ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಾಂತ್ಯಕ್ಕೆ ಎಲ್ಲ ರೈತರಿಗೆ ಬೆಳೆ ಪರಿಹಾರ

ಈಗಾಗಲೇ 1.04 ಲಕ್ಷ ರೈತರಿಗೆ ವಿತರಣೆ: ಕಾರಜೋಳ
Last Updated 2 ಜನವರಿ 2021, 3:49 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ 2.92 ಲಕ್ಷ ರೈತರ ಪೈಕಿ 1,04,444 ರೈತರಿಗೆ ಬೆಳೆ ಹಾನಿ ಪರಿಹಾರವನ್ನು ಆನ್‌ಲೈನ್‌ ಮೂಲಕ ವಿತರಿಸಲಾಗಿದ್ದು, ಜನವರಿ ತಿಂಗಳಾಂತ್ಯಕ್ಕೆ ಉಳಿದ ರೈತರಿಗೂ ಪರಿಹಾರ ತಲುಪಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭರವಸೆ ನೀಡಿದರು.

ನಗರದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನವರಿ ಅಂತ್ಯದೊಳಗೆ ಅತಿವೃಷ್ಟಿಯಿಂದ ಹಾನಿಗೊಳಗಾದ ಎಲ್ಲಾ ರೈತರಿಗೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ದರದ ಜೊತೆಗೆ ₹ 10 ಸಾವಿರ ಸೇರಿಸಿ ನೀಡಲಾಗುತ್ತಿದೆ. ಅಕ್ಟೋಬರ್ 13ರಿಂದ 21ರವರೆಗೆ ಉಂಟಾದ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, 13,125 ಮನೆಗಳು ಕುಸಿದಿವೆ. ₹ 13.12 ಕೋಟಿ ಪರಿಹಾರವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಸಂಪೂರ್ಣ ಹಾಳಾಗಿ ಕುಸಿದು ಬಿದ್ದಿರುವ ಮನೆಗಳನ್ನು ಕಟ್ಟಲು ಮೊದಲ ಕಂತಿನ ಹಣ ಸಂತ್ರಸ್ತರ ಖಾತೆಗೆ ಜಮಾ ಮಾಡಿದೆ. ಕೊಚ್ಚಿ ಹೋಗಿರುವ 870 ಜಾನುವಾರುಗಳ ವಾರಸುದಾರರಿಗೆ ₹ 36.16 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.

173 ತೊಗರಿ ಖರೀದಿ ಕೇಂದ್ರ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಮಾಡಲು ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 173 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.ಈಗಾಗಲೇ 23 ಸಾವಿರ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೆಚ್ಚು ತೊಗರಿ ಬೆಳೆದಿರುವುದರಿಂದ ಖರೀದಿಸುವ ಮಿತಿಯನ್ನು ಸಹ ಹೆಚ್ಚಿಸಲು ಮತ್ತು ಪ್ರೋತ್ಸಾಹ ಧನವನ್ನು ಕೊಡಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ತೊಗರಿಗೆ ಪ್ರೋತ್ಸಾಹಧನ ನೀಡಲು ಜಿಲ್ಲೆಯ ಎಲ್ಲ ಶಾಸಕರ ನಿಯೋಗದೊಂದಿಗೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರವೇ ಶುಭ ಸುದ್ದಿ ಬರಲಿದೆ ಎಂದರು.
ರಾಜ್ಯ ಸರ್ಕಾರ ಜುಲೈ 2019ರಿಂದ ವಿವಿಧ ಇಲಾಖೆಯಿಂದ ಜಿಲ್ಲೆಗೆ 35 ಇಲಾಖೆಗೆ ₹ 1732 ಕೋಟಿ ಅನುದಾನ ನೀಡಿದ್ದು, ಅದರಲ್ಲಿ ₹ 626 ಕೋಟಿ ಬಾಕಿ ಉಳಿದಿದ್ದು, ಮುಂದಿನ ದಿನಗಳಲ್ಲಿ ವಿವಿಧ ಕಾಮಗಾರಿಗಳಿಗಾಗಿ ಬಳಸಲಾಗುವುದು ಎಂದು ಹೇಳಿದರು.

‘ಆಹಾರ ಲ್ಯಾಬ್ ಸ್ಥಳಾಂತರವಿಲ್ಲ’

‘ಕಲಬುರ್ಗಿಯಲ್ಲಿರುವ ಆಹಾರ ಪರೀಕ್ಷಾ ಪ್ರಯೋಗಾಲಯ ಬೆಳಗಾವಿಗೆ ಸ್ಥಳಾಂತರಗೊಳಿಸುವ ಬಗ್ಗೆ ಗೊತ್ತಿರಲಿಲ್ಲ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಮಾತನಾಡಿ, ಅದನ್ನು ಕಲಬುರ್ಗಿಯಲ್ಲಿಯೇ ಮುಂದುವರೆಸುತ್ತೇನೆ. ಯಾವುದೇ ಕಾರಣಕ್ಕೂ ಬೇರೆ ಸ್ಥಳಾಂತರಿಸಲು ಬಿಡುವುದಿಲ್ಲ’ ಎಂದು ಗೋವಿಂದ ಕಾರಜೋಳ ಭರವಸೆ ನೀಡಿದರು.

ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT