ಬುಧವಾರ, ಏಪ್ರಿಲ್ 1, 2020
19 °C
ದೇವಲ ಗಾಣಗಾಪುರದಲ್ಲಿ ಸಂಭ್ರಮ

ದತ್ತ ಮಹಾರಾಜರ ಜನ್ಮೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ತಾಲ್ಲೂಕಿನ ದೇವಲ ಗಾಣಗಾಪುರದ ದತ್ತ ದೇವಸ್ಥಾನದಲ್ಲಿ ದತ್ತ ಮಹಾರಾಜರ ಜನ್ಮೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಭ್ರಮದಿಂದ ಜರುಗಿತು. ಇಡೀ ದೇವಸ್ಥಾನವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು.

ಬೆಳಿಗ್ಗೆ ದತ್ತ ಮೂರ್ತಿ ಹಾಗೂ ಪಾದುಕೆಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕಾಕಡ ಆರತಿ ಮಾಡಲಾಯಿತು. ಮಧ್ಯಾಹ್ನ 12 ಗಂಟೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ದತ್ತ ಮಹಾರಾಜರನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಲಾಯಿತು. ಭಕ್ತರು ಹೂ– ಹಣ್ಣುಗಳನ್ನು ಅರ್ಪಿಸಿ ಪುನೀತರಾದರು.

ಇದಕ್ಕೂ ಮೊದಲು ಭಕ್ತರು ಸಂಗಮದಲ್ಲಿ (ಭೀಮಾ– ಅಮರ್ಜಾ) ಪುಣ್ಯ ಸ್ನಾನ ಮಾಡಿದರು. ಈ ವರ್ಷ ಭೀಮಾ ನದಿಯಲ್ಲಿ ನೀರು ಸಾಕಷ್ಟಿರುವುದರಿಂದ ಅನುಕೂಲವಾಯಿತು. ಪುಣ್ಯ ಸ್ನಾನದ ನಂತರ ಭಕ್ತರು ನಿರ್ಗುಣ ಮಠ (ದತ್ತ ಮಂದಿರ), ಸಂಗಮೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕಲ್ಲೇಶ್ವರ ದೇಗುಲದ ದರ್ಶನ ಮಾಡಿದರು.

ದೇವಸ್ಥಾನದಲ್ಲಿ ನಿರ್ಗುಣ ಪಾದುಕೆ ಮತ್ತು ಅಶ್ವತ್ಥಕಟ್ಟೆಯ ದರ್ಶನ ಪಡೆದರು. ಆಲಯದ ಪ್ರಾಂಗಣದಲ್ಲಿ ಪಾದುಕಾ ಪೂಜೆ, ರುದ್ರಾಭಿಷೇಕ, ದೀಪಾರಾಧನೆ, ಮಧುಕರಿ ಮತ್ತು ಅನ್ನದಾನ ಸೇವೆಗಳು ಜರುಗಿದವು. ದೇವಸ್ಥಾನದ ಆವರಣದಲ್ಲಿ ದತ್ತ ಮಹಾರಾಜರ ಪಲ್ಲಕ್ಕಿ ಉತ್ಸವ ಜರುಗಿತು

ಭಕ್ತರು ದತ್ತ ಮಹಾರಾಜರ ದರ್ಶನಕ್ಕೆ ನಸುಕಿನ 2 ಗಂಟೆಯಿಂದಲೇ ಸುಮಾರು ಒಂದು ಕಿಲೋಮೀಟರ್‌ ಉದ್ದದ ಸರತಿ ಸಾಲಿನಲ್ಲಿ ಕಾಯುತ್ತಿದ್ದುದು ಕಂಡುಬಂತು. ದರ್ಶನಕ್ಕಾಗಿ ಅಂಗವಿಕಲರಿಗೆ ಮತ್ತು ವಯೋವೃದ್ಧರಿಗೆ ವಿಶೇಷ ವ್ಯವಸ್ಥೆ ಮಾಡಬೇಕಿತ್ತು ಎಂದು ಅನೇಕ ಭಕ್ತರು ಅಭಿಪ್ರಾಯಪಟ್ಟರು.

‘ನಾವು ಬೇರೆ ರಾಜ್ಯಗಳಿಂದ ಬರುತ್ತೇವೆ. ನಮಗೆ ತೊಟ್ಟಿಲು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತಿಲ್ಲ. ದತ್ತ ಜನ್ಮೋತ್ಸವ ಹಾಗೂ ತೊಟ್ಟಿಲು ಕಾರ್ಯಕ್ರಮ ಎಲ್ಲ ಭಕ್ತರಿಗೆ ಕಾಣುವಂತೆ ಸಮಿತಿಯವರು ವ್ಯವಸ್ಥೆ ಮಾಡಬೇಕು’ ಎಂದು ಭಕ್ತರಾದ ಮುಂಬಯಿಯ ಶ್ರೀರಂಗ ಖೇಡೆಕರ, ಹೈದರಾಬಾದ್‌ನ ನಾಗರಾಜ್ ಅಲ್ಲಾಡಿ, ಗುಜರಾತ್‌ನ ಮುಕೇಶ್ ಹೇಳಿದರು.

ಅರ್ಚಕರಾದ ಸಚಿನ್ ಭಟ್ಟ ಪೂಜಾರಿ, ಪ್ರಸನ್ನ ಭಟ್, ನಂದಕುಮಾರ್ ಭಟ್ಟ, ವಿನೋದ್ ಭಟ್, ಪ್ರಿಯಾಂಕಾ ಭಟ್ಟ, ಗಂಗಾಧರ ಭಟ್ಟ, ಉದಯ ಭಟ್ಟ, ಗುರುರಾಜ್ ಕುಲಕರ್ಣಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ ಪೂಜಾರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು