ಮಂಗಳವಾರ, ಸೆಪ್ಟೆಂಬರ್ 22, 2020
25 °C
ಇಲ್ಲಿಯವರೆಗೆ 5774 ಜನ ಗುಣಮುಖ; ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಕೆ

ಕಲಬುರ್ಗಿಯಲ್ಲಿ ಕೋವಿಡ್‌ಗೆ ಐವರು ವೃದ್ಧರು ಸೇರಿ 9 ಜನರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೋವಿಡ್‌–19 ಸೋಂಕಿನಿಂದ ಜಿಲ್ಲೆಯಲ್ಲಿ ಐದು ವೃದ್ಧರು ಸೇರಿದಂತೆ ಒಟ್ಟು 9 ಜನ ನಿಧನವಾಗಿರುವ ಬಗ್ಗೆ ಗುರುವಾರ ವರದಿಯಾಗಿದ್ದು, ಇದರಿಂದ ಸೋಂಕಿಗೆ ಮೃತರಾದವರ ಸಂಖ್ಯೆ 154ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದ 65 ವರ್ಷದ ವೃದ್ಧ ಜು 21ರಂದು ಆಸ್ಪತ್ರೆಗೆ ದಾಖಲಾಗಿ ಜು 24ರಂದು ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಕಲಬುರ್ಗಿಯ ಸಂತ್ರಾಸವಾಡಿ ಪ್ರದೇಶದ 75 ವರ್ಷದ ವೃದ್ಧ ಆ 1ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಆ 7ರಂದು ನಿಧನರಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆ ಮತ್ತು ಮಧುಮೇಹದಿಂದ ಬಳಲುತ್ತಿದ್ದ ಜೇವರ್ಗಿ ಪಟ್ಟಣದ 70 ವರ್ಷದ ವೃದ್ಧ ಆ 8ರಂದು ಆಸ್ಪತ್ರೆಗೆ ದಾಖಲಾಗಿ ಆ 12ರಂದು ನಿಧನ ಹೊಂದಿದ್ದಾರೆ.

ವಿಷಮ ಶೀತ ಜ್ವರ (ಐ.ಎಲ್.ಐ) ಹಿನ್ನೆಲೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರ್ಗಿಯ ಹುಸೇನ್ ಗಾರ್ಡನ್ ಪ್ರದೇಶದ 77 ವರ್ಷದ ವೃದ್ಧ ಆ 9ರಂದು ಮನೆಯಲ್ಲಿ ನಿಧನರಾದರು. ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರ್ಗಿಯ ಶಹಾಬಜಾರ್ ಪ್ರದೇಶದ 57 ವರ್ಷದ ಪುರುಷ ಆ 8ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ಸಾವಿಗೀಡಾಗಿದ್ದಾರೆ. ತೀವ್ರ ಉಸಿರಾಟ ತೊಂದರೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರ್ಗಿಯ ಅಂಬಿಕಾ‌ ನಗರ (ಜಿ.ಡಿ.ಎ.ಕಾಲೊನಿ) ಪ್ರದೇಶದ 52 ವರ್ಷದ ಪುರುಷ ಆ 9ರಂದು ಆಸ್ಪತ್ರೆಗೆ ದಾಖಲಾಗಿ ಆ 11ರಂದು ನಿಧನರಾಗಿದ್ದಾರೆ.

ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರ್ಗಿಯ ಫಿರ್ದೋಸ್ ಕಾಲೊನಿ (ಮಾಲಗತ್ತಿ ಕ್ರಾಸ್) ಪ್ರದೇಶದ 58 ವರ್ಷದ ಮಹಿಳೆ ಆ 7ರಂದು ಆಸ್ಪತ್ರೆಗೆ ದಾಖಲಾಗಿ ಆ 13ರಂದು ನಿಧನ ಹೊಂದಿದ್ದಾರೆ. ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯೊಂದಿಗೆ ಕಲಬುರ್ಗಿಯ ಬ್ರಹ್ಮಪುರ ಪ್ರದೇಶದ ಧನಗರ ಗಲ್ಲಿಯ‌ 39 ವರ್ಷದ ಯುವಕ ಆ 9ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ಮೃತಪಟ್ಟರು. ತೀವ್ರ ಉಸಿರಾಟದ ತೊಂದರೆ ಜೊತೆಗೆ ಸೆರಿಬ್ರಲ್ ವಸ್ಕುಲಾರ್ ಅಸ್ಟ್ರೋಫಿ ಸಮಸ್ಯೆಯಿಂದ ಬಳಲುತ್ತಿದ್ದ ಕಲಬುರ್ಗಿ ವಿದ್ಯಾ ನಗರದ 65 ವರ್ಷದ ವೃದ್ಧ ಆ 10ರಂದು ಆಸ್ಪತ್ರೆಗೆ ದಾಖಲಾಗಿ ಆ 12ರಂದು ನಿಧನ ಹೊಂದಿದ್ದಾರೆ ಎಂದು ಶರತ್ ಬಿ. ತಿಳಿಸಿದರು.

285 ಹೊಸ ಪ್ರಕರಣ: ಜಿಲ್ಲೆಯಲ್ಲಿ ಗುರುವಾರ 285 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8122ಕ್ಕೆ ಏರಿಕೆಯಾಗಿದೆ. ಸಮಾಧಾನದ ಸಂಗತಿಯೆಂದರೆ ಗುಣಮುಖರಾದವರ ಸಂಖ್ಯೆಯೂ ಹೆಚ್ಚುತ್ತಿದೆ. ಗುರುವಾರ 448 ಜನ ಗುಣಮುಖರಾಗಿದ್ದಾರೆ. ಇದರೊಂದಿಗೆ 5774 ಜನ ಸೋಂಕಿನಿಂದ ಗುಣಮುಖರಾದಂತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.