ಸೋಮವಾರ, ಜನವರಿ 18, 2021
21 °C
ಅಂತಿಮವಾಗಿ 12 ಅಭ್ಯರ್ಥಿಗಳು ಕಣದಲ್ಲಿ, 7 ಅಭ್ಯರ್ಥಿಗಳು ಅವಿರೋಧ ಆಯ್ಕೆ, ಐವರ ನಾಮಪ‍ತ್ರ ವಾಪ‍ಸ್

ಕುತೂಹಲ ಕೆರಳಿಸಿದ ಡಿಸಿಸಿ ಬ್ಯಾಂಕ್ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಲಬುರ್ಗಿ–ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕಿಗೆ ನಡೆಯುವ ಚುನಾವಣೆಯಲ್ಲಿ 7 ಅಭ್ಯರ್ಥಿಗಳು ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಐವರು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಇದರಿಂದ 6 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.

‌ನ. 29ರಂದು ನಡೆಯುವ ಚುನಾವಣೆ ಕಣದಲ್ಲಿ 12 ಅಭ್ಯರ್ಥಿಗಳು ಉಳಿದಿದ್ದಾರೆ. ಸೋಮವಾರ (ನ. 23) ನಾಮಪತ್ರ ಹಿಂದಕ್ಕೆ ಪಡೆಯಲು ಕಡೆ ದಿನವಾಗಿತ್ತು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ (ವಿಎಸ್‍ಎಸ್‍ಎನ್) ಸಂಘಗಳಿಂದ 10 ನಿರ್ದೇಶಕರು, ಟಿಎಪಿಸಿಎಂಗಳಿಂದ ಒಂದು, ಪಟ್ಟಣ ಸಹಕಾರ ಸಂಘಗಳಿಂದ ಹಾಗೂ ಇತರೆ ಸಹಕಾರ ಸಂಸ್ಥೆಗಳಿಂದ ಒಂದು ಸೇರಿ 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಇದರಲ್ಲಿ ಸಹಕಾರಿ ಸಂಘಗಳಿಂದ ಒಟ್ಟು 6 ನಿರ್ದೇಶಕರು ಹಾಗೂ ಇತರೆ ಸಹಕಾರ ಸಂಸ್ಥೆಗಳಿಂದ ಒಬ್ಬ ನಿರ್ದೇಶಕ ಸೇರಿ 7 ಜನ ಅವಿರೋಧ ಆಯ್ಕೆಯಾಗಿದ್ದಾರೆ.

ಅವಿರೋಧ ಆಯ್ಕೆ: ಕಲಬುರ್ಗಿ ತಾಲ್ಲೂಕಿನಿಂದ ಶರಣಬಸಪ್ಪ ಪಾಟೀಲ ಅಷ್ಠಗಾ, ಆಳಂದ ತಾಲ್ಲೂಕಿನಿಂದ ಅಶೋಕ ಸಾವಳೇಶ್ವರ, ಯಾದಗಿರಿಯಿಂದ ಸಿದ್ರಾಮರೆಡ್ಡಿ ಮಲ್ಲಿಕಾರ್ಜುನರೆಡ್ಡಿ ಕೌಳೂರ, ಸೇಡಂನಬಿಂದ ಬಿ. ನಂದಕಿಶೋರ ರೆಡ್ಡಿ ಜನಾರ್ದನರೆಡ್ಡಿ , ಸುರಪುರದಿಂದ ಬಾಪುಗೌಡ ದುಂಡಪ್ಪಗೌಡ ಹಾಗೂ ಅಫಜಲಪುರದಿಂದ ಮಹಾಂತಗೌಡ ಸಿದ್ದಣ್ಣಗೌಡ ಪಾಟೀಲ ಆಯ್ಕೆಯಾಗಿದ್ದಾರೆ.

ಇತರೆ ಸಹಕಾರಿ ಸಂಘಗಳ ಕ್ಷೇತ್ರದಿಂದ ಸುರೇಶ ಸಜ್ಜನ ಅವಿರೋಧ ಆಯ್ಕೆಯಾಗಿದ್ದಾರೆ. ಸುರೇಶ ಸಜ್ಜನ್ ಎದುರು ನಾಮಪತ್ರ ಹಾಕಿದ್ದ ಬಸವರಾಜ ಮಲ್ಲಪ್ಪ ಪೂಜಾರಿ ಹಾಗೂ ಕಲ್ಯಾಣಪ್ಪ ಶಿವಶರಣಪ್ಪ ಜೇವರ್ಗಿ ನಾಮಪತ್ರ ವಾಪಸ್‌ ಪಡೆದಿದ್ದರಿಂದ ಸಜ್ಜನ್, ಆಳಂದ ತಾಲ್ಲೂಕಿನಿಂದ ಕಲ್ಲಪ್ಪ ಸಿದ್ರಾಮಪ್ಪ ಹಾಗೂ ಅಫಜಲಪುರ ತಾಲ್ಲೂಕಿನಿಂದ ಸೋಮನಾಥ ಶರಣಪ್ಪ ನಾಮಪತ್ರ ವಾಪಸ್‌ ಪಡೆದಿದ್ದರಿಂದ ಕ್ರಮವಾಗಿ ಅಶೋಕ ಸಾವಳೇಶ್ವರ, ಮಹಾಂತಗೌಡ ಅವಿರೋಧವಾಗಿ ಆಯ್ಕೆಯಾದರು.

ಕಣದಲ್ಲಿ ಉಳಿದವರು: ಚಿಂಚೋಳಿ ತಾಲ್ಲೂಕಿನಿಂದ ಗೌತಮ ವೈಜನಾಥ ಪಾಟೀಲ ಹಾಗೂ ಶೈಲೇಶಕುಮಾರ, ಚಿತ್ತಾಪುರ ತಾಲ್ಲೂಕಿನಿಂದ ಭೀಮರೆಡ್ಡಿ, ಕುರಾಳ ಹಾಗೂ ಬಸವರಾಜ ಪಾಟೀಲ ಹೇರೂರ, ಜೇವರ್ಗಿ ತಾಲ್ಲೂಕಿನಿಂದ ಕೇದಾರಲಿಂಗಯ್ಯ ಹಿರೇಮಠ ಹಾಗೂ ನಿಂಗಣ್ಣ ದೊಡ್ಮನಿ, ಶಹಾಪುರ ತಾಲ್ಲೂಕಿನಿಂದ ಸಿದ್ರಾಮರೆಡ್ಡಿ ಹಾಗೂ ಗುರುನಾಥರೆಡ್ಡಿ ಪಾಟೀಲ, ಟಿಎಪಿಸಿಎಂ ಕ್ಷೇತ್ರದಿಂದ ಶಿವಾನಂದ ಮಾನಕರ ಹಾಗೂ ಶಿವಮಹಾಂತಪ್ಪ ಹಣಮಂತರಾಯ, ಪಟ್ಟಣ ಸಹಕಾರ ಸಂಘಗಳ ಕ್ಷೇತ್ರದಿಂದ ಸೋಮಶೇಖರ ಗೋನಾಯಕ ಹಾಗೂ ಸಾವಿತ್ರಿ ಕುಳಗೇರಿ ಪ್ರತಿಸ್ಪರ್ಧಿಯಾಗಿದ್ದಾರೆ.

ಅವಿರೋಧ ಆಯ್ಕೆಯಾದರೂ ಕಾಂಗ್ರೆಸ್‍ಗೆ ಸೇರ್ಪಡೆ

ಕಲಬುರ್ಗಿ: ಡಿಸಿಸಿ ಬ್ಯಾಂಕಿಗೆ ಆಳಂದ ತಾಲ್ಲೂಕಿನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ (ವಿಎಸ್‍ಎಸ್‍ಎನ್) ಸಂಘಗಳ ಕ್ಷೇತ್ರದಿಂದ ಹಾಲಿ ನಿರ್ದೇಶಕ ಅಶೋಕ ಸಾವಳೇಶ್ವರ ಅವಿರೋಧ ಆಯ್ಕೆಯಾದರೂ, ಅಚ್ಚರಿ ಎಂಬಂತೆ ತಕ್ಷಣಕ್ಕೆ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ.

ಸಾವಳೇಶ್ವರ ಎದುರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಲ್ಲಪ್ಪ ಸಿದ್ರಾಮಪ್ಪ ಹತ್ತರಕಿ ಸೋಮವಾರ ನಾಮಪತ್ರ ವಾಪಸ್‌  ಪಡೆದಿದ್ದರಿಂದ ಸಾವಳೇಶ್ವರ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾದರು. ಸಾವಳೇಶ್ವರ ನಿರ್ದೇಶಕರಾಗಿ ಆಯ್ಕೆಯಾಗುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಆಳಂದ ಕ್ಷೇತ್ರದ ಮಾಜಿ ಶಾಸಕ ಬಿ.ಆರ್. ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.

ಅವಿರೋಧವಾಗಿ ಆಯ್ಕೆಯಾದ ಏಳು ನಿರ್ದೇಶಕರಲ್ಲಿ ಐವರು ಕಾಂಗ್ರೆಸ್ ಪಕ್ಷದವರಾಗಿದ್ದರೆ; ಇಬ್ಬರು ಬಿಜೆಪಿಯವರು. ಶರಣಬಸಪ್ಪ ಪಾಟೀಲ ಅಷ್ಠಗಿ, ಸುರೇಶ ಸಜ್ಜನ್ ಬಿಜೆಪಿಯವರು, ಸಿದ್ರಾಮರೆಡ್ಡಿ ಕೌಳೂರ, ಬಿ.ನಂದಕಿಶೋರ ರೆಡ್ಡಿ, ಬಾಪುಗೌಡ ದುಂಡಪ್ಪಗೌಡ ಹಾಗೂ ಮಹಾಂತಗೌಡ ಸಿದ್ದಣ್ಣಗೌಡ ಪಾಟೀಲ ಕಾಂಗ್ರೆಸ್ ಪಕ್ಷದವರಾಗಿದ್ದಾರೆ.

ಅಶೋಕ ಸಾವಳೇಶ್ವರ ಕಾಂಗ್ರೆಸ್ ಸೇರಿದ್ದರಿಂದ ಸಂಖ್ಯೆ 5 ಆಗಿದೆ. ಬ್ಯಾಂಕ್‍ನ ಆಡಳಿತ ಹಿಡಿಯಲು ಒಟ್ಟಾರೆ 9 ಸದಸ್ಯ ಬೆಂಬಲ ಬೇಕು. ಬಿಜೆಪಿ ಮತ್ತು ಕಾಂಗ್ರೆಸ್‌ ಪೈಕಿ ಯಾರಿಗೆ ಒಲಿಯುವುದೋ ಎಂಬುದು ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು