ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟನ್ ಕಬ್ಬಿಗೆ ₹3,600 ನಿಗದಿ ಮಾಡಿ’

ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ, ಕಬ್ಬು ಬೆಳೆಗಾರರ ಸಂಘದಿಂದ ಪಾದಯಾತ್ರೆ
Last Updated 14 ನವೆಂಬರ್ 2020, 4:21 IST
ಅಕ್ಷರ ಗಾತ್ರ

ಅಫಜಲಪುರ: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಘಟಕ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ತಾಲ್ಲೂಕು ಘಟಕದವರು ಶುಕ್ರವಾರ ಇಂಚಗೇರಿ ಗ್ರಾಮದಿಂದ ರೇಣುಕಾ ಸಕ್ಕರೆ ಕಾರ್ಖಾನೆಯವರೆಗೆ ಪಾದಯಾತ್ರೆ ಮಾಡಿ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಮಾತನಾಡಿ, ಡಾ.ಸ್ವಾಮಿನಾಥನ್ ವರದಿಯಂತೆ ಪ್ರತಿ ಟನ್‌ ಕಬ್ಬಿಗೆ ₹ 3,600 ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ಇಂಚಗೇರಿ ಗ್ರಾಮದ ರೈತ ಶಿವಾನಂದ ಯರಗಲ್ ಕುಟುಂಬಕ್ಕೆ ಸರ್ಕಾರ ₹ 20 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಕ್ಕರೆ ಕಾರ್ಖಾನೆಯಲ್ಲಿ ನಡೆಯು ತ್ತಿರುವ ತೂಕ ಮೋಸ ತಡೆಯಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮಿತಿ ರಚನೆ ಮಾಡಬೇಕು. ರೈತರಿಂದ ಕಬ್ಬು ಖರೀದಿಸಿದ ಸಕ್ಕರೆ ಕಾರ್ಖಾನೆಗಳು ಪ್ರತಿಟನ್ ಕಬ್ಬಿಗೆ ಒಂದು ಕೆ.ಜಿ ಸಕ್ಕರೆಯನ್ನು ರಿಯಾಯಿತಿ ದರದಲ್ಲಿ ನೀಡಬೇಕು. ಎಲ್ಲಾ ಬೇಡಿಕೆಗಳನ್ನು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಒಂದು ವಾರದಲ್ಲಿ ಬಗೆ ಹರಿಸಬೇಕು. ಇಲ್ಲದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತದೆ ಎಂದು ಎಚ್ಚರಿಸಿದರು.

ರೈತ ಮುಖಂಡರಾದ ಅಮೃತರಾವ್ ಪಾಟೀಲ ಹಾಗೂ ದಸಂಸ ಸಂಚಾಲಕರಾದ, ರಾಜು ಅರಕೇರಾ, ಅರ್ಜುನ ಕುಂಬಾರ, ಭೀಮರಾವಗೌರ, ರಾಘವೇಂದ್ರ ರಾಠೋಡ ಮಾತನಾಡಿ, ಸಕ್ಕರೆ ಕಾರ್ಖಾನೆಯವರು ಸರತಿ ಸಾಲಿನಂತೆ ಕಬ್ಬು ಕಟಾವು ಮಾಡಬೇಕು. ಪ್ರವಾಹ ಪೀಡಿತ ಪ್ರದೇಶದ ಕಬ್ಬಿಗೆ ಮೊದಲ ಆದ್ಯತೆ ನೀಡಬೇಕು.‌ ಕಬ್ಬು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರೇ ನೀಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಕಬ್ಬು ನಾಟಿ ಮತ್ತು ಕಟಾವು ಮಾಡಲು ನರೇಗಾ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಎಕರೆಗೆ ಕನಿಷ್ಠ ₹ 10 ಸಾವಿರ ನೀಡಲು ಆದೇಶ ಮಾಡಬೇಕು. ರೇಣುಕಾ ಸಕ್ಕರೆ ಕಾರ್ಖಾನೆಯವರು ಪ್ರಸ್ತುತ ವರ್ಷ ಕಬ್ಬಿಗೆ ಎಷ್ಟು ನೀಡುತ್ತಾರೆ, ಸಾಗಾಣಿಕೆ ಮತ್ತು ಕಟಾವು ವೆಚ್ಚ ಎಷ್ಟು ಕಡಿತ ಮಾಡಿಕೊಳ್ಳುತ್ತಾರೆ ಎಂದು ಲಿಖಿತವಾಗಿ ಬರೆದುಕೊಡಬೇಕು ಎಂದು ಅವರು ತಿಳಿಸಿದರು.

ನಂತರ ರೇಣುಕಾ ಸಕ್ಕರೆ ಕಾರ್ಖಾನೆ ಜನರಲ್ ಮ್ಯಾನೇಜರ್ ಸಂಗಮನಾಥ ಜಮಾದಾರ ಮಾತನಾಡಿ, ಪ್ರತಿ ಟನ್ ಕಬ್ಬಿಗೆ ಎಷ್ಟು ದರ ನಿಗದಿ ಮಾಡಬೇಕು ಎಂಬುದನ್ನು ಕಾರ್ಖಾನೆಯ ಬೋರ್ಡ್ ಮೀಟಿಂಗ್‌ನಲ್ಲಿ ನಿರ್ಣಯ ಮಾಡಿಕೊಂಡು ತಿಳಿಸುವುದಾಗಿ ಭರವಸೆ ನೀಡಿದರು. ‌

ತಹಶೀಲ್ದಾರ್ ಗಾಳೆಪ್ಪ ಮಾತನಾಡಿ, ರೈತರ ಕಬ್ಬಿಗೆ ತೂಕ ಮತ್ತು ಅಳತೆಯಲ್ಲಿ ಆಗುತ್ತಿರುವ ಮೋಸವನ್ನು ಕಂಡು ಹಿಡಿಯಲು ಅಧಿಕಾರಿಗಳ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.

ರೈತ ಮುಖಂಡರಾದ ಸಿದ್ದರಾಮ ದಣ್ಣೂರ, ಅರ್ಜುನ ಕುಂಬಾರ, ಸಾಗರ ರಾಠೋಡ, ಗುರು ಚಾಂದಕೋಟೆ, ಶಿವರಾಯ ದಣ್ಣೂರ, ಯಲ್ಲಪ್ಪ ಗುಡ್ಡೇವಾಡಿ, ಶರಣಗೌಡ, ಸಿದ್ದಣಗೌಡ ಪಾಟೀಲ ಮಾಳು ದೊಡ್ಡಮನಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT