ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಯಲ್ಲಿ ಗಲಾಟೆ ಸೃಷ್ಟಿಸಿಲು ಅಂಬೇಡ್ಕರ್ ಪುತ್ಥಳಿಗೆ ಅಪಮಾನ:ಪೊಲೀಸ್ ಕಮಿಷನರ್

ದಾಂಧಲೆ ನಡೆಸಿದವರ ಮೇಲೂ ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ
Published 24 ಜನವರಿ 2024, 8:34 IST
Last Updated 24 ಜನವರಿ 2024, 8:34 IST
ಅಕ್ಷರ ಗಾತ್ರ

ಕಲಬುರಗಿ: ‘ಗಲಾಟೆಯ ದುಷ್ಕೃತ್ಯವನ್ನು ಮನಸ್ಸಿನಲ್ಲಿ ಇರಿಸಿಕೊಂಡೇ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಪುತ್ಥಳಿಗೆ ಅಪಮಾನ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಚೇತನ್ ಆರ್. ತಿಳಿಸಿದರು.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಪ್ರಕರಣ ದಾಖಲು ಆಗುತ್ತಿದ್ದಂತೆ ಮೂರು ತನಿಖಾ ತಂಡಗಳನ್ನು ರಚಿಸಲಾಗಿತ್ತು. ಮಂಗಳವಾರವೇ (ಜ.23) ಕೋಟನೂರ (ಡಿ) ಗ್ರಾಮದ ನಿವಾಸಿಗಳಾದ ಕಿರಣ್, ಮಾನು, ಹನಮಂತು ಮತ್ತು ಸಂಗಮೇಶ ಆರೋಪಿಗಳನ್ನು ಬಂಧಿಸಿದ್ದೇವೆ. ವೈಜ್ಞಾನಿಕವಾಗಿ ಸಾಕಷ್ಟು ವಿಚಾರಣೆಗೆ ಒಳಪಡಿಸಿದಾಗ ಗಲಾಟೆ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧಕಾರ್ಯ ನಡೆದಿದೆ’ ಎಂದು ಹೇಳಿದರು.

‘ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲು ಕೆಲವರ ಹೆಸರುಗಳನ್ನು ಬರೆದ ಚೀಟಿಯನ್ನು ಪುತ್ಥಳಿಯ ಸಮೀಪ ಎಸೆದಿದ್ದಾರೆ. ಅವರಿಗೆ ಈ ಪ್ರಕರಣದಲ್ಲಿ ಯಾವುದೇ ಸಂಬಂಧ ಇಲ್ಲ’ ಎಂದರು.

‘ಇನ್ನೊಬ್ಬ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ ಬಳಿಕ, ನ್ಯಾಯಾಂಗ ಬಂಧನದಲ್ಲಿ ಇರುವ ನಾಲ್ವರು ಆರೋಪಿಗಳನ್ನು ತನಿಖೆಗಾಗಿ ಪೊಲೀಸರ ವಶಕ್ಕೆ ಪಡೆದು ಇನ್ನಷ್ಟು ವಿಚಾರಣೆಗೆ ಒಳಪಡಿಸಲಾಗುವುದು. ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿ, ವಿಶೇಷ ವಕೀಲರನ್ನು ನೇಮಿಸಿಕೊಂಡು ಶಿಕ್ಷೆಯಾಗುವಂತೆ ಮಾಡುತ್ತೇವೆ’ ಎಂದು ತಿಳಿಸಿದರು.

ಒಬ್ಬ ಆರೋಪಿ ಕಾಂಗ್ರೆಸ್ ಕಾರ್ಯಕರ್ತ

ಕೃತ್ಯದಲ್ಲಿ ಭಾಗಿಯಾದ ಐವರು ಆರೋಪಿಗಳ ಪೈಕಿ ಸಂಗಮೇಶ ಎಂಬಾತ ಕಾಂಗ್ರೆಸ್ ಕಾರ್ಯಕರ್ತ ಎನ್ನಲಾಗುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ್ತಿದ್ದ ಎಂದು ತಿಳಿದುಬಂದಿದೆ.

ದಾಂಧಲೆ ನಡೆಸಿದವರ ಮೇಲೂ ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಅಂಬೇಡ್ಕರ್, ಬಸವಣ್ಣನವರಿಗೆ ಇಂತಹ ಕೃತ್ಯ ಮಾಡುತ್ತಾರೆ ಎಂದರೆ ಅವರು ಮನುವಾದಿಗಳೇ ಆಗಿರುತ್ತಾರೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರಿಗೆ ಶಿಕ್ಷೆಯಾಗಲಿದೆ’ ಎಂದರು.

ಪ್ರತಿಭಟನಾಕರಾರರ ಗಲಾಟೆಗೆ ಪ್ರತಿಕ್ರಿಯಿಸಿದ ಸಚಿವರು, ‘ಜನವರಿ 22ರಂದು ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಕ್ಕೆ ಜಿಲ್ಲೆಯ ಹಲವೆಡೆ ಬಂದೋಬಸ್ತ್ ಮಾಡಲಾಗಿತ್ತು. ಈ ರೀತಿಯ ಗಲಾಟೆ ಆಗುತ್ತದೆ ಎಂದು ಯಾರಿಗೂ ಕಲ್ಪನೆ ಇರಲಿಲ್ಲ. ಸ್ಥಳೀಯ ನಾಯಕರು ಗಲಾಟೆಯ ನಿಯಂತ್ರಣಕ್ಕೆ ಯತ್ನಿಸಿದ್ದರು. ಹೊರಗಡೆಯಿಂದ ಬಂದ ಕೆಲವರು ನಾಯಕರ ಮಾತುಗಳನ್ನು ಕೇಳದೆ ಅಭಿಮಾನ, ಸಿಟ್ಟಿನಿಂದ ದಾಂಧಲೆ ನಡೆಸಿದ್ದಾರೆ. ಪೊಲೀಸರು ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ’ ಎಂದು ಹೇಳಿದರು.

‘ಈಗ ಆರೋಪಿಗಳ ಪತ್ತೆಯಾಗಿದ್ದು, ಗಲಾಟೆ ಮಾಡಿದವರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ. ಭಾವನಾತ್ಮಕ ವಿಚಾರ ಇದೆ ಎಂದ ಮಾತ್ರಕ್ಕೆ ಗಲಾಟೆ ಮಾಡಿದವರನ್ನು ಬಿಡಲು ಆಗುವುದಿಲ್ಲ. ಸಂವಿಧಾನವನ್ನು ಉಲ್ಲಂಘನೆ ಮಾಡಿ, ಅಂಬೇಡ್ಕರ್ ಅವರ ಹೆಸರಿನಲ್ಲಿ ಸಾರ್ವಜನಿಕರ ಆಸ್ತಿಗೆ ಹಾನಿ ಮಾಡುವುದು ತಪ್ಪಾಗುತ್ತದೆ. ಕಾನೂನು ಕೈಗೆತೆಗೆದುಕೊಳ್ಳುವ ಹಕ್ಕು ಸಂವಿಧಾನವು ಯಾರಿಗೂ ಕೊಟ್ಟಿಲ್ಲ’ ಎಂದು ಹೇಳಿದರು.

ಈ ವೇಳೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ಸಿಂಗ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡ ರೇವೂನಾಯಕ ಬೆಳಮಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT