ಶನಿವಾರ, ಜುಲೈ 31, 2021
21 °C

ಕಲಬುರ್ಗಿ: ಕೋವಿಡ್ ನೆಗೆಟಿವ್ ವರದಿ ಕಡ್ಡಾಯ -ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ‘ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್ ಸೂಚಿಸಿದರು.

ತಾಲ್ಲೂಕಿನ ಬಳೂರ್ಗಿ ಗ್ರಾಮದ ಚೆಕ್‌ಪೋಸ್ಟ್‌ಗೆ ಬುಧವಾರ ಭೇಟಿ ನೀಡಿದ ಅವರು ಇಲ್ಲಿನ ಸಿಬ್ಬಂದಿ ಜತೆ ಗಡಿಯೊಳಗೆ ವಾಹನಗಳ ಪ್ರವೇಶ ಕುರಿತು ಚರ್ಚಿಸಿದರು.

‘ಗಡಿಯಲ್ಲಿ ವಾಹನಗಳನ್ನು ತಡೆದು ಕಡ್ಡಾಯವಾಗಿ ಲಸಿಕೆ ಹಾಗೂ ಕೋವಿಡ್ ನೆಗೆಟಿವ್ ಪ್ರಮಾಣಪತ್ರ (ಆರ್‌ಟಿಪಿಸಿಆರ್) ಕೇಳಬೇಕು. ನೆಗೆಟಿವ್ ವರದಿ ಮತ್ತು ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರವೇ ಪ್ರವೇಶ ನೀಡಬೇಕು. ಲಸಿಕೆ ಹಾಕಿಸಿಕೊಳ್ಳದವರನ್ನು ಜಿಲ್ಲೆಯ ಗಡಿ ಪ್ರವೇಶಿಸದಂತೆ ತಡೆಯಬೇಕು. ಇಲ್ಲದಿದ್ದರೆ, ಅವರನ್ನು ವಾಪಸ್ ಕಳುಹಿಸಬೇಕು’ ಎಂದು ತಿಳಿಸಿದರು.

‘ಸಾಕಷ್ಟು ಶ್ರಮವಹಿಸಿ ಕೋವಿಡ್ ಎರಡನೇ ಅಲೆ ನಿಯಂತ್ರಿಸಲಾಗಿದೆ. ಸಂಭವನೀಯ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇನ್ನೊಂದೆಡೆ ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿವೆ. ಹೀಗಾಗಿ, ಪ್ರತಿಯೊಂದು ವಾಹನ ಸವಾರರು ಹಾಗೂ ಪ್ರಯಾಣಿಕರನ್ನು ವಿಚಾರಿಸಿ ಗಡಿ ಒಳಗೆ ಪ್ರವೇಶ ನೀಡಬೇಕು’ ಎಂದು ಸಿಬ್ಬಂದಿಗೆ ತಾಕೀತು ಮಾಡಿದರು.

’ಅನ್‌ಲಾಕ್ 3ನೇ ನಿಯಮದ ಅನ್ವಯ, ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ತಾಲ್ಲೂಕಿನ ದೇವಲಗಾಣಗಾಪುರ ಮತ್ತು ಘತ್ತರಗಿ ದೇವಸ್ಥಾನಗಳಿಗೆ ಮಹಾರಾಷ್ಟ್ರದಿಂದ ಭಕ್ತರು ಬರುತ್ತಿದ್ದಾರೆ. ನಿತ್ಯ 50ಕ್ಕೂ ಹೆಚ್ಚು ವಾಹನಗಳು ಮಹಾರಾಷ್ಟ್ರದಿಂದ ರಾಜ್ಯದ ಗಡಿ ಒಳಗೆ ಬರುತ್ತಿವೆ. ಆರ್‌ಟಿಪಿಸಿಆರ್ ನೆಗಟಿವ್ ವರದಿ ಪರಿಶೀಲಿಸಲಾಗುತ್ತಿದೆ. 8ರಿಂದ 10 ವಾಹನಗಳನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಶ ಶಶಿ, ತಾ.ಪಂ ಇಒ ಅಬ್ದುಲ್ ನಬಿ, ಸಿಪಿಐ ಜಗದೀಶ ಪಾಳಾ, ಚೆಕ್‌ಪೋಸ್ಟ್ ವೈದ್ಯ ಶ್ರೀಶೈಲ ಮಳ್ಳಿ, ದತ್ತಾತ್ರೇಯ ಶಾಂತಪ್ಪ, ಸಾಗರ ಮನ್ಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು