ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ ಲೋಕಸಭಾ ಚುನಾವಣೆ: ಮಾವನ ಸೋಲಿನ ಸೇಡು ತೀರಿಸಿಕೊಂಡ ಅಳಿಯ

ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿ ಸಂಸತ್ತಿಗೆ ಹೊರಟ ರಾಧಾಕೃಷ್ಣ ದೊಡ್ಡಮನಿ
Published 5 ಜೂನ್ 2024, 7:05 IST
Last Updated 5 ಜೂನ್ 2024, 7:05 IST
ಅಕ್ಷರ ಗಾತ್ರ

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಐದು ದಶಕಗಳ ರಾಜಕೀಯ ಜೀವನದಲ್ಲಿ ಮೊದಲ ಬಾರಿ 2019ರಲ್ಲಿ ಉಂಡಿದ್ದ ಸೋಲಿನ ಕಹಿಯನ್ನು, ಐದು ವರ್ಷಗಳ ಬಳಿಕ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಗೆಲ್ಲುವ ಮೂಲಕ ಸೋಲಿನ ಪ್ರತೀಕಾರ ತೀರಿಸಿಕೊಂಡಿದ್ದಾರೆ.

ಮಾವ ಖರ್ಗೆ ಅವರು ರಾಜ್ಯ ಹಾಗೂ ಕೇಂದ್ರದಲ್ಲಿ ಶಾಸಕ, ಸಂಸದ, ಸಚಿವರಾಗಿ ಕೆಲಸ ಮಾಡಿದ್ದನ್ನು ನೇಪಥ್ಯದಲ್ಲಿ ನೋಡಿದ್ದ ರಾಧಾಕೃಷ್ಣ ಅವರು ಇಲ್ಲಿಯವರೆಗೆ ಸಕ್ರಿಯ ರಾಜಕಾರಣಕ್ಕೆ ಬರಲು ಮನಸ್ಸು ಮಾಡಿರಲಿಲ್ಲ. ಬದಲಾಗಿ ಖರ್ಗೆ ಅವರ ಒಡೆತನದಲ್ಲಿರುವ ಶಿಕ್ಷಣ ಸಂಸ್ಥೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್ ಅಚ್ಚರಿಯ ಆಯ್ಕೆಯಾಗಿ ರಾಧಾಕೃಷ್ಣ ಅವರನ್ನು ಕಣಕ್ಕಿಳಿಸಿತು. ಇದನ್ನು ನಿರೀಕ್ಷೆ ಮಾಡದಿದ್ದ ರಾಧಾಕೃಷ್ಣ ಅವರು ಅನಿವಾರ್ಯವಾಗಿ ನಾಮಪತ್ರ ಸಲ್ಲಿಸಿ ಪ್ರಚಾರ ಕಾರ್ಯದಲ್ಲಿ ಇಳಿದಿದ್ದರು.

ಎಐಸಿಸಿ ಅಧ್ಯಕ್ಷರ ತವರಿನಲ್ಲಿ ಪಕ್ಷದ ಅಭ್ಯರ್ಥಿ ಸೋಲಬಾರದು ಎಂಬ ಕಾರ್ಯಕರ್ತರ ಗುರಿ, ಖರ್ಗೆ ಅವರು ತಮ್ಮ ವೈಯಕ್ತಿಕ ವರ್ಚಸ್ಸನ್ನು ಪಣಕ್ಕಿಟ್ಟು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದು ರಾಧಾಕೃಷ್ಣ ದೊಡ್ಡಮನಿ ಅವರ ಗೆಲುವಿಗೆ ಪ್ರಮುಖ ಕಾರಣಗಳು ಎಂದು ವಿಶ್ಲೇಷಿಸಲಾಗುತ್ತಿದೆ.

ಚುನಾವಣೆ ಘೋಷಣೆಯಾದ ಮೊದಲ ದಿನವೇ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಅಭ್ಯರ್ಥಿ ಡಾ. ಉಮೇಶ್ ಜಾಧವ ಪರವಾಗಿ ಬೃಹತ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ನಂತರದ ದಿನಗಳಲ್ಲಿ ಬಿಜೆಪಿ ಸಂಘಟಿತವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿಲ್ಲ ಎನ್ನಲಾಗುತ್ತಿದೆ. ಅಲ್ಲದೇ, ಸಂಸದ ಡಾ. ಉಮೇಶ್ ಜಾಧವ ಅವರು ಲಿಂಗಾಯತ–ಬಂಜಾರ ಸಮುದಾಯದವರು ಹಾಗೂ ಬಿಜೆಪಿಯ ಸಾಂಪ್ರದಾಯಿಕ ಮತದಾರರು ತಮ್ಮನ್ನು ಬೆಂಬಲಿಸಿದರೆ ಗೆಲುವು ಶತಸಿದ್ಧ ಎಂದು ಅತಿಯಾದ ಆತ್ಮವಿಶ್ವಾಸದಲ್ಲಿ ಇದ್ದುದು ಮುಳುವಾಯಿತು.

ಅಲ್ಲದೇ, ಚಿತ್ತಾಪುರ, ಕಮಲಾಪುರ ಸೇರಿದಂತೆ ವಿವಿಧೆಡೆಯಿಂದ ಮುಂಬೈಗೆ ವಲಸೆ ಹೋಗಿದ್ದ ಮತದಾರರು ಈ ಬಾರಿ ಜಿಲ್ಲೆಗೆ ಬಂದು ಮತದಾನ ಮಾಡಲಿಲ್ಲ.

ಕಲಬುರಗಿ ಜಿಲ್ಲೆಯ ಜನರ ದಶಕಗಳ ಬೇಡಿಕೆಯಾಗಿದ್ದ ರೈಲ್ವೆ ವಿಭಾಗೀಯ ಕೇಂದ್ರದ ಮಂಜೂರಾತಿ ಕೊಡಿಸುವ ನಿರೀಕ್ಷೆ ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಹುಸಿಯಾಯಿತು. ಅಲ್ಲದೇ, ಕೆಲ ಸಣ್ಣಪುಟ್ಟ ಯೋಜನೆಗಳನ್ನು ತಂದಿದ್ದು ಬಿಟ್ಟರೆ ಕೇಂದ್ರದಿಂದ ಹೆಚ್ಚಿನ ಅನುದಾನ, ಯೋಜನೆ ತರಲಿಲ್ಲ. ಹೊಸ ರೈಲುಗಳು ಆರಂಭಗೊಳ್ಳಲು ಚುನಾವಣೆ ಬರುವವರೆಗೂ ಕಾಯಬೇಕಾಯಿತಲ್ಲ ಎಂಬ ಜನರ ಆಕ್ರೋಶ ಮತವಾಗಿ ಪರಿವರ್ತನೆಯಾಗಿರಬಹುದು ಎನ್ನಲಾಗುತ್ತಿದೆ.

ಜೇವರ್ಗಿ, ಚಿತ್ತಾಪುರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮೀಣ, ಗುರುಮಠಕಲ್ ಕ್ಷೇತ್ರಗಳಲ್ಲಿ ಹೆಚ್ಚಿನ ಮತಗಳು ಜಾಧವ ಅವರಿಗೆ ಸಿಗಲಿಲ್ಲ. ಅಲ್ಲದೇ, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ 52 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಸಿಕ್ಕಿರುವುದು ಜಾಧವ ಅವರ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿವೆ ಎನ್ನಲಾಗುತ್ತಿದೆ.

Quote - ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ಕೊಟ್ಟಿತ್ತು. ಪಕ್ಷದ ಮುಖಂಡರು ಕಾರ್ಯಕರ್ತರು ಅಹರ್ನಿಶಿ ದುಡಿದು ಗೆಲುವಿನ ದಡ ಸೇರಿಸಿದ್ದಾರೆ. ಅವರಿಗೆ ಚಿರಋಣಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ರಾಧಾಕೃಷ್ಣ ದೊಡ್ಡಮನಿ ನೂತನ ಸಂಸದ

Quote - ಈ ಫಲಿತಾಂಶ ಅನಿರೀಕ್ಷಿತ. ತೀವ್ರ ತುರುಸಿನಿಂದ ಮತ ಎಣಿಕೆ ನಡೆದಿತ್ತಾದರೂ ಕೊನೆಯಲ್ಲಿ ನಾನು ಗೆಲ್ಲುತ್ತೇನೆ ಎಂಬ ಭರವಸೆಯಿತ್ತು. ಮತದಾರರ ತೀರ್ಪನ್ನು ಸಮಭಾವದಿಂದ ಒಪ್ಪಿಕೊಳ್ಳುತ್ತೇನೆ ಡಾ. ಉಮೇಶ್ ಜಾಧವ್ ಬಿಜೆಪಿ ಅಭ್ಯರ್ಥಿ

ನೆರವಾದ ಚಿಂಚನಸೂರ ಗುತ್ತೇದಾರ ಘರ್ ವಾಪಸಿ

ಕೋಲಿ ಸಮುದಾಯದ ಪ್ರಬಲ ನಾಯಕ ಬಾಬುರಾವ ಚಿಂಚನಸೂರ ಹಾಗೂ ಈಡಿಗ ಸಮುದಾಯದ ನಾಯಕ ಅಫಜಲಪುರ ಕ್ಷೇತ್ರದಲ್ಲಿ ವರ್ಚಸ್ಸು ಹೊಂದಿರುವ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ 2019ರಲ್ಲಿ ಡಾ. ಜಾಧವ ಅವರ ಗೆಲುವಿಗೆ ಅನುಕೂಲವಾಗಿತ್ತು. ವಿಧಾನಸಭೆ ಚುನಾವಣೆಗೂ ಮುನ್ನ ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು. ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಮಾಲೀಕಯ್ಯ ಅವರು ಕಾಂಗ್ರೆಸ್‌ಗೆ ಬಂದರು. ಇದರಿಂದಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಮಿಂಚಿನ ಸಂಚಲನ ಉಂಟಾಯಿತು.

ಬಾಬುರಾವ ಚಿಂಚನಸೂರ ಅವರು ಪ್ರತಿ ಸಭೆಗಳಲ್ಲಿ ಕೋಲಿ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಡಾ. ಉಮೇಶ್ ಜಾಧವ ವಿಫಲರಾಗಿದ್ದಾರೆ ಎಂದು ತಮ್ಮ ಎಂದಿನ ಶೈಲಿಯಲ್ಲಿ ಹೇಳುತ್ತಿದ್ದರು. ಅಲ್ಲದೇ ಜಾಧವ ತಮಗೆ ಮೋಸ ಮಾಡಿದ ಎಂದು ಹೇಳುವ ಮೂಲಕ ಕೋಲಿ ಸಮಾಜಕ್ಕೆ ಸ್ಪಷ್ಟ ಸಂದೇಶವನ್ನು ತಲುಪಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಇಬ್ಬರೂ ನಾಯಕರ ಪುನರಾಗಮನ ರಾಧಾಕೃಷ್ಣ ದೊಡ್ಡಮನಿ ಅವರಲ್ಲಿ ಬಲ ತಂದಿತು.

ಕೈ ಕೊಟ್ಟರೆ ಮುಖಂಡರು?

ಬಿಜೆಪಿ ಮುಖಂಡರು ಈ ಬಾರಿ ಮನಃಪೂರ್ವಕವಾಗಿ ಚುನಾವಣೆಯಲ್ಲಿ ಕೆಲಸ ಮಾಡದೇ ಇರುವುದರಿಂದ ಡಾ. ಉಮೇಶ್ ಜಾಧವ ಸೋಲಾಯಿತು ಎಂಬ ಜಿಜ್ಞಾಸೆ ನಡೆಯುತ್ತಿದೆ. 2019ರಲ್ಲಿ ಜಾಧವ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಪಕ್ಷದ ರಾಜ್ಯ ಮುಖಂಡರೇ ಇಲ್ಲಿ ಮೊಕ್ಕಾಂ ಹೂಡಿ ಮತದಾರರನ್ನು ವ್ಯಾಪಕವಾಗಿ ತಲುಪಿದ್ದರು. ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರ ನೇತೃತ್ವದಲ್ಲಿ ಹಲವು ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ ಪ್ರಚಾರ ನಡೆಸಲಾಗಿತ್ತು. ಪೇಜ್ ಪ್ರಮುಖ್‌ರಿಗೆ ಮತ ಹಾಕಿಸುವ ಜವಾಬ್ದಾರಿ ನೀಡಲಾಗಿತ್ತು.

‘ಸಂಪನ್ಮೂಲ’ವನ್ನೂ ಅಪಾರ ಪ್ರಮಾಣದಲ್ಲಿ ವ್ಯಯಿಸಲಾಗಿತ್ತು. ಅಲ್ಲದೇ ಜಿಲ್ಲೆಯ ಪಕ್ಷದ ಮುಖಂಡರು ತಮ್ಮದೇ ಚುನಾವಣೆ ಎಂಬಂತೆ ಕೆಲಸ ಮಾಡಿದ್ದರು. ಆದರೆ ಈ ಬಾರಿ ಅಂತಹ ಉತ್ಸಾಹ ಪಕ್ಷದಲ್ಲಿ ಕಂಡು ಬರಲಿಲ್ಲ. ಅಲ್ಲದೇ ಪಕ್ಷದ ಶಾಸಕರೊಬ್ಬರು ಸೂಕ್ತ ಸಹಕಾರ ನೀಡಲಿಲ್ಲ. ಮಾಜಿ ಶಾಸಕರೂ ತಮ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ಲೀಡ್ ಕೊಡಿಸಲು ಸೂಕ್ತ ಶ್ರಮ ಹಾಕಲಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೆಚ್ಚಿನ ಲೀಡ್ ಬರುತ್ತಿದ್ದ ಜೇವರ್ಗಿಯಲ್ಲಿಯೂ ಈ ಬಾರಿ ಹೇಳಿಕೊಳ್ಳುವಂತಹ ಮುನ್ನಡೆ ಬಿಜೆಪಿಗೆ ಸಿಕ್ಕಿಲ್ಲ.

ಪರಿಣಾಮ ಬೀರದ ಕೋಟನೂರ ಘಟನೆ

ಕಲಬುರಗಿಯ ಕೋಟನೂರು (ಡಿ) ಗ್ರಾಮದಲ್ಲಿ ಜಾಮೀನು ಪಡೆದು ಮನೆಗೆ ಬಂದ ಲಿಂಗಾಯತ ಸಮುದಾಯದ ವ್ಯಕ್ತಿ ಹಾಗೂ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆದ ವಿಚಾರವನ್ನು ಬಿಜೆಪಿ ಮುಖಂಡರು ಕಾಂಗ್ರೆಸ್ ವಿರುದ್ಧ ಪ್ರಬಲ ಅಸ್ತ್ರವನ್ನಾಗಿ ಪ್ರಯೋಗಿಸಿದ್ದರು. ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಬೃಹತ್ ಸಮಾವೇಶವನ್ನೂ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಹ ವೀರಶೈವ ಕಲ್ಯಾಣ ಮಂಟಪದ ಬಳಿ ಸಮಾವೇಶ ನಡೆಸಿ ತಾನು ಲಿಂಗಾಯತ ವಿರೋಧಿಯಲ್ಲ ಎಂದು ಬಿಂಬಿಸಿತ್ತು.  ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಲು ಮಲ್ಲಿಕಾರ್ಜುನ ಖರ್ಗೆ ಪ್ರಿಯಾಂಕ್ ಖರ್ಗೆ ಅವರು ಶ್ರಮಿಸಿಲ್ಲ ಎಂಬ ಆರೋಪವೂ ಪಕ್ಷದ ಅಭ್ಯರ್ಥಿಯ ಗೆಲುವಿನ ನಾಗಾಲೋಟಕ್ಕೆ ತಡೆ ಹಾಕಲು ವಿಫಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT