ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ| ಹಾಲು ಉತ್ಪಾದನೆ ಕುಸಿತ; ಶಿವಮೊಗ್ಗಕ್ಕೆ ಮೊರೆ

ಕಲಬುರಗಿ–ಬೀದರ್‌–ಯಾದಗಿರಿ ಸಹಕಾರಿ ಹಾಲು ಒಕ್ಕೂಟ
Last Updated 10 ಮಾರ್ಚ್ 2023, 5:32 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ–ಬೀದರ್‌–ಯಾದಗಿರಿ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ 6 ತಿಂಗಳಿನಿಂದ ಹಾಲು ಉತ್ಪಾದನೆ ಕುಸಿದಿದೆ. ಅದಕ್ಕಾಗಿ ಇಲ್ಲಿನ ಒಕ್ಕೂಟವು ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ಮೊರೆ ಹೋಗಿದೆ.

ಕಳೆದ ಫೆಬ್ರುವರಿಯಲ್ಲಿ 45,530 ಲೀಟರ್‌ ಹಾಲು ಉತ್ಪಾದನೆ ಆಗಿದೆ. ಒಟ್ಟು 66,005 ಲೀಟರ್‌ ಹಾಲು ಮತ್ತು 10,047 ಕೆಜಿ ಮೊಸರು ಮಾರಾಟವಾಗಿದೆ. ಹಾಲಿನ ಬೇಡಿಕೆ ಹೆಚ್ಚಾದ ಕಾರಣ ಪಕ್ಕದ ವಿಜಾಪುರ ಹಾಲು ಸಹಕಾರ ಒಕ್ಕೂಟದಿಂದ ಹಾಲು ಖರೀದಿಸಲಾಗುತಿತ್ತು. ಅಲ್ಲಿಯೂ ಕೂಡ ಉತ್ಪಾದನೆ ಕುಸಿತ ಕಂಡಿದ್ದರಿಂದ ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದಿಂದ ಫೆಬ್ರುವರಿಯಲ್ಲಿ 20,475 ಲೀಟರ್‌ ಹಾಲನ್ನು ಖರೀದಿಸಿ, ಮಾರಲಾಗಿದೆ.

‘ನಾವು ಗುಣಮಟ್ಟದ ಹಾಲನ್ನು ಮಾತ್ರ ಖರೀದಿಸುತ್ತೇವೆ. ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ವಿಶೇಷ ಆದ್ಯತೆ ನೀಡುತ್ತೇವೆ. ಕೆಲ ಖಾಸಗಿ ಸಂಸ್ಥೆಗಳು ಗುಣಮಟ್ಟ ರಹಿತ ಹಾಲನ್ನು ಖರೀದಿಸಿ, ಮಾರುತ್ತವೆ. ಅಂಥ ಪ್ರಕರಣಗಳು ಬೀದರ್ ಜಿಲ್ಲೆಯ ಭಾಗದಲ್ಲಿ ಹೆಚ್ಚು ಕಂಡು ಬರುತ್ತಿವೆ. ಹಾಲು ಉತ್ಪಾದನೆ ಕುಸಿತ ಕಂಡ ಹಿನ್ನೆಲೆಯಲ್ಲಿ ಯಾವುದೇ ಹೊಸ ಉತ್ಪನ್ನ ತಯಾರಿಕೆಗೆ ಮುಂದಾಗಿಲ್ಲ. ಬೇಸಿಗೆ ಇರುವುದರಿಂದ ಸದ್ಯ ಮಜ್ಜಿಗೆಯಷ್ಟೆ ತಯಾರಿಸುತ್ತಿದ್ದೇವೆ’ ಎಂದು ಒಕ್ಕೂಟದ ಶೇಖರಣೆ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕರು ‘ಪ್ರಜಾವಾಣಿ’ಗೆ
ತಿಳಿಸಿದರು.

‘ಒಕ್ಕೂಟದ ಹಾಲು ಸಹಕಾರ ಸಂಘಗಳಿಂದ ಖರೀದಿಸಿದ ಹಾಲನ್ನು ಶುದ್ಧೀಕರಣ ಹಾಗೂ ಪಾಶ್ಚೀಕರಣ ಮಾಡಿ ಫ್ಯಾಟ್‌ಗೆ (ಕೊಬ್ಬು) ಅನುಗುಣವಾಗಿ ನಾಲ್ಕೈದು ಉತ್ಪನ್ನಗಳಾಗಿ ವಿಂಗಡಿಸಿ ಮಾರಲಾಗುತ್ತಿದೆ. ಪ್ರತಿ ದಿನ ನಮಗೆ 25 ಸಾವಿರ ಲೀಟರ್‌ ಹೆಚ್ಚುವರಿ ಹಾಲು ಬೇಡಿಕೆಯಿದ್ದು, ಸದ್ಯ 10 ಸಾವಿರ ಲೀಟರ್‌ಗಳಷ್ಟೆ ಶಿವಮೊಗ್ಗ ಹಾಲು ಒಕ್ಕೂಟದಿಂದ ಪೂರೈಕೆಯಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಕುಸಿತದ ನಡುವೆಯೂ ಒಟ್ಟು ಹಾಲು ಉತ್ಪಾದನೆಯಲ್ಲಿ ಶೇ 9ರಷ್ಟು ಹೆಚ್ಚಳವಾಗಿದೆ. ಸದ್ಯ ಹಾಲು ಉತ್ಪಾದನೆ ಕುಸಿತ ಕಂಡ ಹಿನ್ನೆಲೆಯಲ್ಲಿ ಬೀದರ್‌ ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಸ್ಥಗಿತಗೊಂಡ ಹಾಲು ಉತ್ಪಾದನಾ ಸಹಕಾರ ಸಂಘದ ಸದಸ್ಯರಿಗೆ ಹಸು–ಎಮ್ಮೆಗಳ ಖರೀದಿಗೆ ಸಾಲ ಸೌಲಭ್ಯ ಸೇರಿ ಇನ್ನಿತರ ನೆರವು ನೀಡುವ ನೀಡುವ ಮೂಲಕ ಪುನಶ್ಚೇತನಗೊಳಿಸುವ ಕೆಲಸ ನಡೆದಿದೆ’ ಎಂದು ಕಲಬುರಗಿ–ಬೀದರ್‌–ಯಾದಗಿರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್‌.ಸಿದ್ದೇಗೌಡ ತಿಳಿಸಿದರು.

ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 854 ನೋಂದಾಯಿತ ಹಾಲು ಉತ್ಪಾದಕರ ಸಂಘಗಳಿದ್ದು, 378 ಸಂಘಗಳು ಸದ್ಯ ಕಾರ್ಯ ನಿರ್ವಹಿಸುತ್ತಿವೆ.

‘ಗ್ರಾಹಕರ ಬೇಡಿಕೆಗೆ ಆದ್ಯತೆ’

ಹಾಲಿನ ಉತ್ಪಾದನೆಯಲ್ಲಿ ಬೀದರ್‌ ಮೊದಲ ಸ್ಥಾನದಲ್ಲಿದ್ದರೆ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆ ನಂತರದ ಸ್ಥಾನದಲ್ಲಿವೆ. ಮಾರಾಟದಲ್ಲಿ ಕಲಬುರಗಿ ಮೊದಲ ಸ್ಥಾನದಲ್ಲಿದ್ದು, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 12ರಷ್ಟು ಹಾಲು, ಶೇ 27ರಷ್ಟು ಮೊಸರು, ಶೇ 70ರಷ್ಟು ಮಜ್ಜಿಗೆ ಮಾರಾಟದಲ್ಲಿ ಹೆಚ್ಚಳವಾಗಿದೆ. ಗ್ರಾಹಕರ ಬೇಡಿಕೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ಹಾಲು ಒಕ್ಕೂಟದ ಮೂಲಗಳು ತಿಳಿಸಿವೆ.

–––––––––––

ಮೇವಿನ ಕೊರತೆ, ಚರ್ಮಗಂಟು ಹಾಗೂ ಕಾಲುಬಾಯಿ ರೋಗ ಉಲ್ಬಣ, ಖಾಸಗಿ ಹಾಲು ಉತ್ಪಾದನಾ ಸಂಸ್ಥೆಗಳ ಹಾವಳಿ ಸೇರಿ ಇನ್ನಿತರ ಕಾರಣಗಳಿಂದ ಹಾಲಿನ ಉತ್ಪಾದನೆ ಗಣನೀಯವಾಗಿ ಕುಸಿದಿದೆ.

ಬಿ.ಎಸ್‌.ಸಿದ್ದೇಗೌಡ, ವ್ಯವಸ್ಥಾಪಕ ನಿರ್ದೇಶಕ, ಕಲಬುರಗಿ–ಬೀದರ್‌–ಯಾದಗಿರಿ ಹಾಲು ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT