ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ: ಕಾಟಾಚಾರದ ಸಾಂಸ್ಕೃತಿಕ ಕಾರ್ಯಕ್ರಮ; ಅಧಿಕಾರಿಗಳಿಗೆ ತರಾಟೆ

ವೇದಿಕೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು! 
Published : 16 ಆಗಸ್ಟ್ 2024, 4:20 IST
Last Updated : 16 ಆಗಸ್ಟ್ 2024, 4:20 IST
ಫಾಲೋ ಮಾಡಿ
Comments

ಚಿಂಚೋಳಿ: ತಾಲ್ಲೂಕು ಆಡಳಿತ ಹಮ್ಮಿಕೊಂಡ 78ನೇ ಸ್ವಾತಂತ್ರ್ಯೋತ್ಸವದ ಪ್ರಧಾನ ಕಾರ್ಯಕ್ರಮ ಅವ್ಯವಸ್ಥೆಯಿಂದ ಕೂಡಿದ್ದಕ್ಕೆ ನಾಗರಿಕರು ತೀವ್ರ ಅಸಮಧಾನಗೊಂಡು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆಯಿತು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯ ನಡೆ ನಾಗರಿಕರ ಆಕ್ರೋಶಕ್ಕೆ ಕಾರಣವಾಯಿತು. ಯಾವುದೇ ಪೂರ್ವಸಿದ್ಧತೆ ಇಲ್ಲದೇ ಹಾಗೂ ಕಾಟಾಚಾರಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದು ಹುಬ್ಬೇರಿಸುವಂತೆ ಮಾಡಿತು.

ರೈತಗೀತೆ ಹಾಡಲು ಯಾರಾದರೂ ಬನ್ನಿ ಎಂದು ನಿರೂಪಕರು ಕರೆದಾಗ, ಬಾಲಕಿಯೊಬ್ಬಳು ಬಂದು ವೈಯಕ್ತಿಕ ಗೀತೆ ಹಾಡಲು ಶುರು ಮಾಡಿದರು. ಆಗ ಇದು ರೈತ ಗೀತೆ ಅಲ್ಲ ಎಂದು ಬಾಲಕಿಯ ಹಾಡು ಮೊಟಕುಗೊಳಿಸಿದರು. ಆಗ ಶಿಕ್ಷಕಿಯೊಬ್ಬರು ಬಂದು ರೈತಗೀತೆ ಹಾಡಿದರು. ಆದರೆ ಅದು ಪೂರ್ಣಗೊಳ್ಳುವ ಮೊದಲೇ ಮುಗಿಸಿದರು. ಅವಳಿ ಪಟ್ಟಣ ಚಿಂಚೋಳಿ ಮತ್ತು ಚಂದಾಪುರದ ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಮಕ್ಕಳು ದೇಶಭಕ್ತಿ ಹಾಗೂ ಸಂಸ್ಕೃತಿ ಎತ್ತಿ ಹಿಡಿಯುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳು ನೃತ್ಯ ಮಾಡುವಾಗಲೂ ಹಾಡು ಮೊಟಕುಗೊಳಿಸಿದರು. ಇದರಿಂದ ವಾರಗಟ್ಟಲೇ ತಯಾರಿ ಮಾಡಿಕೊಂಡು ಬಂದಿದ್ದ ಮಕ್ಕಳಿಗೆ ನಿರಾಸೆಯಾಯಿತು. ತಾಲ್ಲೂಕು ಮಟ್ಟದ ಅಧಿಕಾರಿಗಳ ಆಸನ ಬೇರೆಯವರು ಆಕ್ರಮಿಸಿಕೊಂಡಿದ್ದರು. ಶಿಷ್ಟಾಚಾರ ಆಮಂತ್ರಣ ಪತ್ರ ಮುದ್ರಣಕ್ಕೆ ಮಾತ್ರ ಸೀಮಿತ ಎಂಬಂತೆ ಗೋಚರಿಸಿತು.

ರೈತ ಗೀತೆ ಹಾಡುವ ಸಮಯದಲ್ಲಿಯೇ ಪ್ರಶ್ನಿಸಿದ ಬಿಜೆಪಿ ಮುಖಂಡರು ಕಾರ್ಯಕ್ರಮ ಮುಗಿದ ಮೇಲೆ ವೇದಿಕೆಗೆ ತೆರಳಿ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿದರು. ಬಿಜೆಪಿ ಹಿರಿಯ ಮುಖಂಡ ಗೋಪಾಲರಾವ್ ಕಟ್ಟಿಮನಿ, ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಯುವಮುಖಂಡ ಅಮರ ಲೊಡ್ಡನೋರ್ ಮೊದಲಾದವರು ಅಧಿಕಾರಿಗಳ ಉದಾಸೀನದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ ‘ನಾನು ಹೊಸಬ. ಇತ್ತೀಚೆಗೆ ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದಾಗ ಮುಖಂಡರೊಬ್ಬರು ಅಸಂಸದೀಯ ಪದ ಪ್ರಯೋಗ ಮಾಡಿದ ಘಟನೆಯೂ ನಡೆಯಿತು. ನೀವು ಶಾಸಕ ಅವಿನಾಶ ಜಾಧವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಹೀಗೆ ಮಾಡಿದ್ದೀರಾ? ರೈತ ಗೀತೆ ಮೊಟಕುಗೊಳಿಸಿ ರೈತರಿಗೆ ಅವಮಾನ ಮಾಡುತ್ತೀರಿ, ಶಿಷ್ಟಾಚಾರ ಪಾಲನೆಗೂ ನಿಮಗೆ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಬೇಕಾ ಎಂದು ಪ್ರಶ್ನಿಸಿದರು.

ಡಿವೈಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಎಲ್.ಎಚ್ ಗೌಂಡಿ ಇನ್ನಿತರ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದರು. ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಮೌನಕ್ಕೆ ಶರಣಾಗಿದ್ದರು. ಕೊನೆಗೆ ಶಾಸಕ ಡಾ.ಅವಿನಾಶ ಜಾಧವ, ಇಒ ಶಂಕರ ರಾಠೋಡ ಎಲ್ಲರನ್ನೂ ಸಮಾಧಾನ ಪಡಿಸಿದರು.

ನಿಮಗೆ ಲ್ಯಾಪ್‌ಟಾಪ್‌ ಕೊಡುತ್ತೇವೆ. ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಕ್ರೀಡಾಂಗಣಕ್ಕೆ ಬನ್ನಿ ಎಂದು ತಿಳಿಸಿದ್ದರಿಂದ ಎಸ್‌ಎಸ್‌ಎಲ್‌ಸಿಯಲ್ಲಿ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಯೊಬ್ಬರನ್ನು ಆ ಶಾಲೆಯ ಶಿಕ್ಷಕ ಕಲಬುರಗಿಯ ಜಿಲ್ಲಾ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಿದ್ದರು. ಇದರಿಂದ ವಿದ್ಯಾರ್ಥಿ ಸನ್ಮಾನದಿಂದ ದೂರ ಉಳಿಯುವಂತಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಜವಾಬ್ದಾರಿ ಬಿಇಒಗೆ ವಹಿಸಿದ್ದೇನೆ. ಪೂರ್ವ ಸಿದ್ಧತಾ ಸಭೆಯ ನಡಾವಳಿ ಕೂಡ ನೀಡಿದ್ದೇನೆ. ಅವರು ಉದಾಸೀನ ತೋರಿದ್ದಾರೆ. ನನಗೂ ಬೇಸರವಾಗಿದೆ. ನೋಟಿಸ್ ನೀಡುತ್ತೇನೆ
-ಸುಬ್ಬಣ್ಣ ಜಂಮಖಂಡಿ ಚಿಂಚೋಳಿ ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT