ಬುಧವಾರ, ಆಗಸ್ಟ್ 10, 2022
24 °C

ಹೆಚ್ಚಿನ ಮೊತ್ತದ ಪರಿಹಾರಕ್ಕೆ ಶಾಸಕ ಪಾಟೀಲ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ತಾಲ್ಲೂಕಿನಲ್ಲಿ 3 ತಿಂಗಳು ಹಿಂದೆ ಭೀಮಾ ಪ್ರವಾಹ, ಅತಿವೃಷ್ಟಿಯಿಂದ ಹಾಳಾದ ಬೆಳೆಗಳು ಮತ್ತು ಕೆರೆಗಳು, ಮನೆಗಳನ್ನು ತಾಲ್ಲೂಕಿನ 4 ಗ್ರಾಮಗಳಲ್ಲಿ ಸೋಮವಾರ ಕೇಂದ್ರ ಅಧ್ಯಯನ ತಂಡ ಪರಿಶೀಲನೆ ನಡೆಸಿತು.

ತಂಡದ ಮುಖ್ಯಸ್ಥ ರಮೇಶಕುಮಾರ ಘಂಟಾ, ಸದಸ್ಯ ಭರತೇಂದು ಸಿಂಗ್, ರಾಜ್ಯ ವಿಪತ್ತು ನಿರ್ವಹಣಾ ತಂಡದ ಡಾ.ಮನೋಜ್ ರಾಜನ್, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ತಹಶೀಲ್ದಾರ್ ನಾಗಮ್ಮ ಎಂ.ಕೆ. ಅವರು ತಾಲ್ಲೂಕಿನ ಬಿದನೂರ ಗ್ರಾಮದ ಹತ್ತಿರ ಮಳೆಯಿಂದ ಒಡೆದು ಹೋದ ಕೆರೆ ಹಾಗೂ ಗೊಬ್ಬುರ (ಬಿ) ಗ್ರಾಮದಲ್ಲಿ ಅತಿವೃಷ್ಟಿಯಿಂದ ಹಾಳಾದ ತೊಗರಿ ಬೆಳೆ ಮತ್ತು ತಾಲ್ಲೂಕಿನ ಚಿಣಮಗೇರಾ ಗ್ರಾಮದಲ್ಲಿ ಹಾಳಾದ ರಸ್ತೆಗಳನ್ನು ಮತ್ತು ಗೌರ(ಬಿ) ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಹಾಳಾದ ಮನೆಗಳನ್ನು ವೀಕ್ಷಣೆ ಮಾಡಿದರು.

ಶಾಸಕ ಎಂ.ವೈ.ಪಾಟೀಲ ಅವರು ತಾಲ್ಲೂಕಿನ ಬಿದನೂರ ಗ್ರಾಮದಲ್ಲಿ ಒಡೆದ ಕೆರೆಯನ್ನು ಕೇಂದ್ರ ತಂಡ ವೀಕ್ಷಣೆ ಮಾಡುವಾಗ ಮಾಹಿತಿ ನೀಡಿ, 3 ತಿಂಗಳ ಹಿಂದೆ ಭೀಮಾ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಸುಮಾರು 1.10 ಲಕ್ಷ ಎಕರೆ ಬೆಳೆ ನಾಶವಾಗಿದೆ. ಬಿದನೂರ, ಹಾಗರಗುಂಡಗಿ, ಅಫಜಲಪುರ ಕೆರೆಗಳು ಒಡೆದು ಹೋಗಿವೆ. 2 ಸಾವಿರ ಮನೆಗಳು ಹಾಳಾಗಿ ಹೋಗಿವೆ. ರೈತರ ಜಮೀನುಗಳು ಕಿತ್ತು ಹೋಗಿವೆ ಎಂದು ಮಾಹಿತಿ ನೀಡಿದರು.

ಭೀಮಾ ಪ್ರವಾಹಕ್ಕೆ ಅಫಜಲಪುರ ತಾಲ್ಲೂಕು ಗ್ರಾಮಗಳು ಮೊದಲು ತುತ್ತಾಗುತ್ತವೆ. ಹೀಗಾಗಿ ನಮ್ಮ ತಾಲ್ಲೂಕಿಗೆ ಪ್ರವಾಹ ಬಂದಾಗೊಮ್ಮೆ ಹೆಚ್ಚು ಹಾನಿಯಾಗುತ್ತದೆ ಎಂದು ತಿಳಿಸಿದರು.

ಪ್ರವಾಹ ಮತ್ತು ಅತಿವೃಷ್ಟಿಯಿಂದ 3 ತಿಂಗಳು ಕಳೆದರೂ ಇನ್ನೂವರೆಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪರಿಹಾರ ಬಂದಿಲ್ಲ, ಪರಿಹಾರ ನಿರ್ವಹಣೆಯಲ್ಲಿ 2 ಸರ್ಕಾರ ವಿಫಲವಾಗಿವೆ. ಜನರು ಕಷ್ಟದಲ್ಲಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹಳೆಯ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಪರಿಹಾರ ನೀಡುವುದು ಬೇಡ. ಈಗಿನ ಬೆಲೆಗಳಿಗೆ ತಕ್ಕಂತೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ನು ಬದಲಾಯಿಸಬೇಕು. ಆಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ
ಎಂ.ವೈ.ಪಾಟೀಲ, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.