ಸೋಮವಾರ, ಆಗಸ್ಟ್ 15, 2022
23 °C
ಇಂದು ಎನ್‌ಇಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಕೆ

ಸಾರಿಗೆ ಸಂಸ್ಥೆ ನೌಕರರ ಮರು ನೇಮಕಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಕಳೆದ ಏಪ್ರಿಲ್‌ನಲ್ಲಿ ನಡೆದ ಮುಷ್ಕರ ಸಂದರ್ಭದಲ್ಲಿ ಅಮಾನತುಗೊಂಡ, ವರ್ಗಾವಣೆಯಾದ ಸಾರಿಗೆ ಸಂಸ್ಥೆಯ ಚಾಲಕರು, ನಿರ್ವಾಹಕರು, ಮಹಿಳಾ ಸಿಬ್ಬಂದಿಯನ್ನು ಮರು ನೇಮಕ ಮಾಡಬೇಕು. ವರ್ಗಾವಣೆ ರದ್ದುಗೊಳಿಸಬೇಕು ಎಂದು ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ಮುಖ್ಯಸ್ಥ ಶೌಕತ್ ಅಲಿ ಆಲೂರ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರಿಗೆ ಸಂಸ್ಥೆಗಳ ನೌಕರರು ಇತರ ಸರ್ಕಾರಿ ನೌಕರರಿಗಿಂತ ಅತ್ಯಂತ ಕಡಿಮೆ ಸಂಬಳ ಪಡೆದು ಅತಿ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಹಗಲು, ರಾತ್ರಿಯೆನ್ನದೇ, ಹಬ್ಬ–ಹರಿದಿನಗಳನ್ನು ಲೆಕ್ಕಿಸದೇ ಬಸ್ಸುಗಳನ್ನು ಓಡಿಸುತ್ತಾರೆ. ಹೀಗಾಗಿ, ವೇತನವನ್ನು ಹೆಚ್ಚಳ ಮಾಡಬೇಕು ಎಂದು ಮುಷ್ಕರ ನಡೆಸಿದ್ದಾರೆ. ಇದಕ್ಕಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಮುಷ್ಕರದಲ್ಲಿ ಭಾಗವಹಿಸಿದ 262 ಜನರ ಪೈಕಿ 151 ಜನರನ್ನು ವರ್ಗಾವಣೆ ಮಾಡಿದೆ. 63 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇದರಲ್ಲಿ ಮಹಿಳಾ ಸಿಬ್ಬಂದಿ, ಮುಷ್ಕರದಲ್ಲಿ ಭಾಗವಹಿಸದವರೂ ಇದ್ದಾರೆ. ಕೆಲ ಮೇಲಧಿಕಾರಿಗಳು ವೈಯಕ್ತಿಕ ದ್ವೇಷದಿಂದ ವ್ಯವಸ್ಥಾಪಕ ನಿರ್ದೇಶಕರಿಗೆ ತಪ್ಪು ಮಾಹಿತಿ ನೀಡಿ ಅಮಾನತು ಮಾಡಿಸಿದ್ದಾರೆ. ಕೂಡಲೇ ಎಲ್ಲರ ಅಮಾನತನ್ನು ವಾಪಸ್ ಪಡೆದು ಕರ್ತವ್ಯಕ್ಕೆ ಸೇರಿಸಿಕೊಳ್ಳಬೇಕು’ ಎಂದರು.

ಅಮಾನತು ಪ್ರಕರಣಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ನೌಕರರ ವಿರುದ್ಧ ಆಡಳಿತ ಮಂಡಳಿ ಹೂಡಿರುವ ಶಿಸ್ತು ಕ್ರಮಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ಆದೇಶಿಸಿದೆ. ಇದನ್ನು ಅನುಸರಿಸಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಂಸ್ಥೆಗಳಲ್ಲಿ ಶಿಸ್ತು ಕ್ರಮಗಳನ್ನು ರದ್ದು ಮಾಡಿವೆ. ಆದರೆ, ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಅಂಥ ಯಾವುದೇ ಪ್ರಕ್ರಿಯೆಗಳು ನಡೆಯದೇ ಕಾರ್ಮಿಕರನ್ನು ದ್ವೇಷ ಭಾವನೆಯಿಂದ ನೋಡುತ್ತಿರುವುದು ಸಮಂಜಸವಲ್ಲ ಎಂದು ಹೇಳಿದರು.

ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ದುಡಿಯುತ್ತಿರುವ ಶೇ 90ರಷ್ಟು ಸಿಬ್ಬಂದಿ ಕೃಷಿ ಕೂಲಿಕಾರರ ಮಕ್ಕಳಾಗಿದ್ದಾರೆ. ನೌಕರಿಯ ಮೇಲೆ ಅವಲಂಬಿತರಾಗಿರುವ ನೂರಾರು ಕುಟುಂಬಗಳು ಯಾವುದೇ ಆದಾಯವಿಲ್ಲದೇ ಕೋವಿಡ್–19ನಿಂದಾಗಿ ತೀವ್ರ ಸಂಕಷ್ಟದಲ್ಲಿವೆ. ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿ ಸಿಬ್ಬಂದಿಯನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವುದನ್ನು ಬಿಟ್ಟು ದ್ವೇಷ ಸಾಧನೆ ಮಾಡುತ್ತಿರುವುದು ಸರಿಯಲ್ಲ. ನೌಕರರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಒತ್ತಾಯಿಸಿ ಇದೇ 16ರಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ (ಅಂಬೇಡ್ಕರ್‌ ವಾದ) ಎಸ್.ಆರ್.ಕೊಲ್ಲೂರ, ಅಹಿಂದ ಚಿಂತಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಮೇಶ ನೀಲೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು