ಸೋಮವಾರ, ಮಾರ್ಚ್ 1, 2021
19 °C
ರಾಮ ಮಂದಿರ ನಿಧಿ ಸಮರ್ಪಣಾ ಕಾರ್ಯಕ್ಕೆ ಚಾಲನೆ ನೀಡಿದ ಡಾ.ಶರಣಬಸವಪ್ಪ ಅಪ್ಪ

ಕಲಬುರ್ಗಿ: ಮುಕ್ತ ಮನಸ್ಸಿನಿಂದ ದೇಣಿಗೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ದೇಶದ ಘಣತೆಯ ಪ್ರತೀಕವಾದ ರಾಮ ಮಂದಿರ ನಿರ್ಮಾಣಕ್ಕೆ ಜಿಲ್ಲೆಯ ಎಲ್ಲ ಸಮಾಜದ ಜನರೂ ಮುಕ್ತ ಮನಸ್ಸಿನಿಂದ ದೇಣಿಗೆ ನೀಡಬೇಕು’ ಎಂದು ಇಲ್ಲಿನ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ, ರಾಮ ಮಂದಿರ ನಿಧಿ ಸಮರ್ಪಣಾ– ಕರ್ನಾಟಕ ರಾಜ್ಯದ ಮಾರ್ಗದರ್ಶಕ ಮಂಡಳಿ ಮುಖಂಡರೂ ಆದ ಡಾ.ಶರಣಬಸವಪ್ಪ ಅಪ್ಪ ಕರೆ ನೀಡಿದರು.

ಜ. 17ರಂದು ನಡೆಯಲಿರುವ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಕಾರ್ಯಕ್ರಮಕ್ಕೆ ನಗರದಲ್ಲಿ ಶುಕ್ರವಾರ ಚಾಲನೆ ನೀ, ರಸೀದಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಉತ್ತರ ಪ್ರದೇಶದ ಫೈಜಾಬಾದ್‌ ಜಿಲ್ಲೆಯಲ್ಲಿರುವ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬ ನಾಗರಿಕ ಕೈಜೋಡಿಸಬೇಕು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ಅದಕ್ಕಾಗಿ ದೇಶದೆಲ್ಲಡೆ ನಿಧಿ ಸಮರ್ಪಣಾ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮ ಉದ್ಘಾಟಿಸಿದ್ದು ನನಗೆ ಖುಷಿ ತಂದಿದೆ’ ಎಂದರು.

‘ಮಹಾದಾಸೋಹಿ ಶರಣಬಸವೇಶ್ವರರಂತೆಯೇ ರಾಮನ ಜೀವನ ಸಹ ಎಲ್ಲರಿಗೂ ಆದರ್ಶವಾಗಿದೆ. ರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ದೇಶದ ಪ್ರತಿಯೊಬ್ಬರ ಅಭಿಲಾಷೆಯಾಗಿದೆ. ಈಗ ಅದು ಕೈಗೂಡುತ್ತಿರುವುದು ದೇಶವೇ ಹೆಮ್ಮೆ ಪಡುವ ಸಂಗತಿ’ ಎಂದರು.

‘ರಾಮ ಮಂದಿರ ನಿರ್ಮಾಣವು ನಮ್ಮ ಸಂಸ್ಕೃತಿ, ಧರ್ಮದ ಶಾಶ್ವತ ಭಕ್ತಿಯ ಸಂಕೇತವಾಗಿದೆ. ರಾಷ್ಟ್ರದ ಭಾವೈಕ್ಯದ ಪ್ರತೀಕವೂ ಹೌದು. ಭಾರತ ದೇಶದ ಕೋಟ್ಯಂತರ ಭಕ್ತರ ಸಂಕಲ್ಪ ಈಡೇರಿದಂತಾಗಿದೆ. ಈ ಮಂದಿರ ನಿರ್ಮಾಣವಾದ ಮೇಲೆ ಕೇವಲ ಅಯೋಧ್ಯೆ ಅಷ್ಟೆ ಅಲ್ಲ; ದೇಶದ ಎಲ್ಲ ಆಯಾಮಗಳಲ್ಲೂ ಹೊಸ  ಸ್ಫೂರ್ತಿ ಹಾಗೂ ಅವಕಾಶಗಳನ್ನು ತೆರೆದಂತಾಗುತ್ತದೆ. ಪ್ರಪಂಚದಾದಂತ್ಯದ ಜನರು ಮತ್ತು ಭಕ್ತ ಸಮೂಹ ಶ್ರೀರಾಮನ ದರ್ಶನಕ್ಕಾಗಿ ಭಾರತಕ್ಕೆ ಆಗಮಿಸುವುದರಿಂದ ಪವಿತ್ರ ಯಾತ್ರಾ ಸ್ಥಳಗಳ ಮಹತ್ವ ಇನ್ನೂ ಇಮ್ಮಡಿಸುತ್ತದೆ’ ಎಂದು ತಿಳಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ದಾಕ್ಷಾಯಿಣಿ ಅವ್ವ, ಕಾರ್ಯದರ್ಶಿ ಬಸವರಾಜ ದೇಶಮುಖ, ನಿಧಿ ಸಮರ್ಪಣೆಯ ರಾಜ್ಯ ಘಟಕದ ಮಾರ್ಗದರ್ಶಕ ಮಂಡಳಿಯ ಮುಖಂಡರಾದ ಗೊಬ್ಬರವಾಡಿಯ ಸೇವಾಲಾಲ್ ಗುರುಪೀಠದ ಬಳಿರಾಮ ಮಹಾರಾಜರು, ಸಂಸದ ಡಾ.ಉಮೇಶ ಜಾಧವ, ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ.ಪಾಟೀಲ, ಶಶೀಲ್ ನಮೋಶಿ, ಶಾಸಕ ಬಸವರಾಜ ಮತ್ತಿಮೂಡ, ನಿವೃತ್ತ ಆರೋಗ್ಯ ಅಧಿಕಾರಿ ಡಾ.ಮಲ್ಲಿಕಾರ್ಜುನ ಮುಕ್ಕಾ,  ಮಾಜಿ ಶಾಸಕ ಅಮರನಾಥ ಪಾಟೀಲ, ‘ಕುಡಾ’ ಅಧ್ಯಕ್ಷ ದಯಾಘನ ಧಾರವಾಡಕರ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕೃಷ್ಣಾ ಜೋಶಿ, ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಕಾಂಬಳೆ, ಸೇವಾ ಭಾರತಿ ಅಧ್ಯಕ್ಷ ರಮೇಶ ತಿಪ್ಪನೋರ, ಲಿಂಗರಾಜ ಅಪ್ಪ, ಮುಖಂಡರಾದ ರಮೇಶ ಪಾಟೀಲ ಹೇರೂರ, ಡಾ.ಶಿವಶರಣ, ಮಾರ್ಥಾಂಡ ಶಾಸ್ತ್ರೀ, ಪ್ರಲ್ಹಾದ್‌ ಪೂಜಾರಿ, ರವಿ ಲಾತೂರಕರ್, ಚನ್ನವೀರಪ್ಪ ಗುಡ್ಡಾ, ಮಲ್ಲಿಕಾರ್ಜುನ ಅವರಾದಿ, ಶಾಂತಕುಮಾರ ಪಾಟೀಲ, ಮಹಾದೇವ ಪಾತಾಳಿ ಇದ್ದರು.‌

ನಾಳೆ ಮಾತ್ರ ನಿಧಿ ಸಂಗ್ರಹ

ಕಲಬುರ್ಗಿ: ‘ಜ. 17ರಂದು ಮಾತ್ರ ದೇಶದ ಎಲ್ಲೆಡೆ ನಿಧಿ ಸಮರ್ಪಣ ಅಭಿಯಾನ ನಡೆಯಲಿದೆ. ಅಂದು ಸುಮಾರು 5 ಸಾವಿರ ಸ್ವಯಂ ಸೇವಕರು ನಗರ ಮತ್ತು ಜಿಲ್ಲೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಎಲ್ಲ ಮನೆಗಳಿಗೆ ಆಗಮಿಸಿ ನಿಧಿ ಸಂಗ್ರಹಿಸುತ್ತಾರೆ’ ಎಂದು ಆರ್‍ಆರ್‍ಎಸ್ ಪ್ರಮುಖ ಕೃಷ್ಣಾ ಜೋಶಿ ಹೇಳಿದರು.

‘₹ 10ರಿಂದ ಆರಂಭವಾಗಿ ₹ 100 ಹಾಗೂ ₹ 1000ದ ಕೂಪನ್‍ಗಳಿವೆ. ₹ 2,000ಕ್ಕೂ ಹೆಚ್ಚು ಹಣ ನೀಡುವರಿಗೆ ರಸೀದಿ ನೀಡಲಾಗುವುದು. ಅದಕ್ಕೆ ಆದಾಯ ತೆರಿಗೆ ವಿನಾಯತಿ ಇರುತ್ತದೆ. ಸಂಗ್ರಹಗೊಳ್ಳುವ ಹಣದ ಮೊತ್ತ, ಚೆಕ್ ಇತ್ಯಾದಿಗಳನ್ನು 48 ಗಂಟೆಗಳಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಖಾತೆಗೆ ಜಮಾಗೊಳಿಸಬೇಕು ಎಂಬ ಸೂಚನೆ ಇದೆ. ಎಲ್ಲ ಕಾರ್ಯಕರ್ತರು, ರಾಮ ಭಕ್ತರು ಸೇರಿಕೊಂಡು ಮಾಡುತ್ತೇವೆ’ ಎಂದರು.

‘ಅಯೋಧ್ಯೆಯ 2.77 ಎಕರೆ ರಾಮ ಜನ್ಮ ಭೂಮಿ ಇದ್ದು, ಐದು ಗೋಪುರಗಳಿರುವ ಮೂರು ಮಹಡಿಯ ಮಂದಿರ ನಿರ್ಮಾಣವಾಗಲಿದೆ. ಅದರ ಪಕ್ಕದ 67.33 ಎಕರೆಯಲ್ಲಿ ಸತ್ಸಂಗ ಭವನ, ಯಾತ್ರಿ ನಿವಾಸ, ಪ್ರಸಾದ ಕೇಂದ್ರ, ಸಂಶೋಧನೆ...ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು  ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು