ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಋಣಭಾರ ಹಾಕಿ ಹಣ ನೀಡದ ಡಿಸಿಸಿ ಬ್ಯಾಂಕ್‌

ಅರ್ಜಿ ಪಡೆದು 7 ತಿಂಗಳಾದರೂ ರೈತರಿಗೆ ಸಿಗದ ಸಾಲ
Published 21 ಜುಲೈ 2023, 19:55 IST
Last Updated 21 ಜುಲೈ 2023, 19:55 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ರೈತರಿಗೆ ಶೂನ್ಯ ಬಡ್ಡಿದರದ ಸಾಲ ಮಂಜೂರು ಮಾಡಿ ಜಮೀನಿನ ಮೇಲೆ ಋಣಭಾರ ನಮೂದಿಸಿ ಏಳು ತಿಂಗಳಾದರೂ ಸಾಲದ ಹಣ ಪಾವತಿಸಿಲ್ಲ. ಜಮೀನಿನ ಮೇಲೆ ಋಣಭಾರ ಇರುವುದರಿಂದ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲೂ ಸಾಲ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ 1100ಕ್ಕೂ ಹೆಚ್ಚು ರೈತರು ಈ ಸಮಸ್ಯೆ ಎದುರಿಸುತ್ತಿದ್ದಾರೆ. 

ರೈತರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಋಣಭಾರ ದಾಖಲಿಸಲಾಗಿದೆ. ಕೆಲ ರೈತರಿಗೆ ಸಾಲದ ಹಣ ಪಾವತಿಗೆ ಚೆಕ್‌ಗಳನ್ನು ನೀಡಲಾಗಿದೆ. ಆದರೆ, ಹಣ ಬಿಡುಗಡೆ ಮಾಡದಿರುವುದರಿಂದ ರೈತರು ಬ್ಯಾಂಕ್‌ಗೆ ಕೊಟ್ಟ ಚೆಕ್‌ಗಳು ಬೌನ್ಸ್‌ ಆಗಿವೆ.

ಬ್ಯಾಂಕ್‌ನಿಂದ ಹಣ ಸಿಗುವ ನಿರೀಕ್ಷೆಯಲ್ಲಿರುವ ರೈತರು ಖಾಸಗಿಯಾಗಿ ಸಾಲ ಮಾಡಿ ಹಣ ಬಳಕೆ ಮಾಡಿಕೊಂಡಿದ್ದಾರೆ. ಆದರೆ, ಏಳು ತಿಂಗಳಾದರೂ ಹಣ ಬಾರದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಜಿಲ್ಲಾ ಸಹಕಾರ ಬ್ಯಾಂಕ್‌ ಹಾಗೂ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ಗಳ ಸಹಯೋಗದಲ್ಲಿ ಹೈನುಗಾರಿಕೆ ಪ್ರೋತ್ಸಾಹ ನೀಡಲು ಪ್ರತಿ ಸಂಘದಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಆದರೆ ಶೇ 20ರಷ್ಟು ಫಲಾನುಭವಿಗಳಿಗೆ ಮಾತ್ರ ಹಣ ಒದಗಿಸಲಾಗಿದೆ. ಉಳಿದ ರೈತರ ಅರ್ಜಿ ವಿಲೇವಾರಿ ಮಾಡಿ, ಸಾಲ ನೀಡಿಲ್ಲ. ಇದರಿಂದ ಹೈನುಗಾರಿಕೆ ಮಾಡಿ ಜೀವನ ಸಾಗಿಸುವ ಬಡವರ ಕನಸಿಗೂ ತಣ್ಣೀರು ಎರಚಿದಂತಾಗಿದೆ.‌

ರಾಜ್ಯ ಸರ್ಕಾರವು ಪೂರಕ ಬಜೆಟ್‌ನಲ್ಲಿ ₹ 5 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುವುದಾಗಿ ಘೋಷಿಸಿದೆ. ಅದರಂತೆ ಅರ್ಜಿ ಪಡೆದು ಹೊಸ ಸಾಲ ಮಂಜೂರು ಮಾಡುವ ಮೂಲಕ ಸಂಕಷ್ಟ ನಿವಾರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ

ಸಾಲ ನೀಡದೇ ಜಮೀನಿನ ಮೇಲೆ ಋಣಭಾರ ಹಾಕಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕ್‌ನವರು ಶೀಘ್ರವೇ ಸಾಲ ಮಂಜೂರು ಮಾಡಿದ ಹಣ ನೀಡಬೇಕು.
– ಶರಣಬಸಪ್ಪ ಮಮಶೆಟ್ಟಿ ,ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ
ಸಾಲ ಮಂಜೂರಾಗಿದೆ ಎಂದು ಹೇಳಿ ನನ್ನ ಜಮೀನಿನ ಪಾಣಿಯಲ್ಲಿ ಋಣಭಾರ ಹಾಕಿದ್ದಾರೆ. ಇದರಿಂದ ಬೇರೆ ಬ್ಯಾಂಕ್‌ನಲ್ಲಿ ಸಹ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ.
ಲಾಡ್ಲೇಸಾಬ, ಕಡಣಿ ಕಡಣಿ ಗ್ರಾಮದ ರೈತ
‘₹5 ಕೋಟಿ ಹಣ ಪಾವತಿ ಬಾಕಿ’
‘ಅಪೆಕ್ಸ್‌ ಬ್ಯಾಂಕ್‌ನಿಂದ ಹಣ ಬಿಡುಗಡೆಯಾಗಬಹುದು ಎಂಬ ಭರವಸೆ ಮೇಲೆ ರೈತರಿಂದ ಅರ್ಜಿ ಪ‍ಡೆದು ಸಾಲ ನೀಡಲು ಮುಂದಾಗಿದ್ದೆವು. ಹಣ ಬಿಡುಗಡೆಯಾಗದಿರುವುದರಿಂದ ಸಮಸ್ಯೆಯಾಗಿದೆ’ ಎಂದು ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಸುರೇಶ ಸಜ್ಜನ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಸಾಲ ಮಂಜೂರು ಮಾಡಲಾದ ರೈತರಿಗೆ ಒಟ್ಟು ₹5 ಕೋಟಿ ಹಣ ಪಾವತಿಸಬೇಕಾಗಿದೆ. ಈ ಕುರಿತು ನಿಯೋಗ ತೆಗೆದುಕೊಂಡು ಹೋಗಿ ಅ‍ಪೆಕ್ಸ್ ಬ್ಯಾಂಕ್‌ ಅಧ್ಯಕ್ಷರನ್ನು ಭೇಟಿ ಮಾಡಿದ್ದೇವೆ. ಹಣ ನೀಡುವ ಭರವಸೆ ನೀಡಿದ್ದಾರೆ. ಬಿಡುಗಡೆಯಾದ ತಕ್ಷಣವೇ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು’ ಎಂದರು. ‘ಜಿಲ್ಲೆಯ ಡಿಸಿಸಿ ಬ್ಯಾಂಕ್‌ಗೆ ಸರ್ಕಾರದಿಂದ ₹50 ಕೋಟಿ ಬಡ್ಡಿ ಸಬ್ಸಿಡಿ ಬಾಕಿ ಹಣ ಬರಬೇಕು. ಬ್ಯಾಂಕ್‌ ವ್ಯಾಪ್ತಿಯಲ್ಲಿ ₹25 ಕೋಟಿಕೂ ಅಧಿಕ ವಸೂಲಾಗದ ಸಾಲ ಇದೆ. ಇದರಿಂದಾಗಿ ರೈತರಿಗೆ ಹೊಸ ಸಾಲ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT