ಬುಧವಾರ, ಜುಲೈ 28, 2021
23 °C
ಸೇಡಂ: ಅಧಿಕಾರಿಗಳ ಮೇಲೆ ಸಾರ್ವಜನಿಕರ ಆರೋಪ

ಸೇಡಂ: ಕಲುಷಿತ ನೀರು ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ (ಕಲಬುರ್ಗಿ): ಪಟ್ಟಣದಲ್ಲಿ ಅನೇಕ ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿರುವುದರಿಂದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೀರಿನ ಸಮಸ್ಯೆ ಕುರಿತು ಸೇಡಂ ಪಟ್ಟಣದ ವಿವಿಧ ಬಡಾವಣೆಯ ಜನರು ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಸೇರಿದಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಕೆಲ ದಿನಗಳ ನಂತರ ನೀರು ಶುದ್ದೀಕರಣ ಘಟಕವನ್ನು ಸ್ವಚ್ಛಗೊಳಿಸಲು 4-5 ದಿನಗಳ ಕಾಲ ತೆಗೆದುಕೊಂಡ ಪುರಸಭೆ ಅಧಿಕಾರಿಗಳು ಸ್ವಚ್ಛಗೊಳಿಸಿ ಪೂರ್ಣಗೊಳಿಸಿದ್ದಾರೆ. ಆದರೂ ಇದುವರೆಗೆ ಶುದ್ಧನೀರು ಪೂರೈಕೆಯಾಗದೆ ಇರುವುದರು ಸಾರ್ವಜನಿಕರ ಕಂಗೆಣ್ಣಿಗೆ ಗುರಿಯಾದಂತಾಗಿದೆ.

ಪಟ್ಟಣದ ವೆಂಕಟೇಶನಗರ, ಕೆಇಬಿ ಕಾಲೊನಿ, ವಿದ್ಯಾನಗರ, ದೊಡ್ಡಅಗಸಿ, ಊಡಗಿ ರಸ್ತೆ, ಬಸವ ನಗರ ನೂಲಾಗಲ್ಲಿ, ಇಂದಿರಾನಗರ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ನೀರು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗುತ್ತಿರುವುದು, ನೀರಿನ ಜೊತೆ ಮಣ್ಣು ಕೂಡಿಕೊಂಡು ಬರುವುದು ಹಾಗೂ ನೀರಲ್ಲಿ ಸಣ್ಣ ಸಣ್ಣ ಹುಳುಗಳು ಹರಿದು ಬರುತ್ತಿವೆ. ಇದರಿಂದಾಗಿ ಪುರಸಭೆಯಿಂದ ಪೂರೈಸಲಾಗುತ್ತಿರುವ ನೀರು ಕುಡಿಯಲು ಯೋಗ್ಯವಲ್ಲದಂತಾಗಿದ್ದು, ಜನ ಫಿಲ್ಟರ್ ನೀರನ್ನು ಖರೀದಿಸಿ ಕುಡಿವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಅನೇಕ ದಿನಗಳಿಂದ ಪರಿಸ್ಥಿತಿ ಹೀಗೆಯೇ ನಡೆಯುತ್ತಿದ್ದು, ಅಧಿಕಾರಿಗಳು ಇಲ್ಲಿಯವರೆಗೂ ಸಮಸ್ಯೆ ಇತ್ಯರ್ಥಪಡಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕೊರೊನಾ ಅಂತಹ ಸಮಯದಲ್ಲಿ ಪುರಸಭೆ ಅತ್ಯಂತ ಜಾಗರೂಕತೆಯಿಂದ ನೀರು ಪೂರೈಕೆ ಮಾಡಬೇಕಾಗಿತ್ತು. ಆದರೆ ಸಮಯಕ್ಕೆ ತಕ್ಕಂತೆ ನಿರ್ವಹಣೆಯ ಕೊರತೆಯ ಕಾರಣದಿಂದಾಗಿ ಜನ ಕಲುಷಿತ ನೀರು ಕುಡಿವ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ ಉಳ್ಳವರು ಫಿಲ್ಟರ್ ನೀರು ಖರೀದಿಸುತ್ತಾರೆ. ಆದರೆ ಹಣ ಇಲ್ಲದವರು ಹಾಗೂ ಬಡವರ ಪರಿಸ್ಥಿತಿ ಹೇಗೆ ಎಂಬ ಪ್ರಶ್ನೆ ಸಾಮಾನ್ಯರದ್ದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.