ಸೋಮವಾರ, ನವೆಂಬರ್ 18, 2019
20 °C
ಕಲಬುರ್ಗಿ ನಗರದಲ್ಲಿ ಮಿತಿ ಮೀರಿದ ಪ್ಯಾಕೇಜ್ಡ್‌ ನೀರಿನ ದಂಧೆ l ಹಲವು ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನಿಯಮ ಉಲ್ಲಂಘನೆ

ಕುಡಿಯುವ ನೀರು ‘ಶುದ್ಧ’ವಲ್ಲ!

Published:
Updated:
Prajavani

ಕಲಬುರ್ಗಿ: ನೀರಿನಿಂದ ರೋಗ ಬಾರದಿರಲಿ ಎಂದು ಕಾಳಜಿ ವಹಿಸಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ತರಿಸುವ ನೀರೇ ನಮಗೆ ರೋಗ ತರಬಹುದು!

ಇದು ಅರಗಿಸಿಕೊಳ್ಳಲು ಕಷ್ಟವಾದರೂ ಸತ್ಯ. ವಿವಿಧ ಪ್ರಾಧಿಕಾರಗಳಿಂದ ಸೂಕ್ತ ಅನುಮತಿ ಪಡೆದು ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು ಮುಂದಾದರೆ ಕನಿಷ್ಠ ₹ 20 ರಿಂದ ₹ 40 ಲಕ್ಷ ವೆಚ್ಚವಾಗುತ್ತದೆ. ಆ ಬಳಿಕವೂ ನಿತ್ಯ ಆ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲೇಬೇಕು. ಇದೆಲ್ಲ ರಗಳೆಯೇ ಬೇಡವೆಂದು ದಂದೆಗೆ ನಿಂತ ಕೆಲವರು ಕೇವಲ 10x10 ಅಳತೆಯ ಜಾಗದಲ್ಲಿ ಕೇವಲ ₹ 1.50 ಲಕ್ಷ ವೆಚ್ಚದಲ್ಲಿ ಘಟಕ ಸ್ಥಾಪಿಸಿ  ನೀರು ಶುದ್ಧೀಕರಿಸುವ ದಂಧೆ ಆರಂಭಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಜಿಲ್ಲಾಡಳಿತದಿಂದ ಲೈಸೆನ್ಸ್‌ ಪಡೆದು ನೀರು ಶುದ್ಧೀಕರಣ ಮಾಡುವ 43 ಘಟಕಗಳಿದ್ದರೆ, ಅನಧಿಕೃತವಾಗಿ 100ಕ್ಕೂ ಅಧಿಕ ಘಟಕಗಳಿವೆ ಎನ್ನುತ್ತವೆ ಮೂಲಗಳು. 

‘ಅನುಮತಿ ಪಡೆದು, ಕಾಲಕಾಲಕ್ಕೆ ಶುದ್ಧೀಕರಿಸಿದ ನೀರನ್ನು ತಪಾಸಣೆಗೆ ಒಳಪಡಿಸುವ ಘಟಕಗಳು 20 ಲೀಟರ್‌ ನೀರನ್ನು ಶುದ್ಧೀಕರಿಸಲು ₹ 18.50 ವೆಚ್ಚ ಮಾಡುತ್ತವೆ. ನಿತ್ಯ ಎಂಟು ಗಂಟೆ ಮಾತ್ರ ಕೆಲಸ ಮಾಡುತ್ತವೆ. ಆದರೆ, ಅನಧಿಕೃತ ಘಟಕಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತವೆ. 20 ಲೀಟರ್‌ ನೀರನ್ನು ಶುದ್ಧೀಕರಿಸಲು ಕೇವಲ ₹ 1.50 ಖರ್ಚು ಮಾಡುತ್ತವೆ! ಕಡಿಮೆ ಬಂಡವಾಳ ಹೂಡಿ ಹೆಚ್ಚು ಹಣ ಸಂಪಾದಿಸುವ ಮೋಹಕ್ಕೆ ಬಿದ್ದಿರುವ ಕೆಲವರು ಜನರಿಗೆ ಅಶುದ್ಧ ನೀರನ್ನೇ ಶುದ್ಧ ನೀರು ಎಂದು ಪೂರೈಸುತ್ತಿದ್ದಾರೆ’ ಎಂಬುದು ಮೂಲಗಳ ವಿವರಣೆ.

‘ನಾವು ಕುಡಿಯುವ ನೀರಿನಲ್ಲಿ ಮಾನದಂಡಗಳ ಪ್ರಕಾರ ಜಲಜನಕದ ಸಾಂದ್ರತೆ (ಪಿ.ಎಚ್‌. ಪ್ರಮಾಣ) 6.5ನಿಂದ 8.5 ಇರಬೇಕು. ಅಧಿಕೃತ ಲೈಸೆನ್ಸ್‌ ಪಡೆದು ಘಟಕ ಸ್ಥಾಪಿಸಿದವರು ಅನಿವಾರ್ಯವಾಗಿ ಈ ಗುಣಮಟ್ಟವನ್ನು ಕಾಯ್ದು ಕೊಳ್ಳಲೇಬೇಕು. ಇಂತಹ ಘಟಕಗಳ ಬಗ್ಗೆ ನಿಗಾ ವಹಿಸಲು ಸಕ್ಷಮ ಪ್ರಾಧಿಕಾರಗಳೂ ಇರುತ್ತವೆ. ಆದರೆ, ಅನಧಿಕೃತ ಘಟಕಗಳ ಬಗ್ಗೆ ಕೇಳುವವರೇ ಇಲ್ಲ. ಕೆಲವು ಭ್ರಷ್ಟ ಅಧಿಕಾರಿಗಳು ಪ್ರತಿ ತಿಂಗಳೂ ಮಾಮೂಲು ಪಡೆದು ಅನಧಿಕೃತ ಘಟಕಗಳ ಮುಂದುವರಿಕೆಗೆ ಅವಕಾಶ ನೀಡುತ್ತಿದ್ದಾರೆ’ ಎಂದು ಆರೋಪಿಸುತ್ತಾರೆ ಅಧಿಕೃತ ಲೈಸೆನ್ಸ್‌ ಪಡೆದು ಘಟಕ ನಡೆಸುತ್ತಿರುವ ಉದ್ಯಮಿಯೊಬ್ಬರು.

‘ಒಟ್ಟು ಕ್ಯಾನ್‌ಗಳ ಮಾರಾಟ ದಲ್ಲಿ ನಾವು ಉತ್ಪಾದಿಸುವ ಗುಣ ಮಟ್ಟದ ನೀರಿನ ಪಾಲು ಶೇ 20ರಷ್ಟು ಮಾತ್ರ ಇದೆ. ಅನಧಿಕೃತ ಘಟಕಗಳ ನೀರಿನ ಮಾರಾಟದ ಪಾಲೇ ಶೇ 80ರಷ್ಟಿದೆ. ನೀರನ್ನು ಮನೆಗಳಿಗೆ ತಲುಪಿಸುವವರು ಮೊದಲು ನಮ್ಮ ಬಳಿ ₹ 15ರಿಂದ ₹ 20 ಪಡೆದು ಜನರಿಗೆ ₹ 30ರವರೆಗೆ 20 ಲೀಟರ್‌ ಕ್ಯಾನ್‌ ನೀರು ಮಾರುತ್ತಿದ್ದರು. ಅನಧಿಕೃತವಾಗಿ ಘಟಕ ನಡೆಸುವವರು ಅಷ್ಟೇ ಪ್ರಮಾಣದ ನೀರನ್ನು ಬರೀ ₹ 5ಕ್ಕೆ ಕೊಡುತ್ತಿದ್ದಾರೆ. ಹೀಗಾಗಿ ಅಂತಹ ಘಟಕಗಳಿಂದಲೇ ಒಯ್ಯುತ್ತಿದ್ದಾರೆ. ನಾನು ಘಟಕ ಆರಂಭಿಸಲು ಬ್ಯಾಂಕ್‌ನಿಂದ ₹ 20 ಲಕ್ಷ ಸಾಲ ಮಾಡಿದ್ದೇನೆ. ಜನರ ಗುಣಮಟ್ಟದ ನೀರು ಪೂರೈಸಬೇಕು ಎಂಬ ಬದ್ಧತೆಯಿಂದ ಕಡಿಮೆ ಲಾಭಾಂಶ ಇಟ್ಟುಕೊಂಡು ನೀರು ಕೊಡುತ್ತಿದ್ದೇವೆ. ಆದರೆ, ಅನಧಿಕೃತ ಘಟಕಗಳು ರಾಜಾರೋಷವಾಗಿ ನಡೆಯುತ್ತಿರು ವುದರಿಂದ ನಮ್ಮ ಘಟಕಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ‌’ ಎಂದು ಶುದ್ಧ ಕುಡಿಯುವ ನೀರಿನ ಘಟಕದ ಉದ್ಯಮಿ ಯೊಬ್ಬರು ‘‍ಪ್ರಜಾವಾಣಿ’ ಬಳಿ ಅಲವತ್ತುಕೊಂಡರು.

 

ಪ್ರತಿಕ್ರಿಯಿಸಿ (+)