ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ– ಮಹಾರಾಷ್ಟ್ರ ಗಡಿಯಲ್ಲಿ ಇನ್ನಷ್ಟು ಚೆಕ್‌ಪೋಸ್ಟ್: ಜಿಲ್ಲಾಧಿಕಾರಿ ಹೇಳಿಕೆ

ಥರ್ಮಲ್ ಸ್ಕ್ರೀನಿಂಗ್‌ ಮಾಡಿ ಜಿಲ್ಲೆಗೆ ಪ್ರವೇಶ
Last Updated 24 ಫೆಬ್ರುವರಿ 2021, 3:11 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರು ಕಡ್ಡಾಯವಾಗಿ ಕೋವಿಡ್‌ ನೆಗೆಟಿವ್ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು ಎಂಬ ಜಿಲ್ಲಾಧಿಕಾರ ಅವರ ಸೂಚನೆ ಮಂಗಳವಾರವೂ ಕಟ್ಟುನಿಟ್ಟಾಗಿ ಜಾರಿಗೆ ಬರಲಿಲ್ಲ.

ಮಹಾರಾಷ್ಟ್ರದ ಮುಂಬೈ, ಪುಣೆ, ಸೊಲ್ಲಾಪುರದಿಂದ ರೈಲಿನ ಮೂಲಕ ನಗರಕ್ಕೆ ಬಂದಿಳಿದ ಜನರ ಕೋವಿಡ್‌ ನೆಗೆಟಿವ್ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ಅಧಿಕಾರಿಗಳು ಕೇಳಲಿಲ್ಲ. ಬದಲಾಗಿ ಥರ್ಮಲ್ ಗನ್‌ನಿಂದ ಪ್ರಯಾಣಿಕರ ಜ್ವರ ತಪಾಸಣೆ ಮಾಡಿ ನಿಲ್ದಾಣದಿಂದ ಹೊರಗೆ ಕಳಿಸಿದರು.

ಅಫಜಲಪುರ ತಾಲ್ಲೂಕಿನ ಬಳೂರ್ಗಿ–ಮಾಶಾಳ ಗಡಿಯಲ್ಲಿ ಮಾತ್ರ ಕೋವಿಡ್ ಪ್ರಮಾಣಪತ್ರ ಇಲ್ಲದವರನ್ನು ಒಳಕ್ಕೆ ಬಿಡಲಿಲ್ಲ. ಇದರಿಂದ ಕೆಲ ಹೊತ್ತು ವಾಗ್ವಾದ ನಡೆಸಿದ ಪ್ರಯಾಣಿಕರು ವಾಪಸ್ ತೆರಳಿದರು. ಆದರೆ, ಆಳಂದ ತಾಲ್ಲೂಕಿನ ಮಹಾರಾಷ್ಟ್ರ ಗಡಿಯಲ್ಲಿ ಕಡ್ಡಾಯವಾಗಿ ಪ್ರಮಾಣಪತ್ರ ಹಾಜರುಪ‍ಡಿಸುವಂತೆ ಕೇಳಲಿಲ್ಲ. ಅಲ್ಲದೇ, ಆಳಂದ ಪಟ್ಟಣದ ಮೂಲಕ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಎಂದಿನಂತಿತ್ತು.

ಇನ್ನಷ್ಟು ಚೆಕ್‌ಪೋಸ್ಟ್: ಅಫಜಲಪುರ ತಾಲ್ಲೂಕಿನಿಂದ ಮಹಾರಾಷ್ಟ್ರದ ದುಧನಿಗೆ ಹೆಚ್ಚು ವಹಿವಾಟು ಇದ್ದು, ಗಡಿಯಂಚಿನ ಗ್ರಾಮಗಳು ಮಹಾರಾಷ್ಟ್ರ ಈ ಪಟ್ಟಣಕ್ಕೆ ಹೋಗಿ ಬರುತ್ತಾರೆ. ಬಳೂರ್ಗಿ–ಮಾಶಾಳ ಗಡಿಯಲ್ಲಿ ಬಿಗಿ ಪಹರೆ ಇದ್ದುದರಿಂದ ಅನಿವಾರ್ಯವಾಗಿ ಅರ್ಜುಣಗಿ ಸೇರಿದಂತೆ ಇತರ ಗ್ರಾಮಗಳ ಮೂಲಕ ಮಹಾರಾಷ್ಟ್ರದಿಂದ ಜನರು ಜಿಲ್ಲೆಗೆ ಬರುತ್ತಿದ್ದಾರೆ. ಈಗಾಗಲೇ ಅಫಜಲಪುರ ತಾಲ್ಲೂಕಿನಲ್ಲಿ ಎರಡು ಚೆಕ್‌ಪೋಸ್ಟ್‌ಗಳಿದ್ದು, ಬುಧವಾರ ಅರ್ಜುಣಗಿ ಬಳಿ ಇನ್ನೊಂದು ಚೆಕ್‌ಪೋಸ್ಟ್ ಆರಂಭಿಸಲಾಗುವುದು ಎಂದು ಅಫಜಲಪುರ ತಹಶೀಲ್ದಾರ್ ನಾಗಮ್ಮ ಎಂ.ಕೆ. ತಿಳಿಸಿದರು.

ಪೂರ್ಣ ಪ್ರಮಾಣದ ಚೆಕ್‌ಪೋಸ್ಟ್: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುವವರನ್ನು ತಪಾಸಣೆಗೆ ಒಳಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಗಡಿಯಲ್ಲಿ ಭದ್ರತಾ ಸಿಬ್ಬಂದಿಗೆ ಪೂರ್ಣ ಪ್ರಮಾಣದ ಶೆಡ್ ನಿರ್ಮಿಸಲಾಗಿದೆ. ಇದಕ್ಕೆ ವಿದ್ಯುತ್ ಪೂರೈಕೆ ಕಲ್ಪಿಸಲಾಗಿದ್ದು, ದಿನದ 24 ಗಂಟೆಯೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರಿಗೆ ಚಹಾ, ಊಟ, ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಮಹಾರಾಷ್ಟ್ರದಿಂದ ಒಳಗೆ ಬರುವವರ ತಪಾಸಣೆ ಸಂದರ್ಭದಲ್ಲಿ ಅವರಿಗೆ ನೀರಿನ ಬಾಟಲ್ ನೀಡಲಾಯಿತು.

ಸತ್ತ ತಮ್ಮನ ಮುಖ ನೋಡಲು ಬಿಡಿ: ಅಧಿಕಾರಿ ಬಳಿ ಅಂಗಲಾಚಿದ ಮಹಿಳೆ

‘ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಮೋರಟಗಿಯಲ್ಲಿ ತಮ್ಮ ತೀರಿಕೊಂಡಿದ್ದು, ಕೊನೆಯದಾಗಿ ಅವನ ಮುಖ ನೋಡಲು ಅವಕಾಶ ಮಾಡಿಕೊಡಿ’ ಎಂದು ಮಹಾರಾಷ್ಟ್ರದಿಂದ ಅಫಜಲಪುರ ಮೂಲಕ ಮೋರಟಗಿಗೆ ಹೊರಟಿದ್ದ ಮಹಿಳೆಯೊಬ್ಬರು ಅಧಿಕಾರಿಗಳ ಎದುರು ಅಂಗಲಾಚಿದರು. ಆದರೆ, ಬಳೂರ್ಗಿ ಚೆಕ್‌ಪೋಸ್ಟ್ ಬಳಿ ಅವರನ್ನು ತಡೆದ ಅಧಿಕಾರಿಗಳು ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಇಲ್ಲದೇ ಒಳಗೆ ಬಿಡದಂತೆ ಸರ್ಕಾರ ಸೂಚಿಸಿದೆ. ಹೀಗಾಗಿ, ನಾವು ಏನೂ ಮಾಡುವಂತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT