ಗುರುವಾರ , ಮಾರ್ಚ್ 30, 2023
32 °C
ತಾಂಡಾಗಳಿಂದ ನಗರದವರೆಗೂ ಬಂತು ಆಚರಣೆ

ಬಂಜಾರ ಸಮುದಾಯದ ವಿಶಿಷ್ಟ ಮೇರಾ ಹಬ್ಬ- ‘ಬೆಳದಿಂಗಳ ಬಾಲೆಯರ’ ದೀಪಾವಳಿ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ವರ್ಷೆದಾಡ್‌ ಕೋರ್‌ ದವಾಳಿ ಬಾಪು ತೋನ ಮೇರಾ’, ‘ವರ್ಷೆದಾಡ್‌ ಕೋರ್‌ ದವಾಳಿ ಸೇವಾಭಾಯ ತೋನ ಮೇರಾ...’ ಎಂದು ಲಯಬದ್ಧವಾಗಿ ಹಾಡುತ್ತ, ಮನೆ ಮುಂದೆ ಬಂದು ದೀಪ ಬೆಳಗುವ ಬಂಜಾರ ಸಮುದಾಯದ ಹಬ್ಬ
ಮತ್ತೆ ಬಂದಿದೆ.‌

ಹೌದು. ದೀಪಾವಳಿ ಹಬ್ಬಕ್ಕೆ ಬಂಜಾರ ಸಮುದಾಯದಲ್ಲಿ ಅದರದೇ ಆದ ವಿಶಿಷ್ಟ ಆಚರಣೆ ಇದೆ. ಲಂಬಾಣಿ ಭಾಷೆಯಲ್ಲಿ ಈ ಹಬ್ಬಕ್ಕೆ ‘ಮೇರಾ’ ಎನ್ನುತ್ತಾರೆ. ತಾಂಡಾದ ಯುವತಿಯರು ಸೇರಿಕೊಂಡು ಮನೆಮನೆಗೆ ಹೋಗಿ ಹಿರಿಯರಿಗೆ ದೀಪ ಬೆಳಗಿ, ಹಾಡಿ, ಹರಸುವುದೇ ಇವರ ಮುಖ್ಯ ಪದ್ಧತಿ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ತಾಂಡಾಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಅಲ್ಲಿ ‘ಮೇರಾ’ ಸಂಪ್ರದಾಯ ಇನ್ನೂ ಜೀವಂತವಾಗಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಬರುವ ಪ್ರಕ್ರಿಯೆಯನ್ನೇ ಲಂಬಾಣಿ ಭಾಷೆಯಲ್ಲಿ ಮೇರಾ ಎನ್ನುತ್ತಾರೆ. ವಿಶೇಷವೆಂದರೆ ಈ ಸಂಪ್ರದಾಯ ಕನ್ಯೆಯರಿಗೆ ಮಾತ್ರ ಮೀಸಲು.

ಕನ್ಯೆಯರನ್ನೇ ತಮ್ಮ ಮನೆಯ ‘ಬೆಳದಿಂಗಳು’ ಎಂದು ಪರಿಗಣಿಸುವುದು ಬಂಜಾರ ಸಮುದಾಯದ ಸಂಸ್ಕೃತಿ. ಈ ತರುಣಿಯರು ಸಾಂಪ್ರದಾಯಿಕ ಅಲಂಕಾರ ಮಾಡಿಕೊಂಡು ತಾಂಡಾದ ಪ್ರತಿ ಮನೆಮನೆಗೂ ಹೋಗುತ್ತಾರೆ. ಹಿರಿಯರಿಗೆ ಪೂಜೆ ಮಾಡಿ ‘ನಾನು ನಿನಗೆ ಬೆಳಕು ನೀಡುತ್ತಿದ್ದೇನೆ, ಕತ್ತಲೆಯಿಂದ ಹೊರಗೆ ಬಾ...’ ಎಂದು ಹರಸುತ್ತಾರೆ. ನಂತರ ಸಾಮೂಹಿಕವಾಗಿ ಲಂಬಾಣಿ ಪದಗಳನ್ನು ಹಾಡಿ, ಕುಣಿದು ರಂಜಿಸುತ್ತಾರೆ. ಆರತಿ ಬೆಳಗಿದವರಿಗೆ ಹಿರಿಯರು ಚಿನ್ನ, ಬೆಳ್ಳಿ, ವಸ್ತ್ರ ಅಥವಾ ನಗದು ರೂಪದಲ್ಲಿ ಕಾಣಿಕೆ ನೀಡುವುದೂ ಸಂಪ್ರದಾಯದ ಮುಖ್ಯಭಾಗ ಎನ್ನುತ್ತಾರೆ ಬಂಜಾರ ಸಮುದಾಯದ ಕಲಾವಿದೆ ಲಲಿತಾ ರಾಠೋಡ.

ಪದಗಳೇ ಮಧುರ: ದೀಪಾವಳಿ ಎಲ್ಲರ ಬಾಳಲ್ಲಿ ಬೆಳಕನ್ನು ತರಲಿ ಎಂಬ ಹಾರೈಕೆಯ ಹಾಡುಗಳ ಬಂಜಾರ ಭಾಷೆಯಲ್ಲಿ ಸಾಕಷ್ಟಿವೆ. ಎಲ್ಲ ಯುವತಿಯರು ಏಕದನಿಯಲ್ಲಿ ಲಯಬದ್ಧವಾಗಿ ಮೇರಾ ಪದಗಳನ್ನು ಹಾಡಿದಾಗ, ಕೇಳುವುದೇ ಇಂಪು. ತಮಗಿಂತಲೂ ಹಿರಿಯರಾದವರ ಸಂಬಂಧಗಳನ್ನು ಸಂಬೋಧಿಸಿ ಅವರಿಗೆ ಹಾಡಿನ ಮೂಲಕ ಹಾರೈಸುತ್ತಾರೆ. ಅಪ್ಪ, ಅಣ್ಣ, ಅಕ್ಕ, ಚಿಕ್ಕಪ್ಪ, ತಾಂಡಾದ ನಾಯಕ, ಕುಲದೇವರು... ಹೀಗೆ ಎಲ್ಲರ ಹೆಸರಿನ ನಂತರದ ‘ತೋನ ಮೇರಾ’ ಎಂದು ಹೇಳುತ್ತಾರೆ.

ಸಂಪ್ರದಾಯ ಹೇಗೆ?: ಲಂಬಾಣಿಗರು ಮೂಲ ಗುಜರಾತಿನವರು. ಸುಮಾರು 500 ವರ್ಷಗಳ ಹಿಂದೆ ದೇಶದ ವಿವಿಧ ಭಾಗಗಳಿಗೆ ಚೆದುರಿದ್ದಾರೆ. ಕರ್ನಾಟಕದಲ್ಲಿ ಅದರಲ್ಲೂ, ಕಲ್ಯಾಣ ಕರ್ನಾಟಕ ಭಾಗದಲ್ಲೇ ಈ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಊರಿನಿಂದ ಹೊರಗೆ ಇರುವ ಈ ತಾಂಡಾಗಳೇ ಈಗ ಈ ಸಮುದಾಯ ಹಾಗೂ ಸಂಪ್ರದಾಯದ ಜೀವಂತ ಪುಟಗಳಾಗಿವೆ.

ಬಂಜಾರರ ಕುಲದೇವರಾದ ಜಗದಂಬಾ, ಕುಲಗುರು ಸೇವಾಲಾಲ ಹಾರಾಜರ ಮಂದಿರಗಳಲ್ಲಿ ‘ಮೇರಾ’ ನಡೆಸುವುದು ವಾಡಿಕೆ. ತಾಂಡಾದ ‘ಕಾರವಾರಿ ನಾಯಕ’ ಇದರ ದಿಕ್ಸೂಚಿ ನೀಡುತ್ತಾರೆ. ಹಬ್ಬ ಆಚರಿಸುವ ಕನ್ಯೆಯರಿಗೆ ಯಾರೂ ತೊಂದರೆ ಕೊಡಬಾರದು, ಶಾಂತಿ– ಸಹನೆಯ ಜೀವನ ನಡೆಸಬೇಕು ಎಂಬ ನಿಯಮ ಮಾಡುತ್ತಾರೆ.

ಸಗಣಿ ಪೂಜೆಯೂ ವಿಶಿಷ್ಟ: ಮೇರಾ ಸಂಭ್ರಮದ ಪ್ರಮುಖ ಭಾಗ ಗೋ ಪೂಜೆ ಹಾಗೂ ಸಗಣಿ ಪೂಜೆ. ಮೊದಲ ದಿನ ದೀಪ ಬೆಳಗಿ ಮುಗಿಸುವ ತರುಣಿಯರು, ಮಾರನೇ ದಿನ ನಸುಕಿನಲ್ಲೇ ಕಾಡಿಗೆ ಹೋಗಿ ವಿವಿಧ ಹೂಗಳನ್ನು ತರಬೇಕು. ಮತ್ತೆ ಮನೆಗಳಿಗೆ ತೆರಳಿ ಸಗಣಿಯ ಗುಂಪೆಗಳನ್ನು ಸೇರಿಸಿ, ಅದಕ್ಕೆ ಅಲಂಕಾರ ಮಾಡಿ ಪೂಜಿಸುತ್ತಾರೆ. ಸಾಮೂಹಿಕವಾಗಿ ಊಟ ಮಾಡಿ ಈ ಸಂಭ್ರಮಕ್ಕೆ ತೆರೆ ಎಳೆಯುತ್ತಾರೆ.

*

ದೀಪಾವಳಿಯ ಹರಕೆ ಹಾಡು

ವರ್ಷೆದಾಡ್‌ ಕೋರ್‌ ದವಾಳಿ
ಬಾಪು ತೋನ ಮೇರಾ,

ವರ್ಷೆದಾಡ್‌ ಕೋರ್‌ ದವಾಳಿ
ಸೇವಾಭಾಯ ತೋನ ಮೇರಾ,

ವರ್ಷೆದಾಡ್‌ ಕೋರ್‌ ದವಾಳಿ
ಗೋರ್‌ಭಾಯಿ ತೋನ್‌ ಮೇರಾ...

ವರ್ಷೆದಾಡ್‌ ಕೋರ್‌ ದವಾಳಿ
ಮರಿಯಮ್ಮ ತೋನ ಮೇರಾ,

ವರ್ಷೆದಾಡ್‌ ಕೋರ್‌ ದವಾಳಿ
ಜಗದಂಬಾ ತೋನ ಮೇರಾ,

ವರ್ಷೆದಾಡ್‌ ಕೋರ್‌ ದವಾಳಿ
ಸತ್ತಿ ತೋನ ಮೇರಾ

*

ಮುಖಂಡರೇನಂತಾರೆ...

ಪ‍್ರಸಕ್ತ ವರ್ಷ ಕೂಡ ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾ ಘಟಕದಿಂದ ದೀಪಾವಳಿ ಹಬ್ಬದ ಅಂಗವಾಗಿ ನ. 6ರಂದು ಇಲ್ಲಿನ ವೀರೇಂದ್ರ ಪಾಟೀಲ ಬಡಾವಣೆಯಲ್ಲಿರುವ ಚವ್ಹಾಣ ವಿದ್ಯಾಸಂಸ್ಥೆಯ ಆವರಣದಲ್ಲಿ ‘ಮೇರಾ’ ಕಾರ್ಯಕ್ರಮ ಆಯೋಜಿಸಲಾಗಿದೆ. ತಾಂಡಾಗಳಲ್ಲಿ ಸಂಪ್ರದಾಯ ನಡೆದೇ ಇದೆ. ಆದರೆ, ಹೊಟ್ಟೆಪಾಡು, ಶಿಕ್ಷಣ, ವ್ಯಾಪಾರಕ್ಕಾಗಿ ನಗರ ಸೇರಿದವರಿಗೂ ಈ ಹಬ್ಬದ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಇದನ್ನು ಆರಂಭಿಸಿದ್ದೇವೆ.

- ಛತ್ರು ರಾಠೋಡ, ಜಿಲ್ಲಾ ಘಟಕ ಮಾಜಿ ಅಧ್ಯಕ್ಷ

***

ಅಖಿಲ ಭಾರತ ಬಂಜಾರಾ ಸೇವಾ ಸಂಘ

ತಮ್ಮ ಪೂರ್ವಜರನ್ನು ಸ್ಮರಿಸುವ, ಪೂಜಿಸುವ ಸಂಪ್ರದಾಯವು ಜಗತ್ತಿನ ಎಲ್ಲ ಸಮುದಾಯಗಳಲ್ಲೂ ಇದೆ. ಆದರೆ, ಬಂಜಾರ ಸಮುದಾಯದಲ್ಲಿ ಇದಕ್ಕೆ ದೊಡ್ಡ ಸ್ಥಾನವಿದೆ. ನಮ್ಮೊಂದಿಗೆ ಇರುವ ಅಥವಾ ಆಗಿಹೋದ ಹಿರಿಯರನ್ನು ಬೆಳಕಿನ ರೂಪದಲ್ಲಿ ನೆನೆಯುವುದು ವಾಡಿಕೆ. ನಮ್ಮ ಸಮಾಜದಲ್ಲೂ ಅಕ್ಷರಸ್ಥರ ಸಂಖ್ಯೆ ಹೆಚ್ಚಾದಂತೆ ಲಂಬಾನಿ ಹಾಡುಗಳು, ಪದ್ಧತಿಗಳು, ಸಾಂಪ್ರದಾಯಿಕ ಆಚರಣೆಗಳಿಗೆ ಗ್ರಾಂಥಿಕ ರೂಪ ಸಿಗುತ್ತಿರುವುದು ಸಮಾಧಾನದ ಸಂಗತಿ. ಪುಟಾಣಿ ಮಕ್ಕಳಿಂದ ಹಿಡಿದು, ವೃದ್ಧರವರೆಗೂ ಎಲ್ಲರೂ ತಮ್ಮ ಜನಪದ ಹಾಡು, ನೃತ್ಯವನ್ನು ಜೀವಂತವಾಗಿ ಇಟ್ಟುಕೊಂಡು ಬಂದಿದ್ದಾರೆ. ಲಿಪಿಯೇ ಇಲ್ಲದ ಲಂಬಾಣಿ ಭಾಷೆಯಲ್ಲಿ ಸಾವಿರಾರು ಪದಗಳಿವೆ. ಈವರೆಗೂ ಅವು ಒಬ್ಬರಿಂದ ಒಬ್ಬರಿಗೆ ಹರಡಿಕೊಂಡೇ ನಡೆದಿವೆ.

- ಲಲಿತಾ ಲೋಕೇಸ ಪವಾರ, ಬಂಜಾರ ನೃತ್ಯ ಮಹಿಳಾ ಮಂಡಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು