ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಕಾಲೇಜು ಅಧ್ಯಾಪಕರಿಗೆ ಬೇಸಿಗೆ ರಜೆ ನೀಡಲು ಆಗ್ರಹ

Published 14 ಏಪ್ರಿಲ್ 2024, 5:10 IST
Last Updated 14 ಏಪ್ರಿಲ್ 2024, 5:10 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರಿಗೆ ಒಂದು ತಿಂಗಳು ಬೇಸಿಗೆ ರಜೆ ನೀಡಬೇಕು ಎಂದು ಹೈದರಾಬಾದ್‌ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ ಆಗ್ರಹಿಸಿದೆ.

ಈ ಕುರಿತು ಉಪನ್ಯಾಸಕರು ಮೌಲ್ಯಮಾಪನ ಕಾರ್ಯವನ್ನು ಸ್ಥಗಿತಗೊಳಿಸಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕುಲಪತಿ ಪ್ರೊ. ದಯಾನಂದ ಅಗಸರ ಅವರಿಗೆ ಮನವಿ ಸಲ್ಲಿಸಿದರು.

‘ಕೋವಿಡೋತ್ತರ ಕಾಲಘಟ್ಟದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಉಂಟಾದ ವ್ಯತ್ಯಾಸಗಳನ್ನು ಸರಿದೂಗಿಸಿಕೊಳ್ಳಲು ವಿಶ್ವವಿದ್ಯಾಲಯವು ಕೇವಲ ಅಧ್ಯಾಪಕರನ್ನೇ ಗುರಿಯಾಗಿಸಿಕೊಂಡಿದೆ. ಇದರಿಂದಾಗಿ ಅಧ್ಯಾಪಕರ ಶೈಕ್ಷಣಿಕ ಸಾಮರ್ಥ್ಯವು ತೀವ್ರ ಕುಂಠಿತಗೊಳ್ಳುತ್ತಿದೆ. ಅಂದರೆ ಮಧ್ಯಂತರ ಅಥವಾ ಬೇಸಿಗೆ ಸೇರಿ ಯಾವುದೇ ಪ್ರಕಾರದ ರಜೆಗಳು ಇಲ್ಲದಂತಾಗಿ ಮಾನಸಿಕ ಒತ್ತಡದಲ್ಲಿದ್ದಾರೆ. ಹೀಗಾಗಿ ಅಧ್ಯಾಪಕರ ಬೋಧನಾ ಸಾಮರ್ಥ್ಯ ಮತ್ತು ಉನ್ನತ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ಮನವರಿಕೆ ಮಾಡಿದರು.

‘ಈಗಾಗಲೇ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಿಗೆ ಬೇಸಿಗೆ ರಜೆಗಳನ್ನು ಆಯಾ ಸಮಿಸ್ಟರ್‌ಗಳ ಕೊನೆಯಲ್ಲಿ ಕೊಡಲಾಗಿದೆ. ಆದರೆ ಗುಲಬರ್ಗಾ ವಿ.ವಿ. ಯಾವುದೇ ಪ್ರಕಾರದ ರಜೆ ಕೊಡದಿರುವುದು ಅನ್ಯಾಯದ ಕ್ರಮ. ಅಲ್ಲದೇ ಇದು ಅಸಾಂವಿಧಾನಿಕ ನಡೆಯಾಗಿದೆ. ರಣಬಿಸಿಲಿದ್ದ ಕಾರಣ ಪದವಿ ಕಾಲೇಜು ಅಧ್ಯಾಪಕರಿಗೆ ಏ.20ರಿಂದ ಮೇ 20ರವರೆಗೆ ಬೇಸಿಗೆ ರಜೆ ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು.

‘ಸರ್ಕಾರಿ ಕಾಲೇಜುಗಳ ಕಟ್ಟಡಗಳನ್ನು ಈಗಾಗಲೇ ಲೋಕಸಭಾ ಚುನಾವಣೆಗಾಗಿ ಸರ್ಕಾರ ಕಬ್ಜಾ ಮಾಡಿಕೊಂಡ ಕಾರಣ ವಿದ್ಯಾರ್ಥಿಗಳು ಸಹ ಕಾಲೇಜಿಗೆ ಸರಿಯಾಗಿ ಹಾಜರಾಗುತ್ತಿಲ್ಲ. ಈಗಾಗಲೇ 2 ಮತ್ತು 4ನೇ ಸೆಮಿಸ್ಟರ್ ಪಠ್ಯಕ್ರಮವು ಸಹ ಪೂರ್ಣಗೊಳಿಸಲಾಗಿದೆ’ ಎಂದು ಗಮನ ಸೆಳೆದರು.

‘ಕಳೆದ ಆರು ತಿಂಗಳಿಂದ ನನೆಗುದಿಗೆ ಬಿದ್ದಿರುವ ಮೌಲ್ಯಮಾಪನ ಬಿಲ್‌ಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಆಯಾ ಕಾಲೇಜುಗಳಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಮುಂಗಡ ಹಣ ನೀಡುವಲ್ಲಿ ಅನಗತ್ಯ ವಿಳಂಬ ಮಾಡಬಾರದು. ಅನಗತ್ಯ ವಿಳಂಬ ಮಾಡುತ್ತಿರುವ ಹಣಕಾಸು ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

ಕುಲಸಚಿವರಾದ ಮೇಧಾವಿನಿ ಕಟ್ಟಿ, ಹಣಕಾಸು ಅಧಿಕಾರಿ ಗಾಯಿತ್ರಿ ಉಪಸ್ಥಿತರಿದ್ದರು. ಸಂಘದ ವಿಭಾಗೀಯ ಅಧ್ಯಕ್ಷ ಶರಣಪ್ಪ ಸೈದಾಪೂರ, ಗುಲಬರ್ಗಾ ವಿಶ್ವವಿದ್ಯಾಲಯದ ಖಾಸಗಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ನೀಲಕಂಠ ಕಣ್ಣಿ, ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಜಗನ್ನಾಥ ತಳವಾರ, ಪಂಡಿತ ಬಿ.ಕೆ, ಶರಣಪ್ಪ ಗುಂಡಗುರ್ತಿ, ಮಾರುತಿ ಮಾರಪಳ್ಳಿ, ವೆಂಕಟೇಶ ಪೂಜಾರಿ, ಲಕ್ಷ್ಮಣ ಬೋಸ್ಲೆ, ಅಂಬಾರಾಯ ಹಾಗರಗಿ, ದಯಾನಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT