ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಯುಕೆ ಪದವಿ ಕೋರ್ಸ್‌ ಪ್ರವೇಶಕ್ಕೆ ಅರ್ಜಿ ಆಹ್ವಾನ

ಜುಲೈ 15 ರೊಳಗಾಗಿ ಆನ್‌ಲೈನ್‌ ಮೂಲಕ ಪ್ರವೇಶ ಪರೀಕ್ಷೆ: ಕುಲಪತಿ ಪ್ರೊ. ಸತ್ಯನಾರಾಯಣ
Last Updated 28 ಏಪ್ರಿಲ್ 2022, 10:55 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಪಿಯುಸಿ ಪೂರೈಸಿದ ವಿದ್ಯಾರ್ಥಿಗಳಿಂದ ಪದವಿ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದ್ದು, ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೇ 6ರೊಳಗೆ ವಿ.ವಿ. ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ)ಯು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಿದ್ದು, ರಾಜ್ಯದ ಎಂಟು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕಂಪ್ಯೂಟರ್ ಮೂಲಕವೇ ವಿದ್ಯಾರ್ಥಿಗಳು ಉತ್ತರಗಳನ್ನು ಬರೆಯಬೇಕಿದೆ. ಬಿಎಸ್ಸಿ (ಭೌತಶಾಸ್ತ್ರ, ರಸಾಯನಶಾಸ್ತ್ರ), ಬಿಎಸ್ಸಿ (ಜೀವ ವಿಜ್ಞಾನ ಮತ್ತು ಭೂಗರ್ಭಶಾಸ್ತ್ರ), ಬಿಎಸ್ಸಿ (ಗಣಿತ ಮತ್ತು ಕಂಪ್ಯೂಟರ್ ಸೈನ್ಸ್), ಬಿಎಸ್ಸಿ/ ಬಿಎ (ಮನಃಶಾಸ್ತ್ರ ಮತ್ತು ಇಂಗ್ಲಿಷ್), ಬಿಎಸ್ಸಿ/ ಬಿಎ (ಭೂಗೋಳ ಶಾಸ್ತ್ರ ಮತ್ತು ಇತಿಹಾಸ), ಬಿಎ (ಅರ್ಥಶಾಸ್ತ್ರ ಮತ್ತು ಸಮಾಜ ಕಾರ್ಯ), ಬಿಬಿಎ, ಬಿ.ಟೆಕ್ (ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್), ಬಿ.ಟೆಕ್. (ಎಲೆಕ್ಟ್ರಿಕಲ್ ಎಂಜಿನಿಯರಿಂಗ್) ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು’ ಎಂದರು.

ಒಟ್ಟಾರೆ 9 ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, 30 ಸಾಮಾನ್ಯ ಹಾಗೂ 16 ವಿಶೇಷ ಕೋಟಾ ಸೇರಿದಂತೆ ಪ್ರತಿ ವಿಭಾಗದಲ್ಲಿ 46 ಸೀಟುಗಳು ಲಭ್ಯ ಇರುತ್ತವೆ ಎಂದು ಹೇಳಿದರು.

‘ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೇಂದ್ರ ಸರ್ಕಾರವು ಕೇಂದ್ರೀಯ ವಿಶ್ವವಿದ್ಯಾಲಯವನ್ನು ಆರಂಭಿಸಿದ್ದು, ಈ ಭಾಗದ ವಿದ್ಯಾರ್ಥಿಗಳು ಹೆಚ್ಚು ಪ್ರಯೋಜನ ಪಡೆಯಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗಿಂತ ಹೊರರಾಜ್ಯಗಳ ವಿದ್ಯಾರ್ಥಿಗಳು ಹೆಚ್ಚು ಪ್ರವೇಶ ಪಡೆಯುತ್ತಿದ್ದಾರೆ. ರಾಜ್ಯದ ವಿದ್ಯಾರ್ಥಿಗಳು ಹೆಚ್ಚು ಪ್ರವೇಶ ಪಡೆಯಬೇಕು ಎಂಬ ಉದ್ದೇಶದಿಂದ ವಿಶ್ವವಿದ್ಯಾಲಯದ ಪ್ರವೇಶ ಪ್ರಕ್ರಿಯೆಯ ವಿವರಗಳನ್ನು ಎಲ್ಲ ಕಾಲೇಜುಗಳಿಗೆ ಕಳುಹಿಸುವಂತೆ ಪಿಯು ಮಂಡಳಿಯ ನಿರ್ದೇಶಕರಿಗೆ ಪತ್ರ ಬರೆದಿದ್ದೇವೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಒಂದು ತಂಡವು ಕಲ್ಯಾಣ ಕರ್ನಾಟಕದ ಕಾಲೇಜುಗಳಿಗೆ ಭೇಟಿ ನೀಡಿ ಪ್ರವೇಶ ಪರೀಕ್ಷೆ ಹೇಗೆ ನಡೆಯಲಿದೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಿದೆ’ ಎಂದರು.

ಪರೀಕ್ಷಾ ನಿಯಂತ್ರಕ ಪ್ರೊ.ಆರ್‌.ಎಂ. ಚನ್ನವೀರ ಮಾತನಾಡಿ, ‘ಸಾಮಾನ್ಯ ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಶೇ 50 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಒಬಿಸಿ ವಿದ್ಯಾರ್ಥಿಗಳು ಶೇ 45ರಷ್ಟು ಪಡೆದವರು ಅರ್ಜಿ ಸಲ್ಲಿಸಬಹುದು. ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ’ ಎಂದು ಹೇಳಿದರು.

ಕುಲಸಚಿವ ಪ್ರೊ. ಬಸವರಾಜ ಪಿ. ಡೋಣೂರ ಮಾತನಾಡಿ, ‘ರಾಜ್ಯದ ಶೇ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ವಿ.ವಿ.ಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇವರ ಸಂಖ್ಯೆ ಹೆಚ್ಚಳವಾಗಬೇಕು ಎಂಬುದು ನಮ್ಮ ಆಶಯ. ಆದರೆ, ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಮುಂದೆ ಬರುತ್ತಿಲ್ಲ. ರಾಷ್ಟ್ರೀಯ ವಿ.ವಿ. ಯಾಗಿರುವುದರಿಂದ ಎಲ್ಲರಿಗೂ ಮುಕ್ತ ಅವಕಾಶವಿರುತ್ತದೆ. ಅದರ ಲಾಭವನ್ನು ಬೇರೆ ರಾಜ್ಯಗಳ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ’ ಎಂದರು.

ಪ್ರವೇಶ ಸಮಿತಿ ಅಧ್ಯಕ್ಷ ಡಾ. ಹನುಮೇಗೌಡ, ಸಾರ್ವಜನಿಕ ಸಂಪರ್ಕಾಧಿಕಾರಿ ದೀಪ್ತಿ ಗೋಷ್ಠಿಯಲ್ಲಿದ್ದರು.

ವಿದ್ಯಾರ್ಥಿಗಳು http:/cuet.samarth.ac.in ಗೆ ಭೇಟಿ ನೀಡಿ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ಕೋರ್ಸ್‌ ಸೇರ್ಪಡೆಯಾಗಲು ಬೇಕಾಗುವ ಅರ್ಹತೆ ಬಗ್ಗೆ ಮಾಹಿತಿ ಪಡೆಯಲು www.cuk.ac.inಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT