ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇವರ್ಗಿ | ಬಾಡುತ್ತಿರುವ ಬೆಳೆ; ಕಮರುತ್ತಿದೆ ಫಸಲಿನ ನಿರೀಕ್ಷೆ

Published 7 ಡಿಸೆಂಬರ್ 2023, 4:14 IST
Last Updated 7 ಡಿಸೆಂಬರ್ 2023, 4:14 IST
ಅಕ್ಷರ ಗಾತ್ರ

ಜೇವರ್ಗಿ: ಬೇಸಿಗೆಗೂ ಮುನ್ನವೇ ಬರದ ತೀವ್ರತೆಯು ಜನ ಹಾಗೂ ಜಾನುವಾರುಗಳನ್ನು ಬಾಧಿಸುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಗಳ ಫಸಲಿನ ನಿರೀಕ್ಷೆ ದಿನೇ ದಿನೇ ಕ್ಷೀಣಿಸುತ್ತಿದ್ದು, ಬರಿದಾಗುತ್ತಿರುವ ಜಲಮೂಲಗಳಿಂದ ಜಾನುವಾರುಗಳಿಗೆ ಕುಡಿಯುವ ನೀರು ಎಲ್ಲಿಂದ ತರುವುದು ಎಂಬ ಚಿಂತೆಯೂ ಕಾಡುತ್ತಿದೆ.

ಸಮರ್ಪಕವಾಗಿ ಮುಂಗಾರು ಮಳೆ ಬಾರದ ಕಾರಣ ತೊಗರಿ, ಹತ್ತಿ ಬೆಳೆಗಳು ಶೇ 50ರಷ್ಟು ಹಾನಿಯಾಗಿವೆ. ಇದರಿಂದ ಸಾವಿರಾರು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನಲ್ಲಿ 14,200 ಹೆಕ್ಟೇರ್ ಖುಷ್ಕಿ ಹಾಗೂ 250 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಖುಷ್ಕಿ ಜಮೀನಿನಲ್ಲಿ 8,997 ಹೆಕ್ಟೇರ್, ನೀರಾವರಿ ಕ್ಷೇತ್ರದಲ್ಲಿ 3,850 ಹೆಕ್ಟೇರ್ ಜಮೀನಿನಲ್ಲಿ ಹೈಬ್ರೀಡ್ ಹತ್ತಿ ಬಿತ್ತನೆ ಮಾಡಲಾಗಿತ್ತು. ಅದರಲ್ಲಿ ಅರ್ಧದಷ್ಟು ಬೆಳೆಗಳು ಬರಕ್ಕೆ ತುತ್ತಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯ ಸರ್ಕಾರ ಈವರೆಗೆ ಬೆಳೆಹಾನಿಗೀಡಾದ ರೈತರಿಗೆ ಬೆಳೆ ಪರಿಹಾರ ನೀಡಿಲ್ಲ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೃಷ್ಣಾ ಭಾಗ್ಯಜಲ ನಿಗಮದ ನಾರಾಯಣಪುರ ಏಡದಂಡೆ ಕಾಲುವೆ ಮುಖಾಂತರ ಜೇವರ್ಗಿ ತಾಲ್ಲೂಕಿನ ಜೇವರ್ಗಿ ಶಾಖಾ ಕಾಲುವೆ, ಮುಡಬೂಳ ಶಾಖಾ ಕಾಲುವೆ ಹಾಗೂ ಶಹಾಪುರ ಶಾಖಾ ಕಾಲುವೆಗಳಿಗೆ ನೀರು ಬೀಡದ ಕಾರಣ ಬೆಳೆಗಳು ಒಣಗಿ ಹೋಗಿವೆ’ ಎನ್ನುತ್ತಾರೆ ಜನಿವಾರ ಗ್ರಾಮದ ರೈತ ದೇವಿಂದ್ರ ವಚ್ಚಗೊಂಡ.

‘ಮುಂಗಾರು ತಡವಾಗಿದ್ದರಿಂದ ಬಿತ್ತನೆಯೂ ವಿಳಂಬವಾಗಿತ್ತು. ಮಳೆ ನಿರೀಕ್ಷೆಯಿಂದ ರೈತರು ಹೆಸರು, ಉದ್ದು, ತೊಗರಿ ಬಿತ್ತನೆ ಮಾಡಿದ್ದರು. ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಕುಂಠಿತಗೊಂಡಿವೆ. ಇದರಿಂದ ಇಳುವರಿಯ ಪ್ರಮಾಣ ಕುಸಿತ ಆತಂಕ ಮನೆಮಾಡಿದೆ’ ಎನ್ನುತ್ತಾರೆ ಕಟ್ಟಿಸಂಗಾವಿ ಗ್ರಾಮದ ರೈತ ಮರೆಪ್ಪ ಹಸನಾಪುರ.

ಮಳೆ ಕೊರತೆಯಿಂದ ಹಳ್ಳ ಕೊಳ್ಳಗಳಲ್ಲಿನ ನೀರಿನ ಹರಿಯುವಿಕೆ ಕಡಿಮೆಯಾಗಿದೆ. ನರೇಗಾ ಯೋಜನೆ ಅಡಿಯಲ್ಲಿ ಕೃಷಿ ಕೂಲಿಕಾರ್ಮಿಕರು ಗೂಳೆ ಹೋಗದಂತೆ ತಡೆಯಲು 70ರಿಂದ 80 ಮಾನವ ದಿನಗಳಲ್ಲಿ ಕೂಲಿ ಕೆಲಸ ಮಾಡಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಷ ಹೊಸಮನಿ ತಿಳಿಸಿದರು.

ತಾಲ್ಲೂಕಿನ ಮಾರಡಗಿ ಎಸ್‌.ಎ, ಗಂವಾರ, ಮಾಡಬಳ (ಕೆ), ಜೈನಾಪುರ ತಾಂಡಾ, ಹೊನ್ನಾಳ, ಮದರಿ, ಮಾಯೂರ್, ಕೋಬಾಳ, ಹಿಪ್ಪರಗ ಎಸ್‌ಎನ್, ಬೇಲೂರ್, ಕೋಳಕುರ, ಅಲ್ಲೂರ್, ಮುತ್ತಕೋಡ, ಯಲಗೋಡ, ಮಲಬಾದ್ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರಲಿದೆ.

ತಾಲ್ಲೂಕಿನ ಇಟಗಾ ಗ್ರಾಮದಿಂದ ಹೋತಿನಮಡುವರೆಗೆ 36 ಹಳ್ಳಿಗಳು ಭೀಮಾ ನದಿ ಪಾತ್ರದಲ್ಲಿವೆ.

‘ಭೀಮಾ ನದಿ ಪಾತ್ರದಲ್ಲಿ ಹತ್ತಿ, ತೊಗರಿ, ಕಬ್ಬು, ಕಡಲೆ, ಬಿಳಿಜೋಳ, ಕಬ್ಬು ಬಿತ್ತನೆ ಮಾಡುತ್ತಾರೆ. ಭೀಮಾ ನದಿಯಿಂದ ಜಮೀನಿಗಳಿಗೆ ಪೈಪ್‌ಲೈನ್ ಮೂಲಕ ನೀರು ಹಾಯಿಸುವುದರಿಂದ ಉತ್ತಮ ಇಳುವರಿ ಪಡೆಯುತ್ತಿದ್ದೇವೆ’ ಎಂದು ಹೋತಿನಮಡು ಗ್ರಾಮದ ರೈತ ಲಕ್ಷ್ಮಿಕಾಂತ ಕುಲಕರ್ಣಿ ತಿಳಿಸಿದರು.

‘ಜನ ಜಾನುವಾರುಗಳಿಗೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗದಂತೆ ತಡೆಯಲು ಭೀಮಾ ನದಿಯಲ್ಲಿ ಮರಳಿನ ಚೀಲಗಳನ್ನು ಹಾಕುವ ಮೂಲಕ ನೀರನ್ನು ತಡೆದಿಟ್ಟುಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಬಿತ್ತನೆಯಾದ ಬೆಳೆ ಪೈಕಿ ಬರಗಾಲದಿಂದ ಶೇ 50ರಷ್ಟು ಹಾನಿಯಾಗಿದೆ. ಸರ್ಕಾರದಿಂದ ಪರಿಹಾರಧನ ಬಿಡುಗಡೆ ಮಾಡಿದರೆ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು.
ಅಬ್ದುಲ್ ಮಾಜೀದ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ತಾಲ್ಲೂಕಿನಲ್ಲಿ 91335 ಹೆಕ್ಟೇರ್ ಪ್ರದೇಶದ ಜಮೀನಿನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ 89767 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಪವನಕುಮಾರ, ತಾಂತ್ರಿಕ ಕೃಷಿ ಅಧಿಕಾರಿ
ಜೇವರ್ಗಿಯ ಮಲ್ಲಣ್ಣ ತಳವಾರ ಜಮೀನಿನಲ್ಲಿನ ಹತ್ತಿ ಬೆಳೆ
ಜೇವರ್ಗಿಯ ಮಲ್ಲಣ್ಣ ತಳವಾರ ಜಮೀನಿನಲ್ಲಿನ ಹತ್ತಿ ಬೆಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT