ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಸಿ ಸಿಮೆಂಟ್ ಕಾರ್ಖಾನೆಯ ಕಿರುಕುಳಕ್ಕೆ ಬೇಸತ್ತು ಎಂಜಿನಿಯರ್ ಆತ್ಮಹತ್ಯೆ

Published 7 ಡಿಸೆಂಬರ್ 2023, 5:46 IST
Last Updated 7 ಡಿಸೆಂಬರ್ 2023, 5:46 IST
ಅಕ್ಷರ ಗಾತ್ರ

ವಾಡಿ (ಕಲಬುರಗಿ ಜಿಲ್ಲೆ): ಸ್ವಯಂ ನಿವೃತ್ತಿಗೆ ಎಸಿಸಿ ಸಿಮೆಂಟ್ ಕಾರ್ಖಾನೆಯ ಆಡಳಿತ ಮಂಡಳಿ ತೀವ್ರ ಒತ್ತಡ ಹಾಕಿ, ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ ಕಾರ್ಖಾನೆಯ ಎಂಜಿನಿಯರ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.

ಅದಾನಿ ಒಡೆತನದ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಾರ್ಖಾನೆಯ ಎಂಜಿನಿಯರ್ ರಮೇಶ್ ಪವಾರ್ (45) ಆತ್ಮಹತ್ಯೆ ಮಾಡಿಕೊಂಡವರು. ಚಿತ್ತಾಪುರ ಮತಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ದಿವಂಗತ ವಾಲ್ಮೀಕಿ ನಾಯಕ ಅವರ ಅಳಿಯ ಸಹ ಆಗಿದ್ದಾರೆ.

ಎಸಿಸಿಯ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಎಸಿಸಿ ಕಾರ್ಖಾನೆಯ ಆಡಳಿತ ಮಂಡಳಿ ಹೇಗೆ ಕಾರಣವಾಗಿದೆ ಎಂದು 7.11 ನಿಮಿಷದ ವಿಡಿಯೊ ಮಾಡಿ, ಡೆತ್ ನೋಟ್ ಸಹ ಬರೆದಿದ್ದಾರೆ.

ಕಳೆದ 26 ವರ್ಷಗಳಿಂದ ಎಸಿಸಿ ಕಾರ್ಖಾನೆಯ ವಾಡಿ ಘಟಕದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೆ. ಕಾರ್ಮಿಕರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿದ್ದು ಆಡಳಿತ ಮಂಡಳಿಗೆ ನುಂಗಲಾರದ ತುತ್ತಾಗಿತ್ತು. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಎಸಿಸಿ ಆಡಳಿತವು ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲು ವಿಆರ್‌‌ಎಸ್ (ಸ್ವಯಂ ನಿವೃತ್ತಿ) ಅಸ್ತ್ರ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸ್ವಯಂ ನಿವೃತ್ತಿ ಘೋಷಿಸಬೇಕು, ಇಲ್ಲದಿದ್ದರೆ ಕೆಲಸದಿಂದ ತೆಗೆದು ಹಾಕಲಾಗುವುದು ಎಂಬ ಒತ್ತಡ ಎಸಿಸಿ ಆಡಳಿತ ಮಂಡಳಿಯಿಂದ ಬರುತ್ತಿತ್ತು. ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹಾಗೂ ನನ್ನ ಸಾವಿಗೆ ಎಸಿಸಿ ಘಟಕ ವ್ಯವಸ್ಥಾಪಕ ಮತ್ತು ಎಚ್‌ಆರ್ ವಿಭಾಗದ ವಿವಿಧ ಅಧಿಕಾರಿಗಳು ಕಾರಣ ಎಂದು ರಮೇಶ್ ಅವರು ಡೆತ್ ನೋಟ್‌ನಲ್ಲಿ ಹೆಸರುಗಳ ಸಮೇತ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೂ ಮುನ್ನ ವಿಡಿಯೊ ಮಾಡುವ ಮೂಲಕ ಎಸಿಸಿ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ನನ್ನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಕ್ಷೇತ್ರದ ಶಾಸಕ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಮನವಿ ಮಾಡಿದ್ದಾರೆ.

ಸ್ಥಳಕ್ಕೆ ವಾಡಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕಾರ್ಖಾನೆಯ ನೂರಾರು ಕಾರ್ಮಿಕರು ಹಾಗೂ ಸ್ಥಳೀಯರು ಜಮಾಯಿಸಿದ್ದಾರೆ. ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾವಿಗೆ ಕಾರಣರಾದ ಕಾರ್ಖಾನೆಯ ಅಧಿಕಾರಿಗಳನ್ನು ಬಂಧಿಸುವವರೆಗೂ ಶವ ಕೆಳಗಿಳಿಸಲು ಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ. ವಾಡಿ ಪಟ್ಟಣದಲ್ಲಿ ಬಿಗುವಿನ ವಾತಾವರಣ ಇದ್ದು, ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT