ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಖಂಡನೆ

Last Updated 12 ಡಿಸೆಂಬರ್ 2022, 8:58 IST
ಅಕ್ಷರ ಗಾತ್ರ

ಕಲಬುರಗಿ: ಒಳ ಮೀಸಲಾತಿಗಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದ ಪರಿಶಿಷ್ಟ ಸಮುದಾಯದವರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸರ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ–ಸಿಪಿಐಎಂ) ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ‘ಪರಿಶಿಷ್ಟ ಜಾತಿ ಸಮುದಾಯಗಳ ನಡುವೆ ಒಳ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಹೋರಾಟಗಾರರ ಜೊತೆ ಸರ್ಕಾರ ಮಾತುಕತೆ ನಡೆಸಿ ಸದಾಶಿವ ಆಯೋಗದ ವರದಿಯ ಕುರಿತು ಸರ್ಕಾರದ ಅಭಿಪ್ರಾಯವೇನೆಂದು ಪ್ರಕಟಿಸುವ ಬದಲು ಹೋರಾಟ ನಿರತರ ಮೇಲೆ ಪೋಲೀಸ್ ದೌರ್ಜನ್ಯ ನಡೆಸಿರುವುದು ಖಂಡನೀಯ. ತಕ್ಷಣವೇ ಬಂಧಿತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ಮತ್ತು ಉಚಿತ ಆರೋಗ್ಯ ಸೇವೆಯನ್ನು ನೀಡಬೇಕು’ ಎಂದಿದ್ದಾರೆ.

ಪರಿಶಿಷ್ಟ ಜಾತಿ ಸಮುದಾಯದ ಮೀಸಲಾತಿಯಲ್ಲಿ ಹಿಂದುಳಿದಿರುವಿಕೆಯ ಕಾರಣದಿಂದ ವಂಚನೆಗೊಳಗಾದವರಿಗೆ ಒಳ ಮೀಸಲಾತಿ ನೀಡಬೇಕೆಂಬ ಒತ್ತಾಯ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಈ ಕುರಿತಂತೆ ನ್ಯಾ. ಸದಾಶಿವ ಆಯೋಗವು ವರದಿಯನ್ನು ನೀಡಿ ಹಲವು ವರ್ಷಗಳೇ ಕಳೆದಿವೆ. ಇದುವರೆಗೆ ರಾಜ್ಯ ಸರ್ಕಾರ ಆ ವರದಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿಲ್ಲ ಮತ್ತು ಸರ್ಕಾರ ಈ ಕುರಿತು ತನ್ನ ನಿಲುಮೆ ಏನೆಂದು ಪ್ರಕಟಿಸದಿರುವುದು ಅಕ್ಷಮ್ಯವಾಗಿದೆ. ಕೂಡಲೇ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ಒಳ ಮೀಸಲಾತಿಗಾಗಿ ಹೋರಾಟದಲ್ಲಿ ತೊಡಗಿರುವವರ ಮೇಲೆ ಪೊಲೀಸ್ ದಾಳಿಯ ಮೂಲಕ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುವ ಮೂಲಕ ಸರ್ಕಾರ ಒಳ ಮೀಸಲಾತಿಯನ್ನು ವಿರೋಧಿಸುವ ಇಂಗಿತ ವ್ಯಕ್ತಪಡಿಸಿದೆಯೇ’ ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT