ಚಿಂಚೋಳಿ: ಪರಿಸರ ಪ್ರವಾಸಿ ತಾಣಗಳಿಂದ ಪ್ರಸಿದ್ಧ ಪಡೆದ ತಾಲ್ಲೂಕಿನ ಪ್ರೇಕ್ಷಣೀಯ ತಾಣಗಳಿಗೆ ಮಳೆಯಿಂದ ಈಗ ಜೀವಕಳೆ ಬಂದಿದೆ.
ಹಣ್ಣೆಲೆ ಉದುರಿ ಬರಡಾಗಿದ್ದ ಕಾಡು ಚಿಗುರೊಡೆದು ಹಸಿರುಡುಗೆತೊಟ್ಟು ಶೋಭಿಸುತ್ತಿದೆ. ಬಿಸಿಲು ನಾಡಿನ ತಂಪನೆಯ ತಾಣವಾದ ತಾಲ್ಲೂಕಿನ ಕುಂಚಾವರಂ ಕಾಡಿನ ವನ್ಯಜೀವಿ ಧಾಮದಲ್ಲಿನ ಪ್ರವಾಸಿ ತಣಗಳು ಪ್ರವಾಸಿಗರನ್ನು ಸೆಳೆಯುತ್ತಿವೆ.
ಜೂನ್ ತಿಂಗಳಲ್ಲಿ ಕಡಿಮೆ ಮಳೆ ಆಗಿದ್ದರಿಂದ ಇದ್ದು ಇಲ್ಲದಂತೆ ಮಿಂಚಿ ಮರೆಯಾಗುತ್ತಿದ್ದ ಜಲಧಾರೆಗಳು ಜುಲೈನಲ್ಲಿ ಸುರಿದ ನಿರಂತರ ಮಳೆಯಿಂದ ಈಗ ಜೀವ ಪಡೆದುಕೊಂಡು ಭೋರ್ಗರೆಯುತ್ತಿವೆ.
ತಾಲ್ಲೂಕಿನ ಎತ್ತಿಪೋತೆ ಹಾಗೂ ಮಾಣಿಕಪುರ ಜಲಪಾತ ಈಗ ಪ್ರವಾಸಿಗರ ಕಣ್ಮನ ತಣಿಸುತ್ತಿವೆ. ಇನ್ನಷ್ಟು ಮಳೆ ಸುರಿದರೆ ಜಲಪಾತಗಳು ಇನ್ನಷ್ಟು ಮೈದುಂಬಿ ಭೋರ್ಗರೆಯಲಿವೆ. ಜಲಪಾತ ಭೋರ್ಗರೆದಂತೆ ಚದ್ರಂಪಳ್ಳಿ ಜಲಾಶಯಕ್ಕೆ 1 ಮೀಟರ್‌ಗೂ ಅಧಿಕ ನೀರು ಸಂಗ್ರಹವಾಗಿದೆ.
ನೆಲವೆಲ್ಲ ಹಸಿರಾಗಿ ಕಾಡು ಮೈದುಂಬಿಕೊಂಡಿದೆ. ಎಲ್ಲೆಡೆ ಹಸಿರ ರಾಶಿ ಕಣ್ಣಿಗೆ ಹಬ್ಬ ಉಂಟು ಮಾಡಿದರೆ ಮನಸ್ಸಿಗೆ ಮುದ ನೀಡಲಿದೆ.
ಇಲ್ಲಿನ ಚಂದ್ರಂಪಳ್ಳಿ ಜಲಾಶಯಕ್ಕೆ ಜೂನ್ ತಿಂಗಳಿನಿಂದಲೇ ಪ್ರವಾಸಿಗರು ಬರುತ್ತಿದ್ದಾರೆ. ಮಳೆಯಲ್ಲೂ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಈಚೆಗೆ ಪ್ರವಾಸೋದ್ಯಮ ಸಚಿವ ಸಿಪಿ ಯೋಗೀಶ್ವರ್ ಅವರು ಭೇಟಿ ನೀಡಿ ಎತ್ತಿಪೋತೆ ಹಾಗೂ ತಾಲ್ಲೂಕಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರಥಮ ಹಂತದಲ್ಲಿ ₹ 2 ಕೋಟಿ ಮಂಜೂರು ಮಾಡಿದ್ದರು. ಹೆಚ್ಚಿನ ಅನುದಾನ ನೀಡುವ ಆಶ್ವಾಸನೆ ಸಹ ನೀಡಿದ್ದರು.
ಎತ್ತಿಪೋತೆಯಲ್ಲಿ ನೆರೆಯ ತೆಲಂಗಾಣದ ಕೆಲವರು ಪ್ರವಾಸಿಗರ ವಾಹನಗಳಿಂದ ಗ್ರಾಮ ಪಂಚಾಯಿತಿ ಹೆಸರಲ್ಲಿ ತೆರಿಗೆ ವಸೂಲು ಮಾಡುತ್ತಿದ್ದಾರೆ. ಕರ್ನಾಟಕ ನೆಲದಲ್ಲಿ ನೆರೆಯ ತೆಲಂಗಾಣದವರಿಗೆ ಹಣ ವಸೂಲಿಗೆ ಅವಕಾಶ ನೀಡಬಾರದು ಎಂದು ಕನ್ನಡಪರ ಸಂಘಟನೆ ಮುಖಂಡ ಸುರೇಶ ಬಂಡಿ ದೂರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.