ಮಂಗಳವಾರ, ಮೇ 18, 2021
29 °C
ಜಿಲ್ಲೆಯಲ್ಲಿ ಏರುಗತಿಯಲ್ಲಿ ಸಾಗಿದ ಕೊರೊನಾ; ಹಾಸಿಗೆ, ಇಂಜೆಕ್ಷನ್‌ಗೂ ಬರ

ಆರು ಜನ ಸಾವು; 513 ಜನರಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಎರಡನೇ ಅಲೆ ಉಲ್ಬಣಗೊಳ್ಳುತ್ತಿದ್ದು, ಮತ್ತೆ ಆರು ಜನ ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ ಸೋಮವಾರದ ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಮತ್ತೆ ಹೊಸದಾಗಿ 513 ಜನರಲ್ಲಿ ಸೋಂಕು ಪತ್ತೆಯಾಗಿದೆ. 219 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಪ್ರಸ್ತುತ 4,069 ಸಕ್ರಿಯ ಪ್ರಕರಣಗಳಿದ್ದು, ಸೋಂಕಿನಿಂದಾಗಿ ಇಲ್ಲಿಯವರೆಗೆ 384 ಜನ ಮೃತಪಟ್ಟಂತಾಗಿದೆ.

ಚೆಕ್‌ಪೋಸ್ಟ್‌ಗಳಲ್ಲಿ ಕಾಟಾಚಾರದ ತಪಾಸಣೆ: ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗುತ್ತಿದ್ದಂತೆ ಆ ರಾಜ್ಯದೊಂದಿಗೆ ಗಡಿ ಹಂಚಿಕೊಂಡ ಜಿಲ್ಲೆಯ ಆಳಂದ ಹಾಗೂ ಅಫಜಲಪುರ ತಾಲ್ಲೂಕಿನ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಕಡ್ಡಾಯವಾಗಿ ನೆಗೆಟಿವ್ ವರದಿ ಇದ್ದವರನ್ನು ಮಾತ್ರ ಜಿಲ್ಲೆಯೊಳಗೆ ಪ್ರವೇಶ ನೀಡುವಂತೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಕೆಲ ದಿನಗಳವರೆಗೆ ಸೂಚನೆ ಪಾಲನೆಯಾಯಿತಾದರೂ ನಂತರ ಸಡಿಲಗೊಂಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದವರು ವಾಪಸಾದರು. ಮಹಾರಾಷ್ಟ್ರದ ಮುಂಬೈ, ಪುಣೆ, ಸೊಲ್ಲಾಪುರದಿಂದ ರೈಲಿನ ಮೂಲಕ ಬರುವವರನ್ನು ತಡೆಯುವವರೇ ಇಲ್ಲದಂತಾಯಿತು. ಅದರ ಪರಿಣಾಮವಾಗಿ ಜಿಲ್ಲೆಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ ಎನ್ನಲಾಗುತ್ತಿದೆ.

ಈ ಕುರಿತು ಜಿಲ್ಲಾಡಳಿತವೂ ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ. ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಯಾವುದೇ ಕಠಿಣ ಕ್ರಮ ಕೈಗೊಂಡರೂ ಅದನ್ನು ಜನತೆ ಪಾಲಿಸದಿದ್ದರೆ ಏನು ಮಾಡುವುದು ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಹೇಳುತ್ತಾರೆ.

ಕೋವಿಡ್‌ ಕೇಂದ್ರಗಳ ಆರಂಭಕ್ಕೆ ಹೆಚ್ಚಿದ ಒತ್ತಡ: ಜಿಲ್ಲೆಯಲ್ಲಿ ಕಳೆದ ವರ್ಷದ ಮಾರ್ಚ್‌ನಲ್ಲಿ ಆರಂಭಿಸಿದಂತೆ ಸರ್ಕಾರಿ ವಸತಿ ನಿಲಯ, ಲೋಕೋಪಯೋಗಿ ಕಟ್ಟಡಗಳು, ಹೌಸಿಂಗ್ ಬೋರ್ಡ್‌ನ ಮನೆಗಳಲ್ಲಿ ಕೊರೊನಾ ಲಕ್ಷಣಗಳಿಲ್ಲದವರ ಆರೈಕೆಗಾಗಿ ಕೋವಿಡ್ ನಿಗಾ ಕೇಂದ್ರಗಳನ್ನು ಆರಂಭಿಸುವಂತೆ ಒತ್ತಡ ಕೇಳಿ ಬರುತ್ತಿದೆ. ಆದರೆ, ಪ್ರಸ್ತುತ ನಗರದಲ್ಲಿ ಬುದ್ಧ ವಿಹಾರದ ಪಾಲಿ ಕೇಂದ್ರ ಮತ್ತು ಯುನಾನಿ ಕಾಲೇಜಿನ ಆವರಣದಲ್ಲಿ ಮಾತ್ರ ಕೋವಿಡ್ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ನಿತ್ಯ ಸರಾಸರಿ 500ಕ್ಕೂ ಅಧಿಕ ಜನರಿಗೆ ಸೋಂಕು ಹರಡುತ್ತಿರುವುದರಿಂದ ಅವರನ್ನು ಕುಟುಂಬದಿಂದ ಪ್ರತ್ಯೇಕಿಸಿ ಆರೈಕೆ ಮಾಡಲು ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸುವ ಅಗತ್ಯವಿದೆ ಎನ್ನುತ್ತಾರೆ ಕೆಪಿಸಿಸಿ ವಕ್ತಾರ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ.

 

218 ಬೆಡ್‌ಗಳು ಖಾಲಿ

ಕೊರೊನಾ ಸೋಂಕಿತರಿಗಾಗಿ ಕಲಬುರ್ಗಿಯ ಬಹುತೇಕ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಎಚ್‌ಡಿಯು ಹಾಗೂ ಐಸಿಯು ಬೆಡ್‌ಗಳು ಖಾಲಿ ಇಲ್ಲ. ಆದರೆ, 190 ಜನರಲ್ ಬೆಡ್, 19 ಎಚ್‌ಡಿಯು ಹಾಗೂ 9 ಐಸಿಯು ಬೆಡ್‌ಗಳು ಖಾಲಿ ಇವೆ ಎಂದು ಸೋಮವಾರ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಜಿಮ್ಸ್‌ನಲ್ಲಿ 21, ಇಎಸ್‌ಐಸಿಯಲ್ಲಿ 26, ಬಸವೇಶ್ವರ ಆಸ್ಪತ್ರೆಯಲ್ಲಿ 105, ಸತ್ಯ ಯುರೊ ಕೇರ್ ಆಸ್ಪತ್ರೆಯಲ್ಲಿ 9, ಕ್ರಿಸ್ಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 9, ಡಾ. ಸರೋಜಿನಿ ಮೋದಿ ಆಸ್ಪತ್ರೆಯಲ್ಲಿ 11, ಎಎಸ್‌ಎಂ ಆಸ್ಪತ್ರೆಯಲ್ಲಿ 6, ಗುಲಬರ್ಗಾ ಹಾರ್ಟ್‌ ಫೌಂಡೇಶನ್‌ ಆಸ್ಪತ್ರೆಯಲ್ಲಿ 2 ಹಾಗೂ ಕೆಬಿಎನ್‌ ಆಸ್ಪತ್ರೆಯಲ್ಲಿ ಒಂದು ಜನರಲ್ ಬೆಡ್ ಖಾಲಿ ಇದೆ.

ಸತ್ಯ ಯುರೊ ಕೇರ್ ಆಸ್ಪತ್ರೆಯ 1 ಎಚ್‌ಡಿಯು, 3 ಐಸಿಯು, ಕ್ರಿಸ್ಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಲಾ 1 ಎಚ್‌ಡಿಯು, ಐಸಿಯು ಬೆಡ್‌ಗಳು ಖಾಲಿ ಇವೆ. ಗುಲಬರ್ಗಾ ಹಾರ್ಟ್‌ ಫೌಂಡೇಶನ್‌ನಲ್ಲಿ 11 ಎಚ್‌ಡಿಯು, ಸರೋಜಿನಿ ಮೋದಿ ಆಸ್ಪತ್ರೆಯಲ್ಲಿ 2 ಎಚ್‌ಡಿಯು, ಎಎಸ್‌ಎಂ ಆಸ್ಪತ್ರೆಯಲ್ಲಿ 3 ಎಚ್‌ಡಿಯು, 4 ಐಸಿಯು ಬೆಡ್‌ಗಳು ಸೇರಿದಂತೆ 28 ಎಚ್‌ಡಿಯು, ಐಸಿಯು ಬೆಡ್‌ಗಳು ಖಾಲಿ ಇವೆ.

 

ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗೆ ಹೆಚ್ಚಿದ ಬೇಡಿಕೆ

ಕೊರೊನಾ ರೋಗಿಗಳಿಗೆ ನೀಡಲಾಗುವ ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗೆ ಜಿಲ್ಲೆಯಲ್ಲಿ ಭಾರಿ ಬೇಡಿಕೆ ಉಂಟಾಗಿದೆ. ಜಿಮ್ಸ್‌ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಮಂಗಳವಾರದವರೆಗೆ ಸಾಕಾಗುವಷ್ಟು ಮಾತ್ರ ಇಂಜೆಕ್ಷನ್‌ಗಳ ಸಂಗ್ರಹ ಇದೆ ಎಂದು ಅಲ್ಲಿನ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕೊರೊನಾ ಸೋಂಕಿತರಿಗೆ ಇಂಜೆಕ್ಷನ್‌ ನೀಡಬೇಕಿದ್ದು, ಸಂಗ್ರಹ ಖಾಲಿಯಾಗಿದೆ. ಸೋಮವಾರ ರಾಜ್ಯ ಔಷಧ ಸಂಗ್ರಹಾಗಾರದಿಂದ ಒಂದಿಷ್ಟು ಇಂಜೆಕ್ಷನ್‌ಗಳು ಬಂದಿದ್ದು, ಜಿಲ್ಲಾ ಔಷಧ ನಿಯಂತ್ರಕರ ಸುಪರ್ದಿಯಲ್ಲಿವೆ. ಆದರೆ, ಎರಡು ದಿನಕ್ಕಿಂತ ಹೆಚ್ಚಿಗೆ ಈ ಸಂಗ್ರಹ ಉಳಿಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.