ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟರ್ ಸ್ಲಿಪ್ ಹಿಂದುಗಡೆ ಕ್ಯೂಆರ್ ಕೋಡ್

ಮತದಾರರಿಗೆ ತಮ್ಮ ಮತಗಟ್ಟೆ ವಿಳಾಸ ತಿಳಿಯಲು ಸಹಕಾರಿ: ಚುನಾವಣಾ ಆಯೋಗದ ಕ್ರಮ
Published 28 ಏಪ್ರಿಲ್ 2024, 4:38 IST
Last Updated 28 ಏಪ್ರಿಲ್ 2024, 4:38 IST
ಅಕ್ಷರ ಗಾತ್ರ

ಕಲಬುರಗಿ: ಮತದಾನ ಕೇಂದ್ರಗಳು ಬದಲಾಗಿ ಮತದಾರರು ಗೊಂದಲಕ್ಕೀಡಾಗಿ ಕೊನೆಗೆ ಮತದಾನದಿಂದಲೇ ದೂರ ಉಳಿದ ಘಟನೆಗಳು ನಡೆಯುತ್ತಲೇ ಇವೆ. ರಾಜ್ಯದಲ್ಲಿ ಮೊದಲನೇ ಹಂತದ ಚುನಾವಣೆ ಸಂದರ್ಭದಲ್ಲಿಯೂ ಇಂತಹ ಸಂಗತಿಗಳು ಬೆಳಕಿಗೆ ಬಂದಿದ್ದವು.

ಇದನ್ನು ತಪ್ಪಿಸಲು ಜಿಲ್ಲೆಯಲ್ಲಿ ಚುನಾವಣಾಧಿಕಾರಿಗಳು ಮತದಾರರ ಸ್ಲಿಪ್‌ ಹಿಂಭಾಗದಲ್ಲಿ ಮತಗಟ್ಟೆಯ ವಿಳಾಸ ಇರುವ ಕ್ಯೂಆರ್ ಕೋಡ್‌ಗಳನ್ನು ಮುದ್ರಿಸುವ ವ್ಯವಸ್ಥೆ ಮಾಡಿದ್ದಾರೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ಕೂಡಲೇ ಮತಗಟ್ಟೆಯ ವಿಳಾಸ ಕಾಣಿಸಿಕೊಳ್ಳುತ್ತದೆ. ಅದರಂತೆ ಅಲ್ಲಿಗೆ ತೆರಳಿ ಮತದಾನ ಮಾಡಬಹುದಾಗಿದೆ.

ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಜಿಲ್ಲೆಯಲ್ಲಿಯೇ ಹೆಚ್ಚಿನ ಸಂಖ್ಯೆಯ ಮತದಾರರು ಕಲಬುರಗಿ ದಕ್ಷಿಣ ಹಾಗೂ ಉತ್ತರ ಮತಕ್ಷೇತ್ರದಲ್ಲಿದ್ದಾರೆ. ಹೀಗಾಗಿ, ಈ ಎರಡು ಕ್ಷೇತ್ರಗಳಲ್ಲಿ ವಿತರಣೆಯಾಗುವ ವೋಟರ್ ಸ್ಲಿಪ್‌ ಹಿಂಭಾಗದಲ್ಲಿ ಕ್ಯೂಆರ್ ಕೋಡ್ ಮುದ್ರಿಸಿ ಹಂಚಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ಈಗಾಗಲೇ ಶೇ 40ರಷ್ಟು ವೋಟರ್ ಸ್ಲಿಪ್‌ಗಳನ್ನು ನಮ್ಮ ಬಿಎಲ್‌ಒಗಳು ಹಂಚಿಕೆ ಮಾಡಿದ್ದಾರೆ. ಮತದಾರರಿಗೆ ಯಾವುದೇ ಗೊಂದಲವಾಗದ ರೀತಿಯಲ್ಲಿ ಕ್ಯೂಆರ್‌ ಕೋಡ್‌ಗಳಲ್ಲಿ ಮತಗಟ್ಟೆಗಳ ವಿವರ ಇರಲಿದೆ. ಎರಡೂ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಮತಗಟ್ಟೆಗಳನ್ನು ಹುಡುಕಿಕೊಂಡು ಹೋಗಲು ಪರದಾಡಬಾರದು ಎಂಬ ಉದ್ದೇಶದಿಂದ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ನನ್ನ ವೋಟರ್ ಸ್ಲಿಪ್ ಸಹ ಕ್ಯೂಆರ್ ಕೋಡ್‌ನೊಂದಿಗೆ ಮನೆಗೆ ತಲುಪಿದೆ’ ಎಂದರು. 

ವೋಟರ್ ಸ್ಲಿಪ್‌ನಲ್ಲಿ ಮತಗಟ್ಟೆ ವಿಳಾಸದ ಜೊತೆಗೆ ಮತದಾನ ದಿನಾಂಕ, ಮತದಾನದ ಸಮಯವನ್ನೂ ನಮೂದಿಸಲಾಗಿದೆ. ಬಿಸಿಲೇರುವ ಮುನ್ನವೇ ಆದ್ಯತೆಯ ಮೇರೆಗೆ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು ಎನ್ನುತ್ತಾರೆ ಜಿಲ್ಲಾಧಿಕಾರಿ.

ಕಲಬುರಗಿ ಉತ್ತರ ಕ್ಷೇತ್ರದಲ್ಲಿ 3,11,940 ಮತದಾರರಿದ್ದರೆ, ದಕ್ಷಿಣ ಕ್ಷೇತ್ರದಲ್ಲಿ 2,84,601 ಮತದಾರರಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಎರಡು ಕ್ಷೇತ್ರಗಳಲ್ಲಿಯೇ ಹೆಚ್ಚಿನ ಮತದಾರರಿದ್ದಾರೆ. ಮತಗಟ್ಟೆಗಳೂ ಅದಲು ಬದಲಾಗುವ ಸಂಭವ ಇರುವುದರಿಂದ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಮಾಡಲಾಗಿದೆ.

ನಗರ ಪ್ರದೇಶದಲ್ಲಿ ಕಡಿಮೆ ಮತದಾನವಾಗುವ ಸಾಧ್ಯತೆ ಇರುವುದರಿಂದ ಇಲ್ಲಿಯೇ ಹೆಚ್ಚು ಮತದಾರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ. 

‌‘ನಿತ್ಯವೂ ಹಲವು ಕಾರ್ಯಕ್ರಮಗಳನ್ನು ಯೋಜಿಸಲಾಗಿದ್ದು, ಮುಖ್ಯವಾಗಿ ಯುವ ಮತದಾರರನ್ನು ಗುರಿಯಾಗಿಸಿಕೊಂಡು ಪ್ರಚಾರ ನಡೆಸಲಾಗುತ್ತಿದೆ’ ಎಂದರು.

ಮತದಾರರ ಮನೆಗೆ ತಲುಪುತ್ತಿರುವ ವೋಟರ್ ಸ್ಲಿಪ್ ಜೊತೆಗೆ ಕ್ಯೂಆರ್ ಕೋಡ್ ಮುದ್ರಿಸಿರುವುದು
ಮತದಾರರ ಮನೆಗೆ ತಲುಪುತ್ತಿರುವ ವೋಟರ್ ಸ್ಲಿಪ್ ಜೊತೆಗೆ ಕ್ಯೂಆರ್ ಕೋಡ್ ಮುದ್ರಿಸಿರುವುದು

ಮತಗಟ್ಟೆಯ ವಿಳಾಸ ಸಿಗಲಿಲ್ಲ ಎಂಬ ಕಾರಣಕ್ಕೆ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವೋಟರ್ ಸ್ಲಿಪ್ ಹಿಂದೆ ಕ್ಯೂಆರ್ ಕೋಡ್ ನೀಡಲಾಗಿದೆ. ಇದನ್ನು ಬಳಸಿ ಮತಗಟ್ಟೆಗೆ ಬರಬಹುದು

ಫೌಜಿಯಾ ತರನ್ನುಮ್ ಬಿ. ಜಿಲ್ಲಾ ಚುನಾವಣಾಧಿಕಾರಿ

ಮೇ 1ರಂದು ಚುನಾವಣಾ ಸಿಬ್ಬಂದಿ ಮತದಾನ

ಮೇ 7ರಂದು ಮತದಾನ ನಡೆಯಲಿದ್ದು ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಮೇ 1ರಂದೇ ಅಂಚೆ ಮತಪತ್ರಗಳನ್ನು ಚಲಾಯಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದರು. ಅತ್ಯವಶ್ಯಕ ಸೇವೆಗಳಿಗೆ ನಿಯೋಜಿತರಾದ ಸಿಬ್ಬಂದಿಯ ಮತದಾನಕ್ಕೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮತಗಟ್ಟೆಯನ್ನು ತೆರೆಯಲಾಗುವುದು. ಉಳಿದ ಸಿಬ್ಬಂದಿಗೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಚುನಾವಣಾ ತರಬೇತಿ ನಡೆಯುವ ಸ್ಥಳದಲ್ಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT