ಚಿಂಚೋಳಿ (ಕಲಬುರಗಿ ಜಿಲ್ಲೆ): ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅವ್ಯವಸ್ಥೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಹಾಗೂ ಬಿಇಒ ಲಕ್ಷ್ಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕು ಆಡಳಿತ ಹಮ್ಮಿಕೊಂಡ ಸ್ವಾತಂತ್ರ್ಯೋತ್ಸವದ ಪ್ರಧಾನ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಬೇಜವಬ್ದಾರಿಯ ನಡೆ ಜನರ ಆಕ್ರೋಶಕ್ಕೆ ಕಾರಣವಾಯಿತು. ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ರೈತ ಗೀತೆ ಹಾಡಲು ಯಾರಾದರು ಮುಂದೆ ಬನ್ನಿ ಎಂದು ಕರೆದರು. ಬಾಲಕಿಯೊಬ್ಬಳು ಬಂದು ವೈಯಕ್ತಿಕ ಗೀತೆ ಹಾಡಿದಾಗ, ಇದು ರೈತಗೀತೆ ಅಲ್ಲ ಎಂದು ಮೊಟಕುಗೊಳಿಸಿ ಕಳುಹಿಸಿದರು. ಆಗ ಶಿಕ್ಷಕಿಯೊಬ್ಬರು ಬಂದು ಹಾಡಲು ಶುರುಮಾಡಿದರು. ರೈತ ಗೀತೆಯನ್ನು ಪೂರ್ಣಗೊಳಿಸದೆ ಅರ್ಧಕ್ಕೆ ಮೊಟಕುಗೊಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ ಮಾಡುತ್ತಿರುವಾಗಲೂ ಹಾಡುಗಳನ್ನು ಮೊಟಕುಗೊಳಿಸಲಾಯಿತು. ಕಾರ್ಯಕ್ರಮದ ವೇದಿಕೆ ಬೇಕಾಬಿಟ್ಟಿಯಾಗಿದ್ದು, ತಾಲ್ಲೂಕು ಮಟ್ಟದ ಅಧಿಕಾರಿಗಳ ಆಸನಗಳಲ್ಲಿ ಬೇರೆಯವರು ಕುಳಿತಿದ್ದು, ಶಿಷ್ಟಾಚಾರ ಪಾಲನೆ ಕಂಡುಬರಲಿಲ್ಲ.
ತಾಲ್ಲೂಕು ಆಡಳಿತದ ನಡೆಗೆ ಬಿಜೆಪಿ ಮುಖಂಡ ಗೋಪಾಲರಾವ್ ಕಟ್ಟಿಮನಿ, ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಮುಖಂಡ ಅಮರ್ ಲೊಡ್ಡನೋರ ಸೇರಿದಂತೆ ಹಲವರು ಪ್ರತಿಭಟಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
'ನೀವು ರೈತರಿಗೆ ಅವಮಾನ ಮಾಡಿದ್ದೀರಾ. ಶಾಸಕ ಡಾ. ಅವಿನಾಶ ಜಾಧವ ಅವರು ಪಾಲ್ಗೊಂಡ ಕಾರ್ಯಕ್ರಮ ದುರುದ್ದೇಶದಿಂದ ಕಾಟಾಚಾರಕ್ಕೆ ನಡೆಸುತ್ತಿದ್ದೀರಿ. ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಶಿಷ್ಟಾಚಾರದಂತೆ ಹಾಗೂ ಸಡಗರದಿಂದ ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವರ ಆದೇಶ ಬೇಕಾ? ಎಂದು ತರಾಟೆಗೆ ತೆಗೆದುಕೊಂಡರು.
ಆಗ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದರು.ಕೊನೆಗೆ ಶಾಸಕರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು. ಡಿವೈಎಸ್ಪಿ ಸಂಗಮನಾಥ ಹಿರೇಮಠ, ಇಒ ಶಂಕರ ರಾಠೋಡ, ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ ಸಹಿತ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.