ್ಥಿಗಳು ₹ 10 ಲಕ್ಷದಿಂದ ₹ 30 ಲಕ್ಷದವರೆಗೂ ತಮ್ಮ ಶಕ್ತ್ಯಾನುಸಾರ ಖರ್ಚು ಮಾಡುವ ಮೂಲಕ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ರಾಜಕೀಯ ಮುಖಂಡರೊಬ್ಬರು ಹೇಳಿದರು.

ಕಳೆದ ಅವಧಿಯಲ್ಲಿ ಪಕ್ಷಗಳ ಬಲಾಬಲ

ಕಾಂಗ್ರೆಸ್; 23

ಜೆಡಿಎಸ್‌ 10

ಬಿಜೆಪಿ; 7

ಕೆಜೆಪಿ; 7

ಪಕ್ಷೇತರರು; 7

ಆರ್‌ಪಿಐ; 1

ಒಟ್ಟು; 55

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT