ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಜೀವ ಜಲ: ಮೇವಿಗಿಂತ ನಿತ್ಯ ನೀರಿನದ್ದೇ ಚಿಂತೆ!

ಜಾನುವಾರುಗಳಿಗೆ ತತ್ವಾರ, ನೀರು ಹೊಂದಿಸಲು ರೈತರ ಪರದಾಟ
Published 25 ಮಾರ್ಚ್ 2024, 6:23 IST
Last Updated 25 ಮಾರ್ಚ್ 2024, 6:23 IST
ಅಕ್ಷರ ಗಾತ್ರ

ಕಲಬುರಗಿ: ರೈತನ ಮಿತ್ರ ಎಂದೇ ಕರೆಯಲಾಗುವ ಜಾನುವಾರುಗಳು ಬರ ಮತ್ತು ರಣ ಬಿಸಿಲಿನಿಂದಾಗಿ ದಿನವೂ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕೆರೆ, ಹೊಂಡ, ಹಳ್ಳಗಳಲ್ಲಿ ಅಳಿದು ಉಳಿದ ಕೆಸರು ನೀರನ್ನೇ ಆಶ್ರಯಿಸುತ್ತಿವೆ.

ನೀರು ಸಿಗದಿದ್ದರೆ ಜನರು ಹೋರಾಟ ಮಾಡಿ, ಸರ್ಕಾರಿ ಕಚೇರಿಗಳ ಕದ ತಟ್ಟಿ, ಪ್ರತಿಭಟನೆ ಮಾಡಿಯಾದರೂ ನೀರು ಪಡೆದು ದಾಹ ತಣಿಸಿಕೊಳ್ಳುತ್ತಾರೆ. ಆದರೆ, ಮೂಕ ಜಾನುವಾರುಗಳು ನೀರಿಗಾಗಿ ಧ್ವನಿ ಎತ್ತಿ ಯಾರನ್ನು ಕೇಳಬೇಕು? ಎಲ್ಲಿ ಹೋರಾಟ ಮಾಡಬೇಕು? ಯಾವ ರಸ್ತೆಗೆ ಇಳಿದು ಪ್ರತಿಭಟನೆ ಮಾಡಬೇಕು? ಆಳಂದ, ಅಫಜಲಪುರ, ಚಿತ್ತಾಪುರ, ಕಾಳಗಿ, ಕಮಲಾಪುರ ಸೇರಿ ಹಲವು ತಾಲ್ಲೂಕುಗಳ ರೈತರು ಜಾನುವಾರುಗಳಿಗೆ ನೀರು ಎಲ್ಲಿಂದ ಹೊಂದಿಸುವುದು ಎಂಬ ಚಿಂತೆಯಲ್ಲಿದ್ದಾರೆ.

ನದಿಗಳು ಬತ್ತಿದ್ದು, ಕೊಳವೆಬಾವಿ ಕೊರೆದರೂ ನೀರು ಬರುತ್ತಿಲ್ಲ. ತೆರೆದ ಬಾವಿ, ಕೆರೆಗಳಲ್ಲಿನ ನೀರು ಕ್ಷೀಣಿಸಿದೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಿತ್ಯ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಸಾಮಾನ್ಯವಾಗಿದೆ. ಇನ್ನು ಜಾನುವಾರುಗಳ ಸ್ಥಿತಿ ಹೇಳತೀರದಾಗಿದೆ. ಜಾನುವಾರುಗಳೇ ನೀರಿಗಾಗಿ ನಿತ್ಯ ಹುಡುಕಿಕೊಂಡು ಹೋಗುವ ಸ್ಥಿತಿ ಎದುರಾಗಿದೆ.

‘ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ, ತೆರೆದ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎನ್ನುತ್ತಾರೆ ಅಧಿಕಾರಿಗಳು. ನೀರಿನ ಬವಣೆಗೆ ಕುಗ್ಗಿದ ರೈತರು, ‘ನಮಗೆ ಕುಡಿಯುವ ನೀರು ಸಮರ್ಪಕವಾಗಿ ಸಿಗುತ್ತಿದ್ದರೆ ನಾವೇಕೆ ಬಿಂದಿಗೆ ಹಿಡಿದುಕೊಂಡು ಊರ ಹೊರಗಿನ ಜಮೀನುಗಳಲ್ಲಿನ ಖಾಸಗಿ ಕೊಳವೆ ಬಾವಿಗಳತ್ತ ಹೋಗುತ್ತಿದ್ದೆವು? ದನಗಳಿಗೆ ಹಳ್ಳದಲ್ಲಿನ ಮಲೀನ ನೀರು ಕುಡಿಸುತ್ತಿದ್ದೆವು’ ಎಂದು ಪ್ರಶ್ನಿಸುತ್ತಾರೆ.

‘ವಾಸ್ತವ ಸ್ಥಿತಿ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಮೇವು ಸದ್ಯಕ್ಕೆ ಇದೆ. ಆದರೆ, ಜಾನುವಾರುಗಳಿಗೆ ನೀರೇ ಸಿಗುತ್ತಿಲ್ಲ. ಕೆರೆ, ಕಟ್ಟೆಗಳಲ್ಲಿನ ನೀರು ದನಗಳೂ ಕುಡಿಯಲು ಯೋಗ್ಯವಾಗಿಲ್ಲ. ಬೆಣ್ಣೆತೊರ ಜಲಾಶಯದ ನೀರೂ ಸಹ ಗಲೀಜಿದ್ದು, ದನಗಳು, ಕುರಿ, ಮೇಕೆಗಳು ಮೂಸಿಯೂ ನೋಡುತ್ತಿಲ್ಲ’ ಎನ್ನುತ್ತಾರೆ ಕಾಳಗಿ ತಾಲ್ಲೂಕಿನ ಗೋಟೂರು ಗ್ರಾಮದ ರೈತ ಸಿದ್ದಣ್ಣ ಜಮಾದಾರ.

‘ರುದ್ರವಾಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಪುಣ್ಯಾತ್ಮರು ಕೆರೆ ಕಟ್ಟಿಸಿದರು. ಮಳೆಯಿಂದ ಕೆರೆಯೇನೋ ಭರ್ತಿಯಾಯಿತು. ಆದರೆ, ಕೆಲವರು ಮೋಟರ್‌ಗಳನ್ನು ಹಚ್ಚಿ ಹೊಲಗಳಿಗೆ ನೀರು ಪಡೆದು ಕೆರೆಯನ್ನು ಖಾಲಿ ಮಾಡಿದ್ದಾರೆ. ಈಗ ಜಾನುವಾರುಗಳು ನೀರಿಲ್ಲದೆ ಪರಿತಪಿಸುತ್ತಿವೆ’ ಎಂದು ಕೃಷಿ ಪರಿಣಿತ ಆದಿನಾಥ ಹಣಮಂತರಾವ ಹೀರಾ ಅಲವತ್ತುಕೊಂಡರು.

‘ನೀರಿನ ಕೊರತೆ ಕಂಡುಬರುವ ಗ್ರಾಮಗಳ ಹೊರಗೆ ಮತ್ತು ಪ್ರಮುಖ ಸ್ಥಳಗಳಲ್ಲಿ ಜಾನುವಾರು ತೊಟ್ಟಿ ನಿರ್ಮಾಣ ಮಾಡಿ, ನೀರು ತುಂಬಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ಕೊಡಲಾಗಿದೆ. ಜಿಲ್ಲಾ ಪಂಚಾಯಿತಿ ಮೂಲಕ ಟ್ಯಾಂಕರ್‌ ಮೂಲಕ ಜಾನುವಾರುಗಳಿಗೂ ನೀರು ಸರಬರಾಜು ಮಾಡುವಂತೆ ನಿರ್ದೇಶನ ಕೊಡಿಸಲಾಗಿದೆ’ ಎನ್ನುತ್ತಾರೆ ಜಿಲ್ಲಾ ಮುಖ್ಯ ಪಶುವೈದ್ಯಾಧಿಕಾರಿ (ತಾಂತ್ರಿಕ) ಡಾ. ಯಲ್ಲಪ್ಪ ಎಸ್.ಇಂಗಳೆ.

‘ಜಾನುವಾರುಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಯಾವುದೇ ಆದೇಶ ಬಂದಿಲ್ಲ. ಆದರೂ ಜಾನುವಾರುಗಳ ಕುಡಿಯುವ ನೀರಿಗೆ ಆದ್ಯತೆ ಕೊಡಲಾಗುತ್ತಿದೆ’ ಎನ್ನುತ್ತಾರೆ ಶ್ರೀನಿವಾಸ ಸರಡಗಿ ಪಿಡಿಒ ಸಂದೀಪ್ ಜಿಂದೆ.

ಪೂರಕ ಮಾಹಿತಿ: ಶಿವಾನಂದ ಹಸರಗುಂಡಗಿ, ಜಗನ್ನಾಥ ಶೇರಿಕಾರ, ಮಲ್ಲಿಕಾರ್ಜುನ ಎಂ.ಎಚ್ ಮತ್ತು ಗುಂಡಪ್ಪ ಕರೆಮನೋರ. 

ಚಿಂಚೋಳಿ ತಾಲ್ಲೂಕಿನ ಭೋಗಾನಿಂಗದಳ್ಳಿಯ ಶಿವಕುಮಾರ ಪೋಚಾಲಿ ಅವರ ಜಮೀನಿನಲ್ಲಿನ ಹಸಿ ಮೇವು ಕಟಾವು ಮಾಡಿ ದಾನ ನೀಡಿದ್ದು
ಚಿಂಚೋಳಿ ತಾಲ್ಲೂಕಿನ ಭೋಗಾನಿಂಗದಳ್ಳಿಯ ಶಿವಕುಮಾರ ಪೋಚಾಲಿ ಅವರ ಜಮೀನಿನಲ್ಲಿನ ಹಸಿ ಮೇವು ಕಟಾವು ಮಾಡಿ ದಾನ ನೀಡಿದ್ದು
ಕಲಬುರಗಿಯ ಆಳಂದ ತಾಲ್ಲೂಕಿನ ರುದ್ರವಾಡಿ ಗ್ರಾಮದಲ್ಲಿ ಬತ್ತಿದ ಕೆರೆ
ಕಲಬುರಗಿಯ ಆಳಂದ ತಾಲ್ಲೂಕಿನ ರುದ್ರವಾಡಿ ಗ್ರಾಮದಲ್ಲಿ ಬತ್ತಿದ ಕೆರೆ
ಕುಡಿಯುವ ನೀರಿನ ಅನಾನುಕೂಲತೆ ತಡೆಗೆ ಖಾಸಗಿ ಮಾಲೀಕತ್ವದಡಿಯ 150 ಕೊಳವೆ ಬಾವಿಗಳನ್ನು ಒಪ್ಪಂದದ ಮೇಲೆ ಪಡೆದು ಅವುಗಳ ಮೂಲಕ ನೀರು ಸರಬರಾಜು ಮಾಡಲಾಗುವುದು
ಬಿ.ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ
ಸದ್ಯ ಮೇವಿನ ಕೊರತೆ ಇಲ್ಲ. ಮುಂದೆ ಕಂಡುಬಂದಲ್ಲಿ ಹೋಬಳಿಗೆ ಒಂದೊಂದು ಮೇವು ಬ್ಯಾಂಕ್‌ ತೆರೆದು ಸರ್ಕಾರವೇ ದರ ನಿಗದಿಪಡಿಸಿ ರೈತರಿಗೆ ಮಾರಾಟ ಮಾಡಲಿದೆ
ಡಾ. ಯಲ್ಲಪ್ಪ ಎಸ್.ಇಂಗಳೆ ಜಿಲ್ಲಾ ಮುಖ್ಯ ಪಶುವೈದ್ಯಾಧಿಕಾರಿ (ತಾಂತ್ರಿಕ)
ಆಳಂದ ತಾಲ್ಲೂಕಿನಲ್ಲಿ ಮೇವಿನ ಕೊರತೆ ಕಾಡುತ್ತಿದೆ. ಕಳೆದ ವರ್ಷ ಜೋಳದ ಕಣಿಕಿಯ ಸೂಡು ₹ 6 ಇತ್ತು. ಈ ವರ್ಷ ಅದು ₹10ರಿಂದ ₹12 ರ ನಡುವೆ ಮಾರಾಟವಾಗಿದೆ
ಆದಿನಾಥ ಹಣಮಂತರಾವ ಹೀರಾ ಕೃಷಿ ಪರಿಣಿತ
ಜೋಳ ಬಿತ್ತನೆ ಹೆಚ್ಚಾಗಿದ್ದರಿಂದ ಕಣಕಿ ಮೇವು ಹೇರಳವಾಗಿದೆ. ಪ್ರಸ್ತುತ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಎದುರಾಗಿಲ್ಲ. ಮೇವಿನ ಬ್ಯಾಂಕ್ ಗೋಶಾಲೆ ಸ್ಥಾಪಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ
ಘಮಾವತಿ ರಾಠೋಡ ಕಾಳಗಿ ತಹಶೀಲ್ದಾರ್
ರೈತರಿಂದ ಮೇವು ದಾನ
ಚಿಂಚೋಳಿ: ಬರ ತಂದಿಟ್ಟ ಸಂಕಷ್ಟವನ್ನು ಅರ್ಥೈಸಿಕೊಂಡ ರೈತರು ತಮಗೆ ಅಗತ್ಯವಾದಷ್ಟು ಇರಿಸಿಕೊಂಡು ಉಳಿಕೆ ಮೇವನ್ನು ಗೋಶಾಲೆಗಳಿಗೆ ದಾನ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದಿತ್ತು. ಹೀಗಾಗಿ ಕುಡಿಯುವ ನೀರಿನ ಅಭಾವ ಇಲ್ಲ. ತೊರೆಗಳಲ್ಲಿ ನೀರು ಜಿನುಗುತ್ತಿದೆ. ಪ್ರಗತಿಪರ ರೈತ ಶಿವಕುಮಾರ ಪೋಚಾಲಿ ಅವರು 2 ಲಾರಿ ಜೋಳದ ಕಣಕಿ ಎರಡು ಟ್ರ್ಯಾಕ್ಟರ್ ತೊಗರಿ ಹೊಟ್ಟು ಅರ್ಧ ಎಕರೆಯಲ್ಲಿ ಬೆಳೆದ ಹಸಿ ಮೇವನ್ನು ಕೋಟನೂರಿನ ಯಲ್ಲಾಲಿಂಗೇಶ್ವರ ಆಶ್ರಮದ ಬೇಮಳಖೇಡಾದ ಗೋಶಾಲೆಗೆ ನೀಡಿದ್ದಾರೆ. ಮತ್ತೊಬ್ಬ ಮುಖಂಡ ಗಂಗಾಧರ ಮಕಾಶಿ ಅವರು 4 ಲಾರಿ ಜೋಳದ ಕಣಕಿಯನ್ನು ಚಿಂಚೋಳಿಯ ರೇಣುಕಾ ಗೋಶಾಲೆಗೆ ದಾನವಾಗಿ ಕೊಟ್ಟಿದ್ದಾರೆ.
ಅಡವಿಯಲ್ಲಿ ಹನಿ ನೀರಿಲ್ಲ
ಚಿತ್ತಾಪುರ: ಬಿಸಿಲಿನ ತಾಪಕ್ಕೆ ಹಳ್ಳಕೊಳ್ಳ ನಾಲಾಗಳು ಬತ್ತಿದ್ದು ಅಡವಿಯಲ್ಲಿ ಜಾನುವಾರುಗಳಿಗೆ ಹನಿ ನೀರು ಇಲ್ಲದಂತಾಗಿದೆ. ‘ಕೃಷಿ ಕೆಲಸಕ್ಕೆಂದು ಎತ್ತುಗಳಿಗೆ ಬೆಳಿಗ್ಗೆ ನೀರು ಕುಡಿಸಿಕೊಂಡು ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಂತರವೇ ನೀರು ಕುಡಿಸುವ ಸ್ಥಿತಿಯಿದೆ. ಬಾವಿಗಳ ನೀರು ತಳ ಮುಟ್ಟಿದೆ. ನಲ್ಲಿಗಳ ನೀರೇ ಜನ ಮತ್ತು ಜಾನುವಾರುಗಳಿಗೆ ಆಸರೆಯಾಗಿದೆ’ ಎನ್ನುತ್ತಾರೆ ರಾಜೋಳಾ ನಿವಾಸಿ ಭೀಮಾಶಂಕರ. ‘ಬರಗಾಲದ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬಿತ್ತನೆ ಮಾಡಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಕಣಕಿ ಲಭ್ಯವಿದೆ. ಮೇವಿನ ಕೊರತೆ ಕಾಡುತ್ತಿಲ್ಲ’ ಎನ್ನುತ್ತಾರೆ ಭಾಗೋಡಿ ರೈತ ದೇವಿಂದ್ರ ಅರಣಕಲ್.
ಮೇವಿನ ಕೊರತೆಗೆ ಎರವಾದ ವಾಣಿಜ್ಯ ಬೆಳೆಗಳು
ಅಫಜಲಪುರ: ಹತ್ತಿ ಕಬ್ಬಿನಂತಹ ವಾಣಿಜ್ಯ ಬೆಳೆಗಳನ್ನು ಬೆನ್ನು ಹತ್ತಿದ್ದರಿಂದ ಪ್ರತಿ ವರ್ಷ ಮೇವಿನ ಸಮಸ್ಯೆ ಸಾಮಾನ್ಯವಾಗಿದೆ. ‘ರೈತರು ಜಾನುವಾರು ಸಾಕಾಣಿಕೆ ಮಾಡಿದರು ಮೇವಿನ ಬೆಳೆಗಳ ಮೊರೆ ಹೋಗುತ್ತಿಲ್ಲ. ಇದರಿಂದ ಮೇವಿನ ದರ ಏರಿಕೆಯಾಗುತ್ತಿದೆ. ಒಂದು ಬಂಡಿ ಜೋಳದ ಕಣಿಕಿಯ ಮೇವು ₹ 3000ಕ್ಕೆ ಮಾರಾಟವಾಗುತ್ತಿದೆ’ ಎನ್ನುತ್ತಾರೆ ಬಳ್ಳೂರಗಿ ರೈತ ತಿಪ್ಪಣ್ಣ ಚಲಗೇರಿ. ‘ಮಳೆ ಕಡಿಮೆಯಾಗಿದ್ದರಿಂದ ಜೋಳ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲಿಲ್ಲ. ಪಶುಸಂಗೋಪನಾ ಇಲಾಖೆ ನೀಡಿದ ಮೇವಿನ ಬೀಜಗಳು ಬೆಳೆಯಲು ಕೊಳೆಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ಮೇವು ಖರೀದಿ ಅನಿವಾರ್ಯವಾಗಿದೆ. ಕೂಡಲೇ ಸರ್ಕಾರ ಸಹಾಯಧನದಲ್ಲಿ ಮೇವು ಮಾರಾಟ ಮಾಡಬೇಕು’ ಎಂದು ಕೋರಿದರು.
ಕ್ಷೀಣಿಸಿದ ನೆರೆ ಜಿಲ್ಲೆಗಳ ಕುರಿಗಾಹಿಗಳು
ಜಿಲ್ಲೆ ಅಡವಿಗೆ ನೆರೆಯ ವಿಜಯಪುರ ಯಾದಗಿರಿ ಬಾಗಲಕೋಟೆ ಸೇರಿದಂತೆ ದೂರದ ಜಿಲ್ಲೆಗಳಿಂದ ಸಾವಿರಾರು ಕುರಿಗಳ ಹಿಂಡಿನೊಂದಿಗೆ ಬರುತ್ತಿದ್ದವರ ಕುರಿಗಾಹಿಗಳ ಸಂಖ್ಯೆ ಬರ ಮತ್ತು ನೀರಿನ ಕೊರತೆಯಿಂದ ಕಡಿಮೆಯಾಗಿದೆ. ‘ಪ್ರತಿ ವರ್ಷ ಸಾವಿರಾರು ಕುರಿ ಹೊಡೆದುಕೊಂಡು ಬರುತ್ತಿದ್ದೆವು. ಆದರೆ ಈ ವರ್ಷ ಎಲ್ಲಿಯೂ ಮೇವಿಲ್ಲ. ಕುರಿಗಳೂ ಒಂದು ಕಡೆ ನಿಲ್ಲುತ್ತಿಲ್ಲ. ಮಳೆ ಇಲ್ಲದೆ ಬೆಳೆಗಳು ಹಾಳಾಗಿ ಹೋಗಿವೆ. ಕುರಿಗಳನ್ನ ಸಾಕುವುದು ದೊಡ್ಡ ಸಮಸ್ಯೆಯಾಗಿದೆ’ ಎನ್ನುತ್ತಾರೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾಗಠಾಣದ ಕುರಿಗಾಹಿ ಬೀರಪ್ಪ ಪೂಜಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT