ಮಂಗಳವಾರ, ನವೆಂಬರ್ 24, 2020
22 °C
ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಶಶೀಲ್‌ ನಮೋಶಿ ಪರ ಪ್ರಚಾರ ನಡೆಸಿದ ಅಶ್ವಥ ನಾರಾಯಣ

ಕಲಬುರ್ಗಿ| ನಾಲ್ಕೂ ವಿಧಾನ ಪರಿಷತ್‌ ಬಿಜೆಪಿಗೆ: ಅಶ್ವಥ ನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಕ್ರಾಂತಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಕಾಳಜಿಪೂರ್ವಕ ಆಡಳಿತ ರಾಜ್ಯದಲ್ಲಿ ನಾಲ್ಕು ವಿಧಾನ ಪರಿಷತ್‌ ಹಾಗೂ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು ತಂದುಕೊಡಲಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಅಶ್ವಥ ನಾರಾಯಣ ಭರವಸೆ ವ್ಯಕ್ತಪಡಿಸಿದರು.

‘ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಎಲ್ಲ ಜಿಲ್ಲೆಗಳಲ್ಲೂ ನಾನು ಪ್ರವಾಸ ಮಾಡಿದ್ದೇನೆ. ಈ ಭಾಗದ 18 ಶಾಸಕರು, 5 ಸಂಸದರು ಸಚಿವರು ನಮ್ಮ ಅಭ್ಯರ್ಥಿ ಶಶೀಲ್‌ ನಮೋಶಿ ಅವರ ಗೆಲುವಿಗೆ ಬೆಂಗಾವಲಾಗಿ ನಿಂತಿದ್ದಾರೆ. ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿರುವ ಅವರು ಈ ಬಾರಿ ಗೆಲ್ಲುವುದು ಸ್ಪಷ್ಟವಾಗಿದೆ’ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪ್ರತಿ 20 ಮತದಾರರಿಗೆ ಒಬ್ಬ ‘ಘಟ ನಾಯಕ’ನನ್ನು ನಾವು ಸಿದ್ಧ ಮಾಡಿದ್ದೇವೆ. ಪ್ರತಿ ಶಿಕ್ಷಣ ಸಂಸ್ಥೆಗೂ ಒಂದು ತಂಡವನ್ನು ಸಿದ್ಧಪಡಿಸಿದ್ದೇವೆ. ಅವರು ಮತದಾರರನ್ನು ಒಲಿಸಿ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಏಕೆ ಬಿಜೆಪಿಗೇ ಕೊಡಬೇಕು ಎಂಬ ಬಗ್ಗೆ ಮನವರಿಕೆ ಮಾಡುತ್ತಾರೆ’ ಎಂದರು.

‘ನಮ್ಮ ಸಮೀಕ್ಷೆಯಲ್ಲಿ ಎ.ಬಿ.ಸಿ ಎಂದು ಮೂರು ಕೆಟಗರಿ ಮಾಡಿದ್ದೇವೆ. ನೂರಕ್ಕೆ ನೂರರಷ್ಟು ಮತ ಹಾಕುವವರು ಎ ಕೆಟಗರಿಯಲ್ಲಿ, ಭಾಗಶಃ ಬಿಜೆಪಿ ಅಭ್ಯರ್ಥಿಗೆ ಹಾಕುವವರು ಬಿ ಕೆಟಗರಿಯಲ್ಲಿ ಹಾಗೂ ಬಿಜೆಪಿ ಬಿಟ್ಟು ಬೇರೆಯವರಿಗೆ ಮತ ಚಲಾಯಿಸಲು ಇಚ್ಚಿಸುವವರನ್ನು ಸಿ ಕೆಟಗರಿ ಎಂದು ಗುರುತಿಸಿದ್ದೇವೆ. ಎ ಕೆಟಗರಿಯಲ್ಲೇ ನಮಗೆ ಈಗಾಗಲೇ ಲೀಡ್‌ ಸಿಕ್ಕಿದೆ. ಆದರೂ, ಬಿ ಮತ್ತು ಸಿ ಕೆಟಗರಿಯ ಮತದಾರರಿಗೂ ಮನವರಿಕೆ ಮಾಡಿದ್ದೇವೆ’ ಎಂದು ವಿವರಿಸಿದರು.‌

‘ರಾಜ್ಯದ ನಾಲ್ಕೂ ಶಿಕ್ಷಕ ಮತಕ್ಷೇತ್ರಗಳು ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳು ಬಿಜೆಪಿ ‍ಪಾಲಾಗುವುದು ನಿಚ್ಚಳವಾಗಿದೆ’ ಎಂದೂ ಅವರು ಭವಿಷ್ಯ ನುಡಿದರು.

ಈಶಾನ್ಯ ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಶಶೀಲ್‌ ನಮೋಶಿ ಮಾತನಾಡಿ, ‘ಹೋದ ಕಡೆಯಲ್ಲೆಲ್ಲ ಮತದಾರರು ನನಗೆ ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ. ಈ ಬಾರಿ ಲಾಕ್‌ಡೌನ್‌ನಿಂದ ಸರ್ಕಾರಕ್ಕೆ ಹೊರೆಯಾದರೂ ಮುಖ್ಯಮಂತ್ರಿಗಳು ನೌಕರರ ಒಂದು ರೂಪಾಯಿ ಸಂಬಳವನ್ನೂ ಕಡಿತಗೊಳಿಸಲಿಲ್ಲ. 2400 ಉಪನ್ಯಾಸಕ ಕಾಯಮಾತಿ, 2600ಕ್ಕೂ ಹೆಚ್ಚು ಜೆಒಸಿ ಶಿಕ್ಷಕರ ನೇಮಕಾತಿ, 1757 ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಿದ್ದು... ಹೀಗೆ ನಮ್ಮ ರಾಜ್ಯ ಸರ್ಕಾರದ ಹಲವು ಶೈಕ್ಷಣಿಕ ಸುಧಾರಣೆಗಳೇ ನಮಗೆ ಶ್ರೀರಕ್ಷೆ ಆಗಿವೆ’ ಎಂದರು.

‘ಈ ಹಿಂದೆ ಡಿ.ಎಚ್‌. ಶಂಕರಮೂರ್ತಿ ಅವರು ಶಿಕ್ಷಣ ಸಚಿವರಾಗಿದ್ದಾಗ ರಾಜ್ಯದಲ್ಲಿ ಕೇವಲ 141 ಪದವಿ ಕಾಲೇಜುಗಳು ಇದ್ದವು. ಆದರೆ, ಶಂಕರಮೂರ್ತಿ ಅವರು ಮತ್ತೆ ಹೊಸದಾಗಿ 204 ಪದವಿ ಕಾಲೇಜುಗಳನ್ನು ಆರಂಭಿಸಿದರು. ಇದರಿಂದ 7000ಕ್ಕೂ ಹೆಚ್ಚು ಉಪನ್ಯಾಸಕರ ನೇಮಕಾತಿ ಸಾಧ್ಯವಾಯಿತು. ಇದೆಲ್ಲವನ್ನು ಕಂಡು, ಶೈಕ್ಷಣಿಕ ಸುಧಾರಣೆಗೆ ಬಿಜೆಪಿಯೇ ಅನಿವಾರ್ಯ ಎಂಬುದು ಮತದಾರರಿಗೆ ಅರಿವಾಗಿದೆ’ ಎಂದೂ ಹೇಳಿದರು.

ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಾಜಿ ಪಾಟೀಲ, ಚಂದು ಪಾಟೀಲ ಇದ್ದರು.

‘ಹಳೆ ಶಿಕ್ಷಣ ಪದ್ಧತಿ ಗುಲಾಮಗಿರಿ ಕಲಿಸಿದೆ’

ಕಲಬುರ್ಗಿ: ‘ಈ ಹಿಂದೆ ದೇಶದಲ್ಲಿ ಇದ್ದ ಶಿಕ್ಷಣ ಪದ್ಧತಿ ಗುಲಾಮಗಿರಿಯನ್ನೇ ಕಲಿಸಿದೆ. ಹಾಗಾಗಿ, ಅದನ್ನು ಕಿತ್ತೊಗೆದು ಸ್ವಾಭಿಮಾನದ ಶಿಕ್ಷಣ ಪದ್ಧತಿಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ’ ಎಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವೆಲ್ಲ ಕಲಿತ ಇತಿಹಾಸದಲ್ಲಿ ಬಹಳಷ್ಟು ಸುಳ್ಳು ಇದೆ. ಕೇವಲ ಗಾಂಧಿ– ನೆಹರೂ ಕುಟುಂಬ ಮಾತ್ರ ಸ್ವಾತಂತ್ರ್ಯಕ್ಕೆ ಹೋರಾಡಿದೆ ಎಂದು ಬಿಂಬಿಸಲಾಗಿದೆ. ಸಾವಿರಾರು ಮಹಾತ್ಮರು ಜೀವ, ಜೀವನ ಕಳೆದುಕೊಂಡು ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅವರೆನ್ನೆಲ್ಲ ಮರೆಮಾಚಲಾಗಿದೆ’ ಎಂದೂ ಕಿಡಿ ಕಾರಿದರು.

‘ಈವರೆಗೆ ದೇಶ ಅನುಸರಿಸಿದ್ದು ಲಾರ್ಡ್‌ ಮೆಕಾಲೆಯ ಶಿಕ್ಷಣ ಪದ್ಧತಿಯನ್ನೇ. ಆದರೆ, ವಿವಿಧ ಭಾಷೆ, ಸಂಸ್ಕೃತಿ, ರಾಜ್ಯಗಳು ಇರುವ ಈ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಸಾಧಿಸುವಂಥ ಶಿಕ್ಷಣ ಬೇಕಿತ್ತು. ಸ್ವಾಭಿಮಾನ, ದೇಶಪ್ರೇಮ ಬೆಳೆಸುವ ಕಲಿಕೆ ಬೇಕಿತ್ತು. ಅದು ಮೋದಿ ಅವರ ಕನಸಾಗಿದೆ’ ಎಂದರು.

ಇದಕ್ಕೆ ದನಿಗೂಡಿಸಿದ ವಿಧಾನ ಪರಿಷತ್‌ ಸದಸ್ಯ ಅಶ್ವಥ ನಾರಾಯಣ, ‘ಮಹಮದ್‌ ಘಜ್ನಿಯು ಈ ದೇಶದ ಮೇಲೆ 17 ಬಾರಿ ದಂಡೆತ್ತಿ ಬಂದ ಎಂದಷ್ಟೇ ನಾವು ಓದಿದ್ದೇವೆ. ಆದರೆ, 17 ಬಾರಿಯೂ ಆತನನ್ನು ಎದುರಿಸಿದವರಾರು? ದೇಶವನ್ನು ಕಾಪಾಡಿದವರು ಮತ್ತೆ ಕಟ್ಟಿದವರು ಯಾರು ಎಂಬ ಬಗ್ಗೆ ಎಲ್ಲಿಯೂ ಬರೆದಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು