ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ: ಅಷ್ಟೂರು ಜಾತ್ರೆಗೆ ಭಕ್ತರ ಪಾದಯಾತ್ರೆ

ಮಾಡಿಯಾಳ, ಹೆಬಳಿ ಗ್ರಾಮದಿಂದ ಹಿಂದೂ-ಮುಸ್ಲಿಂ ಸಾಮರಸ್ಯದ ಉತ್ಸವ
Published 28 ಮಾರ್ಚ್ 2024, 5:30 IST
Last Updated 28 ಮಾರ್ಚ್ 2024, 5:30 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕಿನ ಮಾಡಿಯಾಳ, ಹೆಬಳಿ ಗ್ರಾಮದಲ್ಲಿನ ಹಿಂದೂ, ಮುಸ್ಲಿಂ ಬಾಂಧವರು ಪರಸ್ಪರ ಸಾಮರಸ್ಯದಿಂದ ಬೀದರ್‌ ಸಮೀಪದ ಅಷ್ಟೂರಿನ ಅಲ್ಲಮ ಪ್ರಭುದೇವರ ಜಾತ್ರೆಗೆ ಬುಧವಾರದಿಂದ ಪಾದಯಾತ್ರೆ ಬೆಳೆಸಿದ್ದಾರೆ.

ಹೋಳಿ ಹುಣ್ಣಿಮೆಯ ಮಾರನೇ ದಿನದಂದು ಈ ಎರಡೂ ಗ್ರಾಮಗಳಲ್ಲಿ ಉತ್ಸವದ ಸಂಭ್ರಮ ಕಂಡು ಬರುವುದು. ಮಾಡಿಯಾಳದ ಪೀಠಾಧಿಪತಿ ಸೋಮಶೇಖರ ಶಿವರಾಯ ಒಡೆಯರ ಹಾಗೂ ಹೆಬಳಿಯ ಶ್ರೀಮಂತರಾವ ಧರ್ಮಣ್ಣಾ ಒಡೆಯರ ನೇತೃತ್ವದಲ್ಲಿ ಆಯಾ ಗ್ರಾಮದ ಭಕ್ತರ ಗುಂಪು ಗ್ರಾಮದಿಂದ ಬೆಳದಿಂಗಳಲ್ಲಿ ಹೊರಡುವರು, ನಂದಿಕೋಲ ಮೆರವಣಿಗೆ, ವಿವಿಧ ವಾದ್ಯಗಳ ಸಡಗರ ಹಾಗೂ ವಿಶೇಷ ಪೂಜೆ, ಛತ್ರಚಾಮರದೊಂದಿಗೆ ಮೆರವಣಿಗೆ ಮೂಲಕ ಅಷ್ಟೂರು ಜಾತ್ರೆಗೆ ಬೀಳ್ಕೊಡುವರು.

ಹಿಂದೂಗಳು ಅಲ್ಲಮಪ್ರಭು ಎಂದರೆ, ಮುಸ್ಲಿಂ ಬಾಂಧವರು ಸುಲ್ತಾನ ಮಶಾಕ ಎಂದು ಆರಾಧಿಸುವುದು ವಿಶೇಷ. ಕ್ವಾಟಿ ಜಾತ್ರೆ ಎಂದು ಕರೆಯುವ ಈ ಜಾತ್ರೆಗೆ ಭಕ್ತರು ಮೊದಲು ಒಂಟೆ, ಕುದುರೆ ಜತೆಗೆ ಬುತ್ತಿ ಹೊತ್ತು ಸಾಗುತ್ತಿದ್ದರು. ಈಗ ದಾರಿಯುದ್ದಕ್ಕೂ ದಾಸೋಹ ವ್ಯವಸ್ಥೆ ಹೆಚ್ಚಿದ ಪರಿಣಾಮ ಭಕ್ತರಿಗೆ ಅನುಕೂಲವಾಗಿದೆ.

ಮಾಡಿಯಾಳದಿಂದ ಒಡೆಯರ ನೇತೃತ್ವದಲ್ಲಿ ಲಾಡ ಚಿಂಚೋಳಿ, ತೆಲ್ಲೂರು, ನರೋಣಾ ಮಾರ್ಗವಾಗಿ ರಾಚಣ್ಣ ವಾಗ್ದರಿ ಗ್ರಾಮಕ್ಕೆ ಅಲ್ಲಿಯ ನೂರಾರು ಭಕ್ತರು ಮೆರವಣಿಗೆ ಮೂಲಕ ಆಗಮಿಸಿದರೆ, ಹೆಬಳಿಯಿಂದ ಭಕ್ತರು ಒಡೆಯರ ನೇತೃತ್ವದಲ್ಲಿ ಆಳಂದ, ಹಳ್ಳಿ ಸಲಗರ, ಬಿಲಗುಂದಿ, ಕಮಲಾನಗರದಿಂದ ರಾಚಣ್ಣ ವಾಗ್ದರಿಗೆ ತಲುಪುವರು.

ಗುರುವಾರದಿಂದ ಎರಡೂ ಗ್ರಾಮದ ಭಕ್ತರು ಒಗ್ಗೂಡಿ ಬಸವಕಲ್ಯಾಣದ ಸದಲಾಪುರ, ಹುಮನಾಬಾದ್‌, ಕಾರಂಜಾ ಅಣೆಕಟ್ಟೆ ತಟದಿಂದ ಕಮಠಾಣ, ಪಾದಕಟ್ಟಿ ಮೂಲಕ ಬೀದರ್‌ ಪಟ್ಟಣ ಹಾಯ್ದು ಅಷ್ಟೂರು ಗ್ರಾಮಕ್ಕೆ ಐದನೇ ದಿನಕ್ಕೆ ತಲುಪುವರು. ಮಾರ್ಗದುದ್ದಕ್ಕೂ ಸಾಮೂಹಿಕ ಪೂಜೆ, ಸಹಪಂಕ್ತಿ ಭೋಜನ, ದಾಸೋಹ ಸೇವೆ, ನಂದಿಕೋಲ ಮೆರವಣಿಗೆ, ಮಾಯಾದೇವಿ ಪುತ್ಥಳಿ ಮೆರವಣಿಗೆ ಜರುಗಲಿದೆ. ಮಾಡಿಯಾಳ, ಹೆಬಳಿ ಗ್ರಾಮದ ಭಕ್ತರೊಂದಿಗೆ ನೆರೆಯ ಜೀರಹಳ್ಳಿ, ಪಡಸಾವಳಿ, ಮಟಕಿ, ನೆರೆಯ ಮಹಾರಾಷ್ಟ್ರದ ಕೇಸರ ಜವಳಗಾ, ಬೆಳಾಂ ಸೇರಿದಂತೆ ವಿವಧೆಡೆಯಿಂದ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು.

ಅಷ್ಟೂರಿನ ಸಮೀಪದಲ್ಲಿನ ಸಾಲು ಸಾಲು ಗುಂಬಜ್‌ಗಳಲ್ಲಿನ ವಿಶಾಲ ಮೈದಾನದಲ್ಲಿ 6ನೇ ದಿನಕ್ಕೆ ಜಾತ್ರೆ ಆರಂಭಗೊಳ್ಳುವುದು. ನಾಲ್ಕು ದಿನ ನಡೆಯುವ ಈ ಜಾತ್ರೆಯಲ್ಲಿ ಬೀದರ್‌, ಕಲಬುರಗಿ ಜಿಲ್ಲೆಯ ಸಾವಿರಾರು ಸಂಖ್ಯೆಯ ಭಕ್ತರು ಭಾಗವಹಿಸುವರು. ಮಾಡಿಯಾಳ, ಹೆಬಳಿ ಗ್ರಾಮದ ಒಡೆಯರ ನೇತೃತ್ವದಲ್ಲಿ ಭಕ್ತರು ತಲುಪಿದ ನಂತರವೇ ಅಷ್ಟೂರು ಜಾತ್ರೆ ನಾಲ್ಕು ದಿನ ಅದ್ದೂರಿಯಾಗಿ ಜರುಗುವುದು. ಅಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸಾಮರಸ್ಯದಿಂದ ವಿವಿಧ ಆಚರಣೆಗಳಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ. ನಂತರ ಮಾಡಿಯಾಳ, ಹೆಬಳಿ ಭಕ್ತರು ತಮ್ಮ ಒಡೆಯರ ನೇತೃತ್ವದಲ್ಲಿ ಅದೇ ಮಾರ್ಗದಲ್ಲಿ ವಾಪಸ್‌ ಸ್ವಗ್ರಾಮಕ್ಕೆ ಮರಳಿ ಯುಗಾದಿಗೆ ಜಾತ್ರೆ ಮಾಡುವರು. ಮಾಡಿಯಾಳ ಹೆಬಳಿ ಗ್ರಾಮದಿಂದ ಅಷ್ಟೂರಿಗೆ ತೆರಳುವುದು ನೂರಾರು ವರ್ಷದಿಂದ ನಡೆದುಕೊಂಡು ಬಂದ ಪರಂಪರೆ. ಎಲ್ಲ ಭಕ್ತರೂ ಕ್ವಾಟಿ ಜಾತ್ರೆಗೆ ಆಗಮಿಸುವರು ಸೋಮಶೇಖರ ಒಡೆಯರ ಮಾಡಿಯಾಳ

ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಿಂದ ಅಲ್ಲಮಪ್ರಭು ದೇವರ ಭಕ್ತರು ಅಷ್ಟೂರು ಜಾತ್ರೆಗೆ ಪಾದಯಾತ್ರೆ ಕೈಗೊಂಡರು 
ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಿಂದ ಅಲ್ಲಮಪ್ರಭು ದೇವರ ಭಕ್ತರು ಅಷ್ಟೂರು ಜಾತ್ರೆಗೆ ಪಾದಯಾತ್ರೆ ಕೈಗೊಂಡರು 
ಮಾಡಿಯಾಳ ಹೆಬಳಿ ಗ್ರಾಮದಿಂದ ಅಷ್ಟೂರಿಗೆ ತೆರಳುವುದು ನೂರಾರು ವರ್ಷದಿಂದ ನಡೆದುಕೊಂಡು ಬಂದ ಪರಂಪರೆ. ಎಲ್ಲ ಭಕ್ತರೂ ಕ್ವಾಟಿ ಜಾತ್ರೆಗೆ ಆಗಮಿಸುವರು
ಸೋಮಶೇಖರ ಒಡೆಯರ ಮಾಡಿಯಾಳ
ಅಷ್ಟೂರು ಜಾತ್ರೆಗೆ ಸಂಜೆ ಬೆಳದಿಂಗಳಲ್ಲಿ ಮಾತ್ರ ಪಾದಯಾತ್ರೆ ಕೈಗೊಂಡು ಮಧ್ಯಾಹ್ನ ವಸತಿ ಮಾಡುತ್ತೆವೆ. ಪ್ರತಿ ವರ್ಷ ಉತ್ಸವದೊಂದಿಗೆ ತೆರಳಿ ಮರಳಿ ನಮ್ಮೂರಲ್ಲಿ ಜಾತ್ರೆ ಮಾಡುತ್ತೇವೆ
ಶ್ರೀಮಂತರಾವ ಒಡೆಯರ ಹೆಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT