ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಹಾವು–ಚೇಳುಗಳಿವೆ, ಬೀದಿದೀಪ ಅಳವಡಿಸಿ...

ಒಳಚರಂಡಿ ಸೇರಿ ಮೂಲಸೌಕರ್ಯ ಕೊರತೆ: ಬೇಸತ್ತ ಧರಿಯಾಪುರ ಜಿಡಿಎ ಲೇಔಟ್‌ ಜನ
Published 10 ಜುಲೈ 2024, 6:27 IST
Last Updated 10 ಜುಲೈ 2024, 6:27 IST
ಅಕ್ಷರ ಗಾತ್ರ

ಕಲಬುರಗಿ: ತಗ್ಗುದಿನ್ನೆಗಳಿಂದ ಕೂಡಿದ ಕೆಸರುಮಯ ರಸ್ತೆಗಳು, ಕಟ್ಟಿಕೊಂಡ ಒಳಚರಂಡಿಗಳು, ಇಲ್ಲದ ಬೀದಿದೀಪಗಳು, ಸಂಜೆಯಾಗುತ್ತಲೇ ಆವರಿಸುವ ಕತ್ತಲು, ವಿಪರೀತ ಹಾವುಗಳ ಕಾಟ, ಪಾಳುಬಿದ್ದ ಉದ್ಯಾನ...

–ಈ ದೃಶ್ಯಗಳು ಯಾವುದೋ ಖಾಸಗಿ ಲೇಔಟ್‌ನದ್ದಲ್ಲ. ಬದಲಾಗಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು(ಕುಡಾ) ಧರಿಯಾಪುರ ಗಾಣದೇವತೆ ದೇವಸ್ಥಾನ ಸಮೀಪದ ಸರ್ವೆ ನಂಬರ್‌ 7 ಮತ್ತು 8/2ರಲ್ಲಿ ನಿರ್ಮಿಸಿರುವ ಜಿಡಿಎ ಲೇಔಟ್‌ನ ಸಮಸ್ಯೆಗಳಿವು.

1996ರಲ್ಲೇ ಸಾರ್ವಜನಿಕರಿಗೆ ಹಂಚಿಕೆಯಾದ ಧರಿಯಾಪುರ ಜಿಡಿಎ ಲೇಔಟ್‌ನಲ್ಲಿ 100ಕ್ಕೂ ಹೆಚ್ಚು ಮನೆಗಳಿವೆ. ಅಂದಾಜು 1 ಸಾವಿರ ಜನಸಂಖ್ಯೆ ಇದೆ. 10 ವರ್ಷಗಳಿಂದ ಜನರು ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಕನಿಷ್ಠ ಮೂಲಸೌಕರ್ಯ ಒದಗಿಸದ ಕಾರಣ ನಿತ್ಯ ಗೋಳಾಡುವಂತಾಗಿದೆ ಎಂದು ನಿವಾಸಿಗಳು ‘ಪ್ರಜಾವಾಣಿ’ ಎದುರು ಸಮಸ್ಯೆಗಳನ್ನು ಬಿಚ್ಚಿಟ್ಟರು.

‘ಗಾಣದೇವತೆ ಗುಡಿಯಿಂದ ಶಿವಲಿಂಗೇಶ್ವರ ದೇವಸ್ಥಾನದವರೆಗೆ ಬೀದಿದೀಪಗಳಿಲ್ಲ. ಲೇಔಟ್‌ನ ಒಳರಸ್ತೆ ಕಂಬಗಳಿಗೂ ವಿದ್ಯುತ್‌ ದೀಪಗಳಿಲ್ಲ. ಹಾವು–ಚೇಳಿನ ಕಾಟ ಬಹಳಷ್ಟಿದೆ. ಸಂಜೆಯಾಗುತ್ತಲೇ ಮಹಿಳೆಯರು, ಮಕ್ಕಳು ಹೆದರುತ್ತಾರೆ. ಹೊರಗಡೆ ಬರಲು ಪುರುಷರಿಗೂ ಭಯವಾಗುತ್ತದೆ’ ಎಂದು ನಿವಾಸಿಗಳಾದ ದಿನೇಶ ಗಾಯದನಕರ್‌, ಪೀರಯ್ಯ ಗುತ್ತೇದಾರ, ಬಸವರಾಜ ತಳವಾರ, ನಾಗರಾಜ ಮದರಿ ಅಳಲು ತೋಡಿಕೊಂಡರು.

‘ಅಲ್ಪಸ್ವಲ್ಪ ಸರಿಯಾಗಿದ್ದ ರಸ್ತೆಗಳೂ 24X7 ಕುಡಿಯುವ ನೀರಿನ ಕಾಮಗಾರಿಯಿಂದಾಗಿ ಹಾಳಾಗಿವೆ. ಕೆಲವೆಡೆ ಒಳಚರಂಡಿ ವ್ಯವಸ್ಥೆಗೂ ಧಕ್ಕೆಯಾಗಿದೆ. ಮಳೆಯಿಂದಾಗಿ ಓಡಾಡಲು ಕಷ್ಟ ಪಡುವಂತಾಗಿದೆ. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ರಸ್ತೆಗಳನ್ನು ಕೂಡ ದುರಸ್ತಿ ಮಾಡಬೇಕು’ ಎಂದು ಆಗ್ರಹಿಸಿದರು.

‘ಜಿಡಿಎ ಲೇಔಟ್‌ನಲ್ಲಿ ಎಲ್ಲ ಮೂಲಸೌಕರ್ಯ ಇರುತ್ತವೆ ಎಂದು ಸೈಟ್‌ ಖರೀದಿಸಿದ್ದೇವೆ. ಆದರೆ, ಇಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲ. ಜಿಡಿಎ(ಈಗ ಕುಡಾ) ಅಧಿಕಾರಿಗಳನ್ನು ಕೇಳಿದರೆ, ಮಹಾನಗರ ಪಾಲಿಕೆಗೆ ಹೋಗಿ ಅನ್ನುತ್ತಾರೆ. ಪಾಲಿಕೆಯವರು ಜಿಡಿಎ ಕಡೆ ಬೊಟ್ಟು ಮಾಡುತ್ತಾರೆ’ ಎಂದು ಶಿವಯೋಗಿ ಶಿರಸಗಿಕರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಒಳಚರಂಡಿ ನಿರ್ಮಿಸಿ 15 ವರ್ಷಗಳಾಗಿವೆ. ಅವು ಈಗ ಬ್ಲಾಕ್‌ ಆಗಿದ್ದು, ಮ್ಯಾನ್‌ಹೋಲ್‌ಗಳ ಮೂಲಕ ಗಲೀಜು ನೀರು ಹೊರಬರುತ್ತಿದೆ. ಒಳಚರಂಡಿ ಸಮಸ್ಯೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ‘ಕಲಬುರಗಿ ಕನೆಕ್ಟ್‌’ ಮೂಲಕ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಎನ್ನುತ್ತಾರೆ ದಿಗಂಬರ ತ್ರಿಮುಖೆ.

‘ಜಿಡಿಎ ಲೇಔಟ್‌ ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಗೆ ಬರುತ್ತದೆ. ಇದನ್ನು ಕೇವಲ 2 ಕಿ.ಮೀ ಅಂತರದಲ್ಲಿರುವ ಸ್ಟೇಷನ್‌ ಬಜಾರ್‌ ಠಾಣೆಗೆ ಒಳಪಡಿಸಬೇಕು. ಜೊತೆಗೆ ಪೊಲೀಸ್‌ ಗಸ್ತು ಹೆಚ್ಚಿಸಬೇಕು’ ಎಂಬುದು ಅವರ ಒತ್ತಾಯ.

‘ಐವಾನ್‌–ಇ–ಶಾಹಿ ರಸ್ತೆ ಮೂಲಕ ಕೋರಂಟಿ ಹನುಮಾನ್ ದೇವಸ್ಥಾನದ ಮಾರ್ಗವಾಗಿ ಗಾಣದೇವತೆ ಗುಡಿಯವರೆಗೆ ನಗರ ಸಾರಿಗೆ ಬಸ್‌ ವ್ಯವಸ್ಥೆ ಮಾಡಬೇಕು’ ಎಂದು ಶಿವಯೋಗಿ ಮೇಲನಕೇರಿ, ಭೀಮಯ್ಯ ಕಲಾಲ್‌ ಕೋರಿದರು.

‘ಸೊಳ್ಳೆ ಕಾಟ ಹೆಚ್ಚಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ’ ಎಂದು ದೂರಿದ ಸ್ಥಳೀಯರು, ‘ಇಲ್ಲಿನ ಉದ್ಯಾನ ಅಭಿವೃದ್ಧಿಪಡಿಸಬೇಕು. ವಾಕಿಂಗ್‌ ಟ್ರ್ಯಾಕ್ ನಿರ್ಮಿಸಿ ವಾಯುವಿಹಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದೂ ಮನವಿ ಮಾಡಿದರು.

‘ಮೂಲಸೌಕರ್ಯ ಒದಗಿಸಲು ಕ್ರಮ’ ‘

ಧರಿಯಾಪುರ ಜಿಡಿಎ ಲೇಔಟ್‌ನಲ್ಲಿ ಶೀಘ್ರ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುವುದು. ಎಲ್‌ ಆ್ಯಂಡ್‌ ಟಿ ಕಂಪನಿಯವರು ಕುಡಿಯುವ ನೀರಿನ ಪೈಪ್‌ಲೈನ್‌ ಹಾಕುತ್ತಿರುವುದರಿಂದ ರಸ್ತೆಗಳನ್ನು ಅಗೆದಿದ್ದಾರೆ. ಅವರೇ ಅದನ್ನು ದುರಸ್ತಿ ಮಾಡುತ್ತಾರೆ. ಉಳಿದ ರಸ್ತೆಗಳನ್ನು ಕುಡಾದಿಂದ ದುರಸ್ತಿ ಮಾಡಿಕೊಡಲಾಗುವುದು. ಇನ್ನು ಒಳಚರಂಡಿ ಸಮಸ್ಯೆಯನ್ನು ಕೂಡ ಪರಿಹರಿಸಿ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ(ಕುಡಾ)ದ ಆಯುಕ್ತ ಜಿ.ಎಸ್‌. ಮಾಳಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮನೆ ಹತ್ತಿರದ ಮ್ಯಾನ್‌ಹೋಲ್‌ಗಳ ಮೂಲಕ ಗಲೀಜು ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ದುರ್ವಾಸನೆ ಬೀರುತ್ತಿದ್ದು ಶೀಘ್ರ ಸಮಸ್ಯೆ ಪರಿಹರಿಸಬೇಕು.
ಕಸ್ತೂರಿಬಾಯಿ ಲಕ್ಷ್ಮಣ ಭಜಂತ್ರಿ, ನಿವಾಸಿ
ಎಲ್ಲೆಂದರಲ್ಲಿ ಹಾವು–ಚೇಳು ಕಾಣಿಸಿಕೊಳ್ಳುತ್ತವೆ. ಹಾವು ನೋಡದ ದಿನಗಳೇ ಇಲ್ಲ. ಬೀದಿದೀಪಗಳಿಲ್ಲದ ಕಾರಣ ರಾತ್ರಿ ಆಗುತ್ತಿದ್ದಂತೆ ಹೊರಗಡೆ ಓಡಾಡದಂತಾಗಿದೆ.
ಶಂಕರ ಕಾಳಗಿ, ಜಿಡಿಎ ಲೇಔಟ್‌ ನಿವಾಸಿ
ಕಲಬುರಗಿಯ ಧರಿಯಾಪುರ ಜಿಡಿಎ ಲೇಔಟ್‌ನಲ್ಲಿ ಪಾಳುಬಿದ್ದ ಉದ್ಯಾನ
ಕಲಬುರಗಿಯ ಧರಿಯಾಪುರ ಜಿಡಿಎ ಲೇಔಟ್‌ನಲ್ಲಿ ಪಾಳುಬಿದ್ದ ಉದ್ಯಾನ
ಕಲಬುರಗಿಯ ಧರಿಯಾಪುರ ಜಿಡಿಎ ಲೇಔಟ್‌ನಲ್ಲಿ ಉರಗತಜ್ಞರು ಹಾವು ಹಿಡಿದಿರುವುದು
ಕಲಬುರಗಿಯ ಧರಿಯಾಪುರ ಜಿಡಿಎ ಲೇಔಟ್‌ನಲ್ಲಿ ಉರಗತಜ್ಞರು ಹಾವು ಹಿಡಿದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT