ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ: ಪಂಕಜ್ ಕುಮಾರ ಪಾಂಡೆ

ಅಧಿಕಾರಿಗಳಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಸೂಚನೆ
Published 30 ಮೇ 2024, 16:05 IST
Last Updated 30 ಮೇ 2024, 16:05 IST
ಅಕ್ಷರ ಗಾತ್ರ

ಕಲಬುರಗಿ: ‘ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯ ಮುನ್ಸೂಚನೆಗಳಿದ್ದು, ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಅದನ್ನು ಸಮರ್ಥವಾಗಿ ನಿರ್ವಹಿಸಲು ಸನ್ನದ್ಧರಾಗಬೇಕು’ ಎಂದು ಜಿಲ್ಲೆಯ ಅಧಿಕಾರಿಗಳಿಗೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಬರಗಾಲ ನಿರ್ವಹಣೆ ಮತ್ತು ಪ್ರಸಕ್ತ 2024–25ನೇ ಸಾಲಿನ ಮುಂಗಾರು ಹಂಗಾಮು ಸಿದ್ಧತೆ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಮುಂದಿನ 2–3 ತಿಂಗಳು ನಮಗೆ ಕ್ಲಿಷ್ಟಕರ ಸಮಯವಾಗಿದ್ದು, ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಮಳೆಗಾಲ ಸಂದರ್ಭದಲ್ಲಿ ಸಹಜವಾಗಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಆರೋಗ್ಯ ಮುನ್ನೆಚ್ಚರಿಕೆ ಕುರಿತು ಜಾಗೃತಿ ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕು’ ಎಂದರು.

ಜಿ.ಆರ್.ಜಿ. ಬಿತ್ತನೆ ಬೀಜ ಸಮರ್ಪಕ ಪೂರೈಸಿ:

ಕೃಷಿ ಇಲಾಖೆಯ ಚರ್ಚೆ ವೇಳೆಯಲ್ಲಿ ಮಾತನಾಡಿದ ಪಂಕಜ್ ಕುಮಾರ್‌ ಪಾಂಡೆ, ‘ಜಿ.ಆರ್.ಜಿ. 152 ತೊಗರಿ ಬೀಜದ ಬಗ್ಗೆ ರೈತರಿಂದ ಹೆಚ್ಚಿನ ಬೇಡಿಕೆಯಿದೆ. ಅದನ್ನು ಸಮರ್ಪಕವಾಗಿ ಪೂರೈಸಬೇಕು. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ಎಲ್ಲಿಯೂ ಕೊರತೆಯಾಗದಂತೆ ಮತ್ತು ರೈತರಿಂದ ದೂರುಗಳು ಬಾರದಂತೆ ನೋಡಿಕೊಳ್ಳಬೇಕು’ ಎಂದರು.

ತೋಟಗಾರಿಕೆ ಉಪ ನಿರ್ದೇಶಕ ಸಂತೋಷ ಇನಾಂದಾರ್ ಮಾತನಾಡಿ, ‘ಇತ್ತೀಚಿನ ಮಳೆಯಿಂದಾಗಿ ಕಳೆದ ಏಪ್ರಿಲ್‌ನಲ್ಲಿ 92.55 ಹೆಕ್ಟೇರ್, ಮೇನಲ್ಲಿ 34.35 ಹೆಕ್ಟೇರ್ ತೋಟಗಾರಿಕೆ ಪ್ರದೇಶ ಹಾನಿಯಾಗಿದೆ. ಇದರಲ್ಲಿ ಅಫಜಲಪುರ, ಕಲಬುರಗಿ, ಆಳಂದ ತಾಲ್ಲೂಕಿನಲ್ಲಿ ಬಾಳೆ, ಪಪ್ಪಾಯಿ ಹೆಚ್ಚು ಹಾನಿಯಾಗಿದೆ. ಈಗಾಗಲೇ ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸಲಾಗಿದೆ. ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಇನ್ನಷ್ಟೇ ಹೋಗಬೇಕಿದೆ’ ಎಂದು ತಿಳಿಸಿದರು.

₹274 ಕೋಟಿ ಪರಿಹಾರ ಜಮೆ:

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿ, ‘ಕಳೆದ ವರ್ಷದ ಬರಗಾಲ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ ₹274 ಕೋಟಿ ಇನ್‌ಪುಟ್‌  ಸಬ್ಸಿಡಿ ನೀಡಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಾಗುವ ಸಂಭಾವ್ಯ ಹಳ್ಳಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಇತ್ತೀಚೆಗೆ ಸಿಡಿಲಿನಿಂದ ಸಾವು ಪ್ರಕರಣ ವರದಿಯಾಗುತ್ತಿರುವ ಕಾರಣ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪೋಸ್ಟರ್ ಅಂಟಿಸುವ ಕಾರ್ಯ ಮಾಡಲಾಗುತ್ತಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಮಾತನಾಡಿ, ನರೇಗಾ ಕಾಮಗಾರಿ ಪ್ರಗತಿ ಮತ್ತು ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಅವರು, ನಗರದಲ್ಲಿನ ಎಲ್ಲಾ ತೆರೆದ ಬಾವಿ, ಚರಂಡಿ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಉಪ ವಿಭಾಗಾಧಿಕಾರಿ ರೂಪಿಂದರ್ ಸಿಂಗ್ ಕೌರ್, ಡಿ.ಎಚ್.ಒ. ಡಾ.ರವಿಕಾಂತ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

Highlights -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT